ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಫ್ರಾನ್ಸ್‌ಗೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮೊದಲ ದಿನವಾದ ಸೋಮವಾರ ರಾಕೆಟ್, ಹಚಿನ್ಸನ್ ಮತ್ತು ಬಯೋಮೆರಿಕ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಇನ್-ವಿಟ್ರೋ ರೋಗನಿದಾನ ಮತ್ತು ಮೈಕ್ರೋಬಯಾಲಜಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಬಯೋಮೆರಿಕ್ಸ್ ಕಂಪನಿಯೊಂದಿಗಿನ ಮಾತುಕತೆಯಲ್ಲಿ ಕ್ವಿನ್ ಸಿಟಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸುವಂತೆ ಗಮನ ಸೆಳೆಯಲಾಗಿದೆ. ಈ ಕಂಪನಿಯ ಶೇ.12ರಷ್ಟು ಆದಾಯವು ಆರ್ & ಡಿ ಚಟುವಟಿಕೆಗಳಿಂದಲೇ ಬರುತ್ತಿದೆ ಎಂದಿದ್ದಾರೆ.
ಸಸ್ಯಾಧಾರಿತ ಮೂಲವಸ್ತುಗಳು ಮತ್ತು ಔಷಧವಿಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಾಕೆಟ್ ಕಂಪನಿ ಮತ್ತು ಏರೋಸ್ಪೇಸ್ ಹಾಗೂ ಆಟೋಮೋಟಿವ್ ಕ್ಷೇತ್ರದಲ್ಲಿ ಅಗ್ರಗಣ್ಯವಾಗಿರುವ ಹಚಿನ್ಸನ್ ಕಂಪನಿಯ ಪ್ರತಿನಿಧಿಗಳೊಂದಿಗೆ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಪ್ರಸ್ತಾಪಿಸಲಾಗಿದೆ. ಸದ್ಯದಲ್ಲೇ ಜಾರಿಗೆ ಬರಲಿರುವ ನೂತನ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿಯಲ್ಲಿರುವ ಪ್ರಮುಖ ಅಂಶಗಳನ್ನು ವಿವರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜತೆಗೆ ಕಂಪನಿಯು ರಾಜ್ಯದಲ್ಲಿ ತನ್ನ ಸಾಫ್ಟ್‌ವೇರ್ ವಲಯದ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಚರ್ಚಿಸಲಾಗಿದೆ. ಅಲ್ಲದೆ ತನ್ನ ಮೈಕ್ರೋಬಯಾಲಜಿ ಉತ್ಪನ್ನಗಳಿಗೆ ನಮ್ಮಲ್ಲಿ ಒಂದು ಅಭಿವೃದ್ಧಿ ಕೇಂದ್ರ ತೆರೆಯುವಂತೆ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಕೆಟ್ ಕಂಪನಿಯು ಸದ್ಯಕ್ಕೆ ಗೋಕಾಕದಲ್ಲಿ ಉತ್ಪಾದನಾ ಘಟಕ ಹೊಂದಿದೆ. ಇದರ ಸಾಮರ್ಥ್ಯವನ್ನು ಹೆಚ್ಚು ಮಾಡುವಂತೆ ಕೇಳಿಕೊಂಡಿದ್ದೇವೆ. ಏಕೆಂದರೆ, ಕಂಪನಿಗೆ ಬೇಕಾದ ಮೆಕ್ಕೆಜೋಳದಂತಹ ಕಚ್ಚಾವಸ್ತು ರಾಜ್ಯದಲ್ಲಿ ಸಮೃದ್ಧವಾಗಿದೆ ಎಂದು ಅವರು ನುಡಿದಿದ್ದಾರೆ.
ಮಾತುಕತೆಯಲ್ಲಿ ರಾಕೆಟ್ ಕಂಪನಿಯ ಸಿಎಸ್ಇ ಕ್ಸೇವಿಯರ್ ಗ್ಯಾಲಿಯಟ್ ಮತ್ತು ಆ್ಯಂಟೊನಿ ಪೀಟರ್ಸ್, ಹಚಿನ್ಸನ್ ಪರವಾಗಿ ಹಿರಿಯ ಉಪಾಧ್ಯಕ್ಷರುಗಳಾದ ನಿಕೊಲಸ್ ಒರಾನ್ಸ್, ಫ್ರೆಡರಿಕ್ ಲೇ ಡು, ಜೋಶುವಾ ಸಾಲೋಮನ್, ಬಯೋಮೆರಿಕ್ಸ್ ಕಂಪನಿಯ ಉನ್ನತ ಅಧಿಕಾರಿಗಳಾದ ವ್ಯಾನಿನಾ ಲಾರೆಂಟ್ ಲೆಡ್ರೂ, ಆಡ್ರೀ ಡಾವೆಟ್ ಭಾಗವಹಿಸಿದ್ದರು.
ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಇದ್ದರು.
