ಬೆಂಗಳೂರು:ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಕೇವಲ ಶೇ 2.8ರಷ್ಟು ಅನುದಾನ ನೀಡುತ್ತಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಗೃಹ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
“ಕೇಂದ್ರದ ಅನುದಾನ ಸಾಲದು*: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಶೇ 11.50ರಷ್ಟು ಅನುದಾನ ನೀಡಿದ್ದರೆ, ಕೇಂದ್ರ ಸರ್ಕಾರ ನೀಡುತ್ತಿರುವುದು ಕೇವಲ ಶೇ 2.8ರಷ್ಟು ಮಾತ್ರ. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಇಂದು ಜೀವಂತವಾಗಿದ್ದರೆ ಶಿಕ್ಷಣ ಕ್ಷೇತ್ರದ ಈ ಪರಿಸ್ಥಿತಿಯನ್ನು ನೋಡಿ ಅತ್ಯಂತ ನೊಂದುಕೊಳ್ಳುತ್ತಿದ್ದರು ಎಂದರು.
ಕರ್ನಾಟಕವೇ ದೇಶಕ್ಕೆ ಮಾದರಿ: ದೇಶದ ಒಟ್ಟು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ದಾಖಲಾತಿಗಳಲ್ಲಿ ಶೇ 40ರಷ್ಟು ಪ್ರವೇಶಾತಿಗಳು ಕರ್ನಾಟಕದಲ್ಲೇ ಆಗುತ್ತಿವೆ. ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಶೇ 80ಕ್ಕೂ ಹೆಚ್ಚು ಪ್ರಗತಿ ಕಂಡಿದೆ.
ಭವಿಷ್ಯದ ಪೀಳಿಗೆಯ ಬಗ್ಗೆ ಚಿಂತನೆ ಅಗತ್ಯ: ಮುಂಬರುವ ‘ಜೆನ್ ಆಲ್ಫಾ’ ಹಾಗೂ ‘ಜೆನ್ ಬೀಟಾ’ ಪೀಳಿಗೆಯ ಅಗತ್ಯತೆಗಳು ಮತ್ತು ಆಶೋತ್ತರಗಳಿಗೆ ತಕ್ಕಂತೆ ಸರ್ಕಾರಗಳು ಹಾಗೂ ಶಿಕ್ಷಣ ವ್ಯವಸ್ಥೆ ಈಗಿನಿಂದಲೇ ಚಿಂತನೆ ನಡೆಸಬೇಕಾಗಿದೆ.
ಮಹನೀಯರ ಸ್ಮರಣೆ: ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಇತಿಹಾಸವನ್ನು ಸ್ಮರಿಸಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಜ್ಯೋತಿಬಾ ಫುಲೆ ಅವರ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಿದರು.
ಒಪಿಎಸ್ (OPS) ಜಾರಿ ಭರವಸೆ: ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಕುರಿತು ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಕ ಸಮುದಾಯಕ್ಕೆ ಭರವಸೆ ನೀಡಿದರು.
ಶಿಕ್ಷಕರಿಗೆ ‘Tr.’ ಪೂರ್ವಪ್ರತ್ಯಯ ಬಳಸಲು ಐತಿಹಾಸಿಕ ಅನುಮತಿ
ರಾಜ್ಯದ ಸುಮಾರು 4.5 ಲಕ್ಷ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ಸಲುವಾಗಿ, ಇನ್ಮುಂದೆ ಶಿಕ್ಷಕರು ತಮ್ಮ ಹೆಸರಿನ ಮುಂದೆ ಅಧಿಕೃತವಾಗಿ “Tr.” (Teacher) ಎಂಬ ಶೀರ್ಷಿಕೆಯನ್ನು ಬಳಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಕಟಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಸಲೀಂ ಅಹ್ಮದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಚಿವರಾದ ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
