ಸಮಗ್ರ ಸುದ್ದಿ

2030ರ ವೇಳೆಗೆ ಕರ್ನಾಟಕದ ವಿದ್ಯುತ್ ಸಾಮರ್ಥ್ಯ 66 ಗಿಗಾವ್ಯಾಟ್‌ಗೆ ಹೆಚ್ಚಳ, 3 ಲಕ್ಷ ಕೋಟಿ ಖಾಸಗಿ ಹೂಡಿಕೆ ನಿರೀಕ್ಷೆ: ಗೌರವ್ ಗುಪ್ತ

Share

ಹೊಸದಿಲ್ಲಿ: ಕರ್ನಾಟಕದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಪ್ರಸ್ತುತ ಇರುವ 39 ಗಿಗಾವ್ಯಾಟ್‌ನಿಂದ 2030ರ ವೇಳೆಗೆ 66 ಗಿಗಾವ್ಯಾಟ್‌ಗೆ ಹೆಚ್ಚಿಸುವ 10 ವರ್ಷಗಳ ಕಾರ್ಯತಂತ್ರವನ್ನು ಕರ್ನಾಟಕ ರೂಪಿಸಿದೆ.

ಹೊಸದಿಲ್ಲಿಯ ಯಶೋಭೂಮಿಯಲ್ಲಿ ನಡೆಯುತ್ತಿರುವ ‘ಭಾರತ್ ಎಲೆಕ್ಟ್ರಿಸಿಟಿ, ಪವರ್‌ಜೆನ್ ಇಂಡಿಯಾ ಮತ್ತು ಇಂಡಿಯನ್ ಯುಟಿಲಿಟಿ ವೀಕ್ 2026ರ ‘ಫೋಕಸ್‌ ಸ್ಟೇಟ್‌ ಸೆಷನ್‌’ನಲ್ಲಿ ಮಾತನಾಡಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು, “ವಿದ್ಯುತ್ ಸಾಮರ್ಥ್ಯ ಹೆಚ್ಚಳದ ಗುರಿ ಸಾಧಿಸಲು ರಾಜ್ಯವು ನವೀಕರಿಸಬಹುದಾದದ ಇಂಧನ ಮೂಲಗಳಿಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 39 ಗಿಗಾವ್ಯಾಟ್‌ಗಿಂತ ಹೆಚ್ಚಿನ ಸ್ಥಾಪಿತ ವಿದ್ಯುತ್ ಸಾಮರ್ಥ್ಯವಿದ್ದು, ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಜಲವಿದ್ಯುತ್ ಮತ್ತು ಇತರೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ರಾಜ್ಯವು ಸಜ್ಜಾಗುತ್ತಿದೆ. ಈ ಪ್ರಯತ್ನವು ರಾಷ್ಟ್ರದ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳದ ಗುರಿ ಸಾಧನೆಗೆ ನೇರವಾಗಿ ಕೊಡುಗೆ ನೀಡಲಿದೆ ಎಂದು ಹೇಳಿದರು.

ತ್ವರಿತಗತಿಯಲ್ಲಿ ಆಗುತ್ತಿರುವ ಕೈಗಾರಿಕಾ ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಬಳಕೆ ಹಾಗೂ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಬೃಹತ್ ಡೇಟಾ ಸೆಂಟರ್‌ಗಳ ಅಭಿವೃದ್ಧಿಯಿಂದಾಗಿ ಮುಂದಿನ ಒಂದು ದಶಕದಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನು ಸಮರ್ಥವಾಗಿ ನಿರ್ವಹಿಸಲು, ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಮತ್ತು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಅನುಮೋದಿಸಿರುವ ‘ಸಂಪನ್ಮೂಲ ಸಮರ್ಪಕ’ ಯೋಜನೆ ಜಾರಿಗೊಳಿಸಿರುವ ಆರಂಭಿಕ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ ಎಂದು ಅವರು ತಿಳಿಸಿದರು.

ನವೀಕರಿಸಬಹುದಾದ ಇಂಧನ ಮೂಲಗಳ ಹೆಚ್ಚಳ, ಗ್ರಿಡ್‌ನ ಸ್ಥಿರತೆ ಮತ್ತು ಇಂಧನ ಸಂಗ್ರಹಣೆ ವ್ಯವಸ್ಥೆಗೆ ರಾಜ್ಯ ಒತ್ತು ನೀಡಿದ್ದು, 2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನಕ್ಕೂ ಸಜ್ಜಾಗಿದೆ. ವಿದ್ಯುತ್ ಗ್ರಿಡ್‌ ಸ್ಥಿರತೆ ಕಾಯ್ದುಕೊಳ್ಳಲು ಕೆಪಿಟಿಸಿಎಲ್‌ನ ಪ್ರಮುಖ ಉಪಕೇಂದ್ರಗಳಲ್ಲಿ ದೊಡ್ಡ ಪ್ರಮಾಣದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗಳನ್ನು (ಬಿಇಎಸ್‌ಎಸ್‌) ಅಳವಡಿಸಲಾಗುತ್ತಿದೆ ಎಂದರು.

ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ವಿವರಿಸಿದ ಗೌರವ್ ಗುಪ್ತ ಅವರು, “ಪಾವಗಡ ಸೋಲಾರ್‌ ಪಾರ್ಕ್‌ ವಿಸ್ತರಣೆ ಜತೆಗೆ ಪವನ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಪಿಎಂ ಕುಸುಮ್-ಸಿ ಮತ್ತು ಮುಖ್ಯಮಂತ್ರಿ ಸೌರ ಕೃಷಿ ಯೋಜನೆ (ಸಿಎಂ-ಸ್ಕೈ) ಮೂಲಕ ಕೃಷಿ ಫೀಡರ್‌ಗಳ ಸೌರೀಕರಣಕ್ಕೂ ಉತ್ತೇಜನ ನೀಡಲಾಗುತ್ತಿದೆ,” ಎಂದು ಅವರು ಹೇಳಿದರು.

ಪ್ರಸರಣ ಮೂಲಸೌಕರ್ಯದ ಕುರಿತು ಮಾತನಾಡಿ, “ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಶೇ.3ಕ್ಕಿಂತಲೂ ಕಡಿಮೆ ಪ್ರಸರಣ ನಷ್ಟದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ಪ್ರಸರಣ ಮಾರ್ಗಗಳು ಹಾಗೂ ಸೂಪರ್-ಗ್ರಿಡ್ ಉಪಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ,” ಎಂದು ತಿಳಿಸಿದರು.

ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಉಲ್ಲೇಖಿಸಿದ ಅವರು, “1902ರಲ್ಲಿ ಶಿವನಸಮುದ್ರದಲ್ಲಿ ಏಷ್ಯಾದ ಮೊದಲ ಪ್ರಮುಖ ಜಲವಿದ್ಯುತ್ ಸ್ಥಾವರವನ್ನು ಕರ್ನಾಟಕ ಸ್ಥಾಪಿಸಿತ್ತು. 1905ರಲ್ಲಿ ದಕ್ಷಿಣ ಏಷ್ಯಾದಲ್ಲಿ ವಿದ್ಯುದ್ದೀಕರಣಗೊಂಡ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿತ್ತು,” ಎಂದರು.

3 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ

“ಇಂಧನ ಸಂಗ್ರಹಣೆ ಮತ್ತು ಪ್ರಸರಣ ಕ್ಷೇತ್ರಗಳಲ್ಲಿ ಖಾಸಗಿಯವರ ಪಾಲ್ಗೊಳ್ಳುವಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತಿದ್ದು, ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ವಿದ್ಯುತ್ ವಲಯದಲ್ಲಿ 2ರಿಂದ 3 ಲಕ್ಷ ಕೋಟಿ ರೂ. ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ,” ಎಂದು ಅವರು ಹೇಳಿದರು.

“ಭೂಮಿಗೆ ಸಂಬಂಧಿಸಿದ ನಿಯಮಗಳು ಮತ್ತು ಯೋಜನೆಗಳ ಅನುಮೋದನಾ ಪ್ರಕ್ರಿಯೆ ಸೇರಿದಂತೆ ಹೂಡಿಕೆದಾರರಿಂದ ಬಂದಿರುವ ಸಲಹೆ-ಅಭಿಪ್ರಾಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದ್ದು, ಅವುಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ತರಲಾಗುತ್ತಿದೆ. ಇದರಿಂದ ಹೂಡಿಕೆದಾರರಿಗೆ ಯೋಜನೆಗ ಅನುಷ್ಠಾನಗೊಳಿಸಲು ಸುಲಭವಾಗಲಿದೆ. ಇಂತಹ ಪಾರದರ್ಶಕ ಮತ್ತು ಸರಳೀಕೃತ ವ್ಯವಸ್ಥೆಯಿಂದ ಕರ್ನಾಟಕದ ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆದಾರರು ಪಾಲ್ಗೊಳ್ಳಲು ಅನುಕೂಲವಾಗಲಿದೆ,” ಎಂದರು.

ಬ್ಯಾಟರಿ ಸಂಗ್ರಹಣೆ, ಗ್ರೀನ್‌ ಹೈಡ್ರೋಜನ್, ಸ್ಮಾರ್ಟ್-ಗ್ರಿಡ್ ಆಟೊಮೇಷನ್‌ಗೆ ಉತ್ತಮ ಅವಕಾಶ: ದಿವ್ಯಾ ಪ್ರಭು

‘ಫೋಕಸ್‌ ಸ್ಟೇಟ್‌ ಸೆಷನ್‌’ನಲ್ಲಿ ಮಾತನಾಡಿದ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ, “ಸಾಂಪ್ರದಾಯಿಕ ಇಂಧನದ ಬದಲಿಗೆ ನವೀಕರಿಸುವ ಇಂಧನ ಬಳಕೆ ಹೆಚ್ಚಿಸುವ ಮೂಲಕ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ದೇಶದ ಗುರಿಗೆ ಕರ್ನಾಟಕ ಕೈ ಜೋಡಿಸಲಿದೆ. ಬ್ಯಾಟರಿ ಸಂಗ್ರಹಣೆ, ಗ್ರೀನ್‌ ಹೈಡ್ರೋಜನ್ ಮತ್ತು ಸ್ಮಾರ್ಟ್-ಗ್ರಿಡ್ ಆಟೊಮೇಷನ್ ಕ್ಷೇತ್ರಗಳಲ್ಲಿ ಜಾಗತಿಕ ಸಹಭಾಗಿತ್ವಕ್ಕೆ ಕರ್ನಾಟಕದಲ್ಲಿ ಉತ್ತಮ ಅವಕಾಶಗಳಿವೆ,”ಎಂದು ಅವರು ತಿಳಿಸಿದರು.

“ನವೀಕರಿಸಬಹುದಾದ ಇಂಧನ ಕ್ಷೇತ್ರದ ಭವಿಷ್ಯದ ಬೆಳವಣಿಗೆಯಲ್ಲಿ ಡಿಜಿಟಲೀಕರಣದ ಪಾತ್ರ ದೊಡ್ಡದು. ವಿದ್ಯುತ್‌ ಉತ್ಪಾದನೆ ಹಾಗೂ ಬೇಡಿಕೆಯನ್ನು ಮುಂಚಿತವಾಗಿ ಅಂದಾಜಿಸುವ ಪರಿಣಾಮಕಾರಿ ವ್ಯವಸ್ಥೆ ಅಭಿವೃದ್ಧಿಯಾಗಿದೆ. ಇಂಧನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವೂ ಹೆಚ್ಚುತ್ತಿದೆ,”ಎಂದರು.

“ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಹೂಡಿಕೆದಾರರಿಗೆ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುವ ಏಕಗವಾಕ್ಷಿ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಹೂಡಿಕೆದಾರರು ಯೋಜನೆಗಳನ್ನು ಸುಲಭವಾಗಿ ಪರಿಶೀಲಿಸಿ, ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅನುಕೂಲವಾಗಲಿದೆ,” ಎಂದು ಹೇಳಿದರು.

ಭಾರತ್ ಎಲೆಕ್ಟ್ರಿಸಿಟಿ, ಪವರ್‌ಜೆನ್ ಇಂಡಿಯಾ ಮತ್ತು ಇಂಡಿಯನ್ ಯುಟಿಲಿಟಿ ವೀಕ್ 2026

‘ಎನರ್ಜಿ ಆ್ಯಂಡ್ ಕ್ಲೈಮೇಟ್ ಇನಿಶಿಯೇಟಿವ್ಸ್ ಸೊಸೈಟಿ’ ಆಯೋಜಿಸಿದ್ದ 3 ದಿನಗಳ ‘ಭಾರತ್ ಎಲೆಕ್ಟ್ರಿಸಿಟಿ, ಪವರ್‌ಜೆನ್ ಇಂಡಿಯಾ ಮತ್ತು ಇಂಡಿಯನ್ ಯುಟಿಲಿಟಿ ವೀಕ್ 2026’ನಲ್ಲಿ 40 ದೇಶಗಳಿಂದ 15,000ಕ್ಕೂ ಹೆಚ್ಚು ವೃತ್ತಿಪರರು, 250ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 150 ಜಾಗತಿಕ ಚಿಂತಕರು ಭಾಗವಹಿಸಿದ್ದರು.


Share

You cannot copy content of this page