ಬೆಂಗಳೂರು:ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಈ ಹಿಂದೆ ಘೋಷಿಸಿದ್ದ ಅನುದಾನ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನ ಹಂಚಿಕೆಯ ಪಾಲನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀತಿ ಆಯೋಗಕ್ಕೆ ಮನವಿ ಮಾಡಿದರು.
ನೀತಿ ಆಯೋಗದ ಉಪಾಧ್ಯಕ್ಷರಾದ ಡಾ.ಅಶೋಕ್ ಕುಮಾರ್ ಲಾಹಿರಿ ಅವರೊಂದಿಗೆ ಶಿವಕುಮಾರ್ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಸಿ ಮಾತನಾಡಿದರು.
“ದೇಶದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆಯಿದೆ. ಬಹಳ ದಿನಗಳ ಬಳಿಕ ನೀತಿ ಆಯೋಗದೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುವ ಅವಕಾಶ ಲಭಿಸಿದೆ. ನೀತಿ ಆಯೋಗ ರಾಜ್ಯಕ್ಕೆ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು” ಎಂದು ಮನವಿ ಮಾಡಿದರು.
“ದೇಶ ಕರ್ನಾಟಕದ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದೆ. ಪ್ರಧಾನಿ ಅವರು ಸಹ ತಮ್ಮ ಮಾತಿನಲ್ಲಿ ಇದನ್ನು ತಿಳಿಸಿದ್ದಾರೆ. ನೀತಿ ಆಯೋಗ ಎರಡನೇ ಬೆಂಗಳೂರು ಸ್ಥಾಪಿಸುವ ಬಗ್ಗೆ ಸಲಹೆ ನೀಡಿದ್ದಾರೆ. ನೀತಿ ಆಯೋಗದ ನಿರೀಕ್ಷೆಯಂತೆ ಸಮರ್ಪಕವಾದ ಯೋಜನೆ ರೂಪಿಸಲಾಗುವುದು. ಬೇರೆ ರಾಜ್ಯಗಳು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಲಾಗುವುದು. ದೇಶದ ಅಭಿವೃದ್ಧಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬ ಬಗ್ಗೆ ವ್ಯಾಪಕವಾದ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ನೀತಿ ಆಯೋಗ ನೀಡಿರುವ ಎಲ್ಲಾ ಸಲಹೆಗಳನ್ನು ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು.
“ಇತ್ತೀಚಿಗೆ ದೇಶದ ಗೃಹ ಸಚಿವರೊಂದಿಗೆ ಚರ್ಚೆ ವೇಳೆ, ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿವೆ. ಆದರೆ ಉತ್ತರದ ರಾಜ್ಯಗಳು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ. ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು ಅನುದಾನದಲ್ಲಿ ಪಾಲನ್ನು ನಿಗದಿಪಡಿಸುವ ಮೂಲಕ ದಕ್ಷಿಣದ ರಾಜ್ಯಗಳನ್ನು ಶಿಕ್ಷಿಸುವ ಪರಿಸ್ಥಿತಿ ಬರಬಾರದು ಎಂದು ಮನವಿ ಮಾಡಿದ್ದೇನೆ” ಎಂದರು.
“ವಿಶ್ವದ ನಾಯಕರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ದೆಹಲಿ ಬದಲು ಮೊದಲು ಬೆಂಗಳೂರಿಗೆ ಭೇಟಿ ನೀಡಲು ಬಯಸುತ್ತಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಈ ಮಾತನ್ನು ನಾನು ಇತ್ತೀಚಿಗೆ ಪ್ರಧಾನಿಯವರೊಂದಿಗೆ ಹಂಚಿಕೊಂಡಿದ್ದೇನೆ” ಎಂದರು.
“ಕರ್ನಾಟಕ ರಾಜ್ಯ ಜಿಡಿಪಿ, ತಲಾದಾಯ, ಮಾನವ ಸಂಪನ್ಮೂಲ ಸೂಚ್ಯಂಕ, ತಾಂತ್ರಿಕತೆ ಮತ್ತು ಆವಿಷ್ಕಾರ, ನೇರ ವಿದೇಶಿ ಬಂಡವಾಳ ಹೂಡಿಕೆ, ರಫ್ತು, ಸ್ಟಾರ್ಟ್ ಅಪ್, ಮಾಹಿತಿ ತಂತ್ರಜ್ಞಾನ ಸೇವೆ ಸೂಚ್ಯಂಕಗಳಲ್ಲಿ ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ದೇಶದಲ್ಲಿಯೇ ಅತ್ಯಂತ ಗುಣಮಟ್ಟದ ಮಾನವ ಸಂಪನ್ಮೂಲ ಕರ್ನಾಟಕದಲ್ಲಿದೆ. ಕರ್ನಾಟಕ ಪ್ರತಿ ವರ್ಷ 1.6 ಲಕ್ಷ ಇಂಜಿನಿಯರ್ ಗಳು ಮತ್ತು ಸುಮಾರು 13 ಸಾವಿರ ವೈದ್ಯರನ್ನು ರೂಪಿಸುತ್ತಿದೆ. 26 ಲಕ್ಷ ಐಟಿ ವೃತ್ತಿಪರರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನ ಜನಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಎಲ್ಲಾ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಎಲ್ಲಾ ಅಂಶಗಳು ಬೆಂಗಳೂರಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಬೆಂಗಳೂರಿನ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿದ್ದು, ಅನುಷ್ಠಾನದ ಹಂತದಲ್ಲಿವೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಕೃಷಿ ಕ್ಷೇತ್ರ ಸಹ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ರಾಜಸ್ಥಾನದ ಬಳಿಕ ಅತಿ ಹೆಚ್ಚು ಒಣ ಭೂಮಿ ಕರ್ನಾಟಕದಲ್ಲಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವನ್ನು ನೀತಿ ಆಯೋಗ ವಿಶೇಷವಾಗಿ ಪರಿಗಣಿಸುವ ಅಗತ್ಯವಿದೆ” ಎಂದು ಅವರು ಹೇಳಿದರು.
“ನಾವು ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ ರೂ.50 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಒದಗಿಸುತ್ತಿದ್ದೇವೆ. ನಮ್ಮ ರೈತರಿಗೆ ಉಚಿತ ವಿದ್ಯುತ್ ಸಬ್ಸಿಡಿ ಒದಗಿಸಲು ಪ್ರತಿ ವರ್ಷ 20 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಗುರಿಯಾಗಿದೆ” ಎಂದರು.
“ಸರ್ಕಾರದ ಎಲ್ಲಾ ಸೇವೆಗಳನ್ನು ನಾಗರಿಕರಿಗೆ ಸಮರ್ಪಕವಾಗಿ ಒದಗಿಸಲು ಪ್ರಜಾಸೇವೆ ಎಂಬ ಹೊಸ ಇಲಾಖೆಯನ್ನು ಆರಂಭಿಸಿದ್ದೇವೆ. ಸರ್ಕಾರದ ಯೋಜನೆಗಳು ಎಲ್ಲಾ ಜನರಿಗೆ ದೊರಕಬೇಕು, ಸೇವೆಗಳನ್ನು ಸುಲಭವಾಗಿ ಜನರು ಪಡೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಜಾಸೇವೆ ಇಲಾಖೆಯನ್ನು ಪ್ರಾರಂಭಿಸಿದ್ದೇವೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ ನೆರವಾಗಲು ಪ್ರತ್ಯೇಕವಾದ ವಿದೇಶಿ ಬಂಡವಾಳ ಹೂಡಿಕೆ ಇಲಾಖೆಯನ್ನು ಸ್ಥಾಪಿಸಲಾಗುವುದು” ಎಂದು ಹೇಳಿದರು.
“ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ರೂಪಿಸಿದ್ದೇವೆ. ಇದಕ್ಕಾಗಿ ಕರಾವಳಿ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗುವುದು” ಎಂದರು.
“ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಭೂಮಿ ಗ್ಯಾರಂಟಿ ಯೋಜನೆಯನ್ನು ನಾವು ಜಾರಿಗೊಳಿಸಿದ್ದೇವೆ. ನಾವು ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಪಾತ್ರವನ್ನು ವಹಿಸಿದ್ದು, ಈ ಎಲ್ಲಾ ಕಾರ್ಯಗಳಿಗೆ, ಯೋಜನೆಗಳ ಅನುಷ್ಠಾನಕ್ಕೆ ನೀತಿ ಆಯೋಗ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು” ಎಂದು ಮನವಿ ಮಾಡಿದರು.
“2025-26 ನೇ ಸಾಲಿನಲ್ಲಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನ (ಜಿಎಸ್ ಡಿಪಿ) ರೂ. 32.81 ಲಕ್ಷ ಕೋಟಿ ಆಗಿದ್ದು, ಶೇ.8.1 ರಷ್ಟು ಜಿಎಸ್ ಡಿಪಿ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಇದರಲ್ಲಿ ಸೇವಾ ವಲಯ ಶೇ.70, ಕೈಗಾರಿಕೆ ಶೇ.19 ಹಾಗೂ ಕೃಷಿ ಶೇ.11 ಪಾಲು ಹೊಂದಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಹೆಮ್ಮೆಯಿದೆ-ಅಶೋಕ್ ಕುಮಾರ್ ಲಾಹಿರಿ:**
“ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಹೆಮ್ಮೆಯಿದೆ. ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕರ್ನಾಟಕದಲ್ಲಿ ಎರಡನೇ ಬೆಂಗಳೂರು ನಿರ್ಮಿಸುವ ಕುರಿತು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ” ಎಂದು ನೀತಿ ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಾಹಿರಿ ಹೇಳಿದರು.
“ಕರ್ನಾಟಕ ವೇಗವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯ ಹೊಂದಿದೆ. ರಾಜ್ಯಗಳು ಬೆಳೆದರೆ ಮಾತ್ರ ದೇಶ ಬೆಳೆಯಲು, ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಕರ್ನಾಟಕದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಾಗಿದ್ದು, ಒಣಭೂಮಿಯಲ್ಲಿ ಹೆಚ್ಚಿನ ಉತ್ಪನ್ನ ಬೆಳೆಸಲು ಯೋಜನೆ ರೂಪಿಸಬೇಕಾಗಿದೆ” ಎಂದರು.
ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
