ಸಮಗ್ರ ಸುದ್ದಿ

ಜನರ ಮನೆ ಬಾಗಿಲಿಗೇ ಸರ್ಕಾರ, ಪ್ರಜಾಸೇವಕನಾಗಿ ಸೇವೆ:ಈಶ್ವರ ಖಂಡ್ರೆ

Share

ಬೀದರ್: ಹಿಂದೆ ಜನರು ತಮ್ಮೂರಲ್ಲಿ ಸಮಸ್ಯೆ ಇದ್ದರೆ ದೊರೆತನಕ ದೂರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಪ್ರಜಾಸೇವೆಯಲ್ಲಿ ಜನರ ಬಳಿಗೇ ಸರ್ಕಾರ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

ಭಾಲ್ಕಿ ತಾಲೂಕು ಮೆಹಕರ್ ನಲ್ಲಿಂದು ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನದ ಸಮಾರೋಪದಲ್ಲಿ ಮಾತನಾಡಿದ ಅವರು, ನಾನು ಪ್ರಜಾ ಸೇವಕನಾಗಿ ನಿಮ್ಮ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಇಂದಿನ ಸಭೆಯಲ್ಲಿ ಸುಮಾರು 500 ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಪಿಂಚಣಿ, ವಸತಿ, ಪಡಿತರ ಚೀಟಿ, ರಸ್ತೆ, ಚರಂಡಿ, ಕಂದಾಯ ಇಲಾಖೆಯ ಸರ್ವೇಗೆ ಸಂಬಂಧಿಸಿದ್ದಾಗಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.

ಹತ್ತು ವರ್ಷಗಳ ಹಿಂದೆ ಮೆಹಕರ್ ನೋಡಿದವರು, ಇಂದಿನ ಮೆಹಕರ್ ನೋಡಿದರೆ ಮೂಲಸೌಕರ್ಯದಲ್ಲಿ ಎಷ್ಟು ಸುಧಾರಣೆ ಆಗಿದೆ ಎಂಬುದು ತಿಳಿಯುತ್ತದೆ. ತಾವು ಶಾಸಕರಾಗಿ, ಸಚಿವರಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯ ಮೆಹಕರ್ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ತಿಳಿಸಿದರು.

ಇಂದು ಸ್ವೀಕಾರವಾಗಿರುವ ಅರ್ಜಿಗಳಿಗೆ ಆದಷ್ಟು ಶೀಘ್ರ ಪರಿಹಾರ ಒದಗಿಸಲಾಗುವುದು. ಆದರೆ ವ್ಯಾಜ್ಯ, ಕೋರ್ಟ್ ತೀರ್ಪು, ನ್ಯಾಯಾಲಯದಲ್ಲಿ ಬಾಕಿ ಪ್ರಕರಣ, ಇತ್ಯಾದಿಗಳನ್ನು ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ, ದಲ್ಲಾಳುಗಳು ಸುಳಿಯದಂತೆ, ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ನೇರವಾಗಿ ದೊರಕುವಂತೆ ಮಾಡುವುದು ಪ್ರಜಾಸೇವೆಯ ಉದ್ದೇಶವಾಗಿದ್ದು, ನಿಯಮಿತವಾಗಿ ಈ ಕಾರ್ಯಕ್ರಮ ನಡೆಸಲು ವೇಳಾಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದರು.

ಜನರು ಸಹ ಭ್ರಷ್ಟ ಅಧಿಕಾರಿಗಳಿಗೆ ಪ್ರಚೋದನೆ ನೀಡದೆ, ಸರ್ಕಾರದೊಂದಿಗೆ ಕೈಜೊಡಿಸಿದರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಹೇಳಿದ ಅವರು ಪ್ರಜಾಸೇವೆಯ ಮೂಲಕ ಜನರಿಗೆ ಸರ್ಕಾರದ ಸೇವೆ ಸುಗಮವಾಗಿ ದೊರಕುವಂತೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಜಿಲ್ಲಾಧಿಕಾರಿ ಶಿಲ್ಬಾ ಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹನುಮಂತರಾವ್ ಚೌಹಾಣ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page