ಚಾಮರಾಜನಗರ : ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಎರಡನೇ ದಿನವಾದ ಇಂದು ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು.
ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿ, ಜಾನುವಾರುಗಳಿಗೆ ಮೇವಿನ ಕೊರತೆ, ವಿಬಿ-ಜಿ ರಾಮ್-ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ ಕೈಗೊಂಡಿರುವ ಕಾಮಗಾರಿಯನ್ನು ಖುದ್ದು ವೀಕ್ಷಿಸಿ, ರೈತರ ಕಷ್ಟವನ್ನು ಆಲಿಸಿದರು.
ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರ ಜಮೀನಿನಲ್ಲಿ ಬರ ಪರಿಶೀಲನೆಯ ವೇಳೆ ತಾಲ್ಲೂಕಿನಲ್ಲಿ ಮೇವಿನ ಕೊರತೆಯ ಇರುವ ವಿಚಾರವನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ತಾಲ್ಲೂಕಿನಲ್ಲಿರುವ ಮೇವಿನ ಸಂಗ್ರಹದ ಬಗ್ಗೆ ಡಿಸಿಎಂ ಮಾಹಿತಿ ಕೇಳಿದರು. ಸದ್ಯ 16 ವಾರಗಳಿಗಾಗುವಷ್ಟು ಮೇವಿನ ಸಂಗ್ರಹ ತಾಲ್ಲೂಕಿನಲ್ಲಿರುವುದಾಗಿ ಹೇಳಿದರು. ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿಗಾ ವಹಿಸಲು ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಬರ ವೀಕ್ಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತೀವ್ರವಾಗಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಮತ್ತು ಈ ಭಾಗದಲ್ಲಿ ಜನಪ್ರಿಯವಾಗಿರುವ ನಂಜನಗೂಡು ಬಾಳೆಯ ಬೆಳೆ ಕೂಡ ಮಳೆ ಕೊರತೆಯಿಂದಾಗಿ ಒಣಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಬೇರೆ ಭಾಗಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಬರದಿಂದ ತೀವ್ರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. ಕೆಲವು ರೈತರು ಮಾತ್ರ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ಇನ್ನು ಹಲವು ರೈತರು ಯಾವುದೇ ರೀತಿಯ ವಿಮೆಯನ್ನು ಹೊಂದಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳೆಹಾನಿ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೂಡ ಗದಗ ಜಿಲ್ಲೆಯ ಬರ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡ ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಬರ ಪರಿಶೀಲನೆ ನಡೆಸಲಿದ್ದೇನೆ. ಪರಿಸ್ಥಿತಿಯನ್ನು ಅವಲೋಕಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಭೀಕರ ಬರಗಾಲದ ಎದುರಾಗಿದೆ. ಈ ಹಿನ್ನೆಲೆ 15ನೇ ತಾರೀಕಿನವರೆಗೆ ಬರ ವೀಕ್ಷಣೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಕಳೆದ ವರ್ಷ ಬರದಿಂದ ರಾಜ್ಯ 39,000 ಕೋಟಿ ರೂಪಾಯಿಗಳಷ್ಟು ಬೆಳೆಹಾನಿಯನ್ನು ಅನುಭವಿಸಿತ್ತು. ಆಗ ನಾವು 18,000 ಕೋಟಿ ರೂಪಾಯಿಗಳಷ್ಟು ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ. ಕೊನೆಗೆ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯ್ತು. ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದ ನಂತರ ಕೇಂದ್ರ ಕೇವಲ 3,500 ಕೋಟಿ ರೂಪಾಯಿಗಳ ಅನುದಾನ ನೀಡಿತ್ತು. ಈ ಬಾರಿ ಕೂಡ ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದು ಸರ್ಕಾರ ಸಲ್ಲಿಸುವ ವರದಿಗೆ ಅನುಗುಣವಾಗಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್, ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಶ್ರೀರೂಪಾ ಮುಂತಾದವರು ಉಪಸ್ಥಿತರಿದ್ದರು.
