ಬೆಂಗಳೂರು: ಜಾರ್ಖಂಡ್ ರಾಜ್ಯದಲ್ಲಿ ಎಕೋ ಟೂರಿಸಂ ಹಾಗೂ ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕರ್ನಾಟಕದ ಅನುಭವ ಮತ್ತು ಪರಿಣತಿಯನ್ನು ಬಳಸಿಕೊಳ್ಳಲು ಉಭಯ ರಾಜ್ಯಗಳು ಮುಂದಾಗಿವೆ. ಈ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಾರ್ಖಂಡ್‌ಗೆ ಮಾರ್ಗದರ್ಶನ ನೀಡಲಿದೆ. ಈ ಸಂಬಂಧ ಶೀಘ್ರದಲ್ಲೇ ಉಭಯ ರಾಜ್ಯಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗುವುದು *ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್ ತಿಳಿಸಿದರು.
ಬೆಂಗಳೂರಿನ ಇಂಧನ ಭವನದಲ್ಲಿ ಜಾರ್ಖಂಡ್ ಪ್ರವಾಸೋದ್ಯಮ ಸಚಿವ ಸುದಿವ್ಯ ಕುಮಾರ್ ಅವರ ನೇತೃತ್ವದ ನಿಯೋಗದೊಂದಿಗೆ ನಡೆದ ಸಭೆಯ ಬಳಿಕ ಅವರು ಈ ವಿಷಯ ತಿಳಿಸಿದರು.
ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಎಕೋ ಟೂರಿಸಂ, ಸುಸ್ಥಿರ ಪ್ರವಾಸೋದ್ಯಮ, ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮವನ್ನು ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳೊಂದಿಗೆ ಜೋಡಿಸುವ ಮಾದರಿಗಳ ಕುರಿತು ಜಾರ್ಖಂಡ್ ನಿಯೋಗ ಮಾಹಿತಿ ಪಡೆದುಕೊಂಡಿತು.
ರಾಜ್ಯದಲ್ಲಿ ಪ್ರವಾಸೋದ್ಯಮ ಯೋಜನೆಗಳ ರೂಪಣೆ, ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಕರ್ನಾಟಕ ಗಳಿಸಿರುವ ಅನುಭವಕ್ಕೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಾರ್ಖಂಡ್‌ನ ಎಕೋ ಟೂರಿಸಂ ಯೋಜನೆಗಳ ಅಭಿವೃದ್ಧಿಗೆ ಕರ್ನಾಟಕದ ಮಾದರಿ ಮತ್ತು ತಾಂತ್ರಿಕ ಅನುಭವವನ್ನು ಬಳಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದೆ.
ಕರ್ನಾಟಕದಿಂದ ಯೋಜನಾ ಮಾರ್ಗದರ್ಶನ
ಪ್ರಸ್ತಾವಿತ ಸಹಕಾರದಡಿ ಜಾರ್ಖಂಡ್‌ನಲ್ಲಿ ಎಕೋ ಟೂರಿಸಂ ಯೋಜನೆಗಳ ರೂಪಣೆ, ಸೂಕ್ತ ಮಾದರಿಗಳ ಆಯ್ಕೆ, ಯೋಜನೆಗಳ ಅನುಷ್ಠಾನ ಹಾಗೂ ಸುಸ್ಥಿರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉತ್ತಮ ಪದ್ಧತಿಗಳ ಕುರಿತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ತನ್ನ ಅನುಭವವನ್ನು ಹಂಚಿಕೊಳ್ಳಲಿದೆ.
ಈ ಮೂಲಕ ಕರ್ನಾಟಕವು ಕೇವಲ ತನ್ನ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗದೆ, ಇತರ ರಾಜ್ಯಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾರ್ಗದರ್ಶಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಸಚಿವರು ಹೇಳಿದರು.
ಕರ್ನಾಟಕದ ಪ್ರವಾಸೋದ್ಯಮ ಮಾದರಿಗಳನ್ನು ಶ್ಲಾಘಿಸಿದ ಜಾರ್ಖಂಡ್ ಪ್ರವಾಸೋದ್ಯಮ ಸಚಿವ ಸುದಿವ್ಯ ಕುಮಾರ್, ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಎಕೋ ಟೂರಿಸಂ ಮತ್ತು ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳು ಗಮನಾರ್ಹವಾಗಿವೆ ಎಂದು ತಿಳಿಸಿದರು.
“ಕರ್ನಾಟಕದ ಅನುಭವ ಮತ್ತು ಉತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಿ, ಜಾರ್ಖಂಡ್‌ನ ಪರಿಸರ ಮತ್ತು ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಹೊಂದುವ ಅಂಶಗಳನ್ನು ಅಳವಡಿಸಿಕೊಳ್ಳಲು ಬಯಸಿದ್ದೇವೆ. ಈ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಶೀಘ್ರದಲ್ಲೇ ಒಪ್ಪಂದ ಮಾಡಿಕೊಂಡು ಮುಂದಿನ ಹಂತದ ಕಾರ್ಯಗಳನ್ನು ಆರಂಭಿಸಲಾಗುವುದು,” ಎಂದು ಅವರು ತಿಳಿಸಿದರು.
“ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಪರಿಸರ ಸಂರಕ್ಷಣೆ, ಸ್ಥಳೀಯ ಉದ್ಯೋಗ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯೊಂದಿಗೆ ಜೋಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಅನುಭವವನ್ನು ಈಗ ಇತರ ರಾಜ್ಯಗಳೂ ಅಧ್ಯಯನ ಮಾಡಿ ಅಳವಡಿಸಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಜಾರ್ಖಂಡ್‌ನಲ್ಲಿ ಎಕೋ ಟೂರಿಸಂ ಅಭಿವೃದ್ಧಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ನಮ್ಮ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಕರ್ನಾಟಕ ಸಿದ್ಧವಾಗಿದೆ.”
- ಶ್ರೀ ಕೆ.ಜೆ. ಜಾರ್ಜ್, ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು
“ಪ್ರವಾಸೋದ್ಯಮ ಯೋಜನೆ ಯಶಸ್ವಿಯಾಗಲು ಕೇವಲ ಮೂಲಸೌಕರ್ಯ ನಿರ್ಮಾಣ ಸಾಕಾಗುವುದಿಲ್ಲ. ಸ್ಥಳೀಯ ಪರಿಸರ, ಸಮುದಾಯ, ಪ್ರವಾಸಿಗರ ಅನುಭವ ಮತ್ತು ಯೋಜನೆಯ ದೀರ್ಘಕಾಲಿಕ ನಿರ್ವಹಣೆಯನ್ನು ಒಟ್ಟಾಗಿ ಪರಿಗಣಿಸಬೇಕು. ಕರ್ನಾಟಕ ಈ ಕ್ಷೇತ್ರಗಳಲ್ಲಿ ಗಳಿಸಿರುವ ಪ್ರಾಯೋಗಿಕ ಅನುಭವವನ್ನು ಆಧರಿಸಿ ಜಾರ್ಖಂಡ್‌ಗೆ ಯೋಜನಾ ರೂಪಣೆ ಮತ್ತು ಅನುಷ್ಠಾನದ ಹಂತಗಳಲ್ಲಿ ಮಾರ್ಗದರ್ಶನ ನೀಡಬಹುದು. ಇದು ರಾಜ್ಯಗಳ ನಡುವಿನ ಜ್ಞಾನ ಮತ್ತು ಉತ್ತಮ ಪದ್ಧತಿಗಳ ವಿನಿಮಯಕ್ಕೆ ಉತ್ತಮ ಮಾದರಿಯಾಗಲಿದೆ.”
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಕಾರ್ಯದರ್ಶಿಗಳು, ಪ್ರವಾಸೋದ್ಯಮ ಇಲಾಖೆ
