ಸಮಗ್ರ ಸುದ್ದಿ

ದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ‌ 25.00 ಲಕ್ಷ ನಗದು ಬಹುಮಾನ

Share

ಬೆಂಗಳೂರು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ‘ಸ್ವಚ್ಛ ವಾಯು ದಿವಸ 2026’ ಅಂಗವಾಗಿ ಘೋಷಿಸಿರುವ 2025-26 ನೇ ಸಾಲಿನ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಮೌಲ್ಯಮಾಪನದಲ್ಲಿ ದಾವಣಗೆರೆ ನಗರವು ರಾಜ್ಯಮಟ್ಟದ ಎರಡು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

​ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ನಾನ್-ಅಟೈನ್‌ಮೆಂಟ್ ನಗರವಾಗಿರುವ ದಾವಣಗೆರೆಯು, ಜನಸಂಖ್ಯೆ ಆಧಾರಿತ ವರ್ಗೀಕರಣದಡಿ ಅತ್ಯುತ್ತಮ ಸಾಧನೆ ತೋರಿದೆ. ನಗರದ ಎಸ್‌ಎಸ್‌ ಬಡಾವಣೆ – ಬಿ ಬ್ಲಾಕ್ (ಜನಸಂಖ್ಯೆ ವರ್ಗ 2) ಹಾಗೂ ಡಿಸಿಎಂ ಟೌನ್‌ಶಿಪ್ (ಜನಸಂಖ್ಯೆ ವರ್ಗ 3) ಈ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿವೆ.

​ಸದರಿ ಗೌರವದೊಂದಿಗೆ ನಗರಕ್ಕೆ ಒಟ್ಟು ರೂ‌ 25.00 ಲಕ್ಷ ರೂಪಾಯಿಗಳ ನಗದು ಬಹುಮಾನ ಲಭಿಸಿದೆ. ವಾಯು ಮಾಲಿನ್ಯ ನಿಯಂತ್ರಣ, ಪರಿಸರ ಜಾಗೃತಿ ಹಾಗೂ ನೈರ್ಮಲ್ಯ ನಿರ್ವಹಣೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮಹಾನಗರ ಪಾಲಿಕೆಯ ಸತತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.

​ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ದಾವಣಗೆರೆಯ ನಾಗರಿಕರು ತೋರಿದ ಸಹಕಾರ ಮತ್ತು ಶ್ರಮಕ್ಕೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ನಗರದ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಬದ್ಧರಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share

You cannot copy content of this page