ಸಮಗ್ರ ಸುದ್ದಿ

ನವೀಕರಿಸಬಹುದಾದ ಇಂಧನ ಹೂಡಿಕೆಗಳಿಗೆ ಕರ್ನಾಟಕ ಸೂಕ್ತ ತಾಣ: ಸಚಿವ ಕೆ.ಜೆ. ಜಾರ್ಜ್

Share

ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಸಹಭಾಗಿತ್ವಗಳಿಗೆ ಕರ್ನಾಟಕವು ಮುಕ್ತವಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಉದ್ಯಮಗಳಿಗೆ ಆಹ್ವಾನ ನೀಡಿದ್ದಾರೆ.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಹೊಸ ಅವಕಾಶಗಳನ್ನು ಅನ್ವೇಷಿಸುವಂತೆ ಹೂಡಿಕೆದಾರರು, ನವೋದ್ಯಮಿಗಳು ಹಾಗೂ ಉದ್ಯಮದ ಪ್ರಮುಖರಿಗೆ ಸಚಿವರು ಆಹ್ವಾನ ನೀಡಿದರು.

ಬೆಂಗಳೂರಿನಲ್ಲಿ ನಡೆದ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ರೋಡ್‌ ಶೋ ಉದ್ದೇಶಿಸಿ ಮಾತನಾಡಿದ ಸಚಿವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಹಾಗೂ ಸೌರ, ಪವನ, ಸಂಯೋಜಿತ ಯೋಜನೆಗಳು, ಮೇಲ್ಛಾವಣಿ ಸೌರ ವಿದ್ಯುತ್, ವಿದ್ಯುತ್‌ಚಾಲಿತ ಸಾರಿಗೆ, ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಿಕೆ ಮತ್ತು ಬ್ಯಾಟರಿ ಆಧಾರಿತ ಇಂಧನ ಸಂಗ್ರಹಣಾ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಅವಕಾಶಗಳನ್ನು ಅವರು ವಿವರಿಸಿದರು.

“ಈ ಎಕ್ಸ್‌ಪೋದ ರೋಡ್‌ಶೋವನ್ನು ಕರ್ನಾಟಕದಲ್ಲಿ ನಡೆಸಿರುವುದು ನನಗೆ ಸಂತಸ ತಂದಿದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಇಂಧನ ಭದ್ರತೆಯೊಂದಿಗೆ ಹಸಿರು ಭವಿಷ್ಯದ ನಮ್ಮ ಬದ್ಧತೆಯೂ ಸಾಧಿಸಬೇಕಿದೆ,” ಎಂದರು.

“2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಾಧಿಸುವ ರಾಷ್ಟ್ರೀಯ ಗುರಿಯೊಂದಿಗೆ ಕರ್ನಾಟಕವೂ ಕೈಜೋಡಿಸಲಿದೆ. ಈಗಾಗಲೇ ರಾಜ್ಯವು ನವೀಕರಿಸಬಹುದಾದ ಇಂಧನ ವಲಯದ ಪ್ರಮುಖ ತಾಣವಾಗಿ ಹೊರಹೊಮ್ಮಿದ್ದು, 8.5 ಗಿಗಾವ್ಯಾಟ್‌ಗೂ ಅಧಿಕ ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯ ಹೊಂದಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನವೀನತೆ ಸಾಧಿಸುವಲ್ಲಿಯೂ ಕರ್ನಾಟಕದ ಸಾಧನೆ ಅನನ್ಯ,” ಎಂದರು.

“ಪಾವಗಡ ಸೋಲಾರ್ ಪಾರ್ಕ್ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ ಕರ್ನಾಟಕದ ನವೀನ ಚಿಂತನೆಗೆ ಅತ್ಯುತ್ತಮ ಉದಾಹರಣೆ. ಪಾವಗಡ ಮಾದರಿಯನ್ನು ಸಾಕಾರಗೊಳಿಸುವಲ್ಲಿ ದೂರದೃಷ್ಟಿ ಹಾಗೂ ಬೆಂಬಲ ನೀಡಿದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ಕಾಲದ ಕನಸಾಗಿದ್ದ ಯೋಜನೆ ಇಂದು ಬೃಹತ್ ಪ್ರಮಾಣದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ಮಾದರಿಯಾಗಿ ರೂಪುಗೊಂಡಿದೆ,”ಎಂದು ಹೇಳಿದರು.

“ಇಂಧನ ಕ್ಷೇತ್ರದಲ್ಲಿ ಕರ್ನಾಟಕವು ಪ್ರಮುಖ ನವೋದ್ಯಮ ಹಾಗೂ ಹೂಡಿಕೆ ತಾಣವಾಗಿದೆ. ಸೌರ-ಪವನ ಸಂಯೋಜಿತ ಯೋಜನೆಗಳು, ಮೇಲ್ಛಾವಣಿ ಸೌರ ವಿದ್ಯುತ್, ವಿದ್ಯುತ್‌ಚಾಲಿತ ಸಾರಿಗೆ, ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಿಕೆ, ಬ್ಯಾಟರಿ ಆಧಾರಿತ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಹಾಗೂ ಸಮಗ್ರ ನವೀಕರಿಸಬಹುದಾದ ಇಂಧನ ಪರಿಹಾರಗಳಲ್ಲಿ ಅಪಾರ ಅವಕಾಶಗಳಿವೆ. ನವೀಕರಿಸಬಹುದಾದ ಇಂಧನ ಹೂಡಿಕೆ ಮತ್ತು ಸಹಭಾಗಿತ್ವಗಳಿಗೆ ಕರ್ನಾಟಕ ಮುಕ್ತವಾಗಿದೆ,” ಎಂದು ತಿಳಿಸಿದರು.

“ಈ ಎಕ್ಸ್‌ಪೋ ಕರ್ನಾಟಕದ ಸಾಮರ್ಥ್ಯ ಹಾಗೂ ಹೂಡಿಕೆ ಅವಕಾಶಗಳನ್ನು ಜಗತ್ತಿಗೆ ಪರಿಚಯಿಸಲು ಅತ್ಯುತ್ತಮ ವೇದಿಕೆಯಾಗಿದೆ. ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು ಹಾಗೂ ನವೋದ್ಯಮಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ನಾವು ಉತ್ಸುಕರಾಗಿದ್ದೇವೆ,” ಎಂದರು.

ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, “ಹಸಿರು ಇಂಧನ ಪರಿವರ್ತನೆಯತ್ತ ಸಾಗಲು ಭಾರತವು ಹೂಡಿಕೆದಾರರಿಗೆ ಸ್ಪಷ್ಟ ಮಾರ್ಗವನ್ನು ತೋರಿದೆ. ಉತ್ತಮ ನೀತಿಗಳಿಂದಾಗಿ ಹೂಡಿಕೆಗೆ ಸದೃಢ ಅಡಿಪಾಯ ಒದಗಿಸಿದೆ,” ಎಂದರು.

ಉದ್ಯೋಗ ಸೃಷ್ಟಿಗೆ ಒತ್ತು

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, “ಕರ್ನಾಟಕದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆಯು ಉತ್ಪಾದನೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳಾಗಿ ಪರಿವರ್ತನೆಯಾಗುತ್ತಿದೆ. ಬೆಂಗಳೂರು ಸ್ಟಾರ್ಟ್ಅಪ್ ಆಧಾರಿತ ಉತ್ಪಾದನಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ನಾವು ದೇಶದ ಪ್ರಮುಖ ನವೀಕರಿಸಬಹುದಾದ ಇಂಧನ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ. ಕರ್ನಾಟಕದ ಪಾಲಿಗೆ ನವೀಕರಿಸಬಹುದಾದ ಇಂಧನವೆಂದರೆ ಕೇವಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಲ್ಲ; ನವೀಕರಿಸಬಹುದಾದ ಇಂಧನ ಆಧಾರಿತ ಬೆಳವಣಿಗೆ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯೂ ಆಗಿದೆ,” ಎಂದು ಹೇಳಿದರು.

ರೋಡ್‌ಶೋನಲ್ಲಿ ನವೀಕರಿಸಬಹುದಾದ ಇಂಧನ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಯಾಂಕ್ ತಿವಾರಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ (ಕ್ರೆಡಲ್) ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್.ಜೆ., ಸಿಐಐ ಕರ್ನಾಟಕ ಇಂಧನ ಪರಿವರ್ತನಾ ಸಮಿತಿಯ 2024-25ರ ಸಂಚಾಲಕ ಹಾಗೂ ಹಿಟಾಚಿ ಎನರ್ಜಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಕಿಲುರ್ ರಹಮಾನ್ ಉಪಸ್ಥಿತರಿದ್ದರು.

ನ. 2ರಿಂದ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026

ಗುಜರಾತ್‌ನ ಗಾಂಧಿನಗರದಲ್ಲಿ 2024ರಲ್ಲಿ ನಡೆದ ಆರ್‌ಇ-ಇನ್ವೆಸ್ಟ್‌ನ ಯಶಸ್ಸಿನ ಮುಂದುವರಿದ ಭಾಗವಾಗಿ, ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವಾಲಯವು ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ನ್ನು ಆಯೋಜಿಸುತ್ತಿದ್ದು, ನವೆಂಬರ್ 2ರಿಂದ 5, 2026ರವರೆಗೆ ನವ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಈ ಶೃಂಗಸಭೆ ಮತ್ತು ಎಕ್ಸ್‌ಪೋ ಜತೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 9ನೇ ಮಹಾಸಭೆಯ ಅಧಿವೇಶನ ಹಾಗೂ ಹಸಿರು ಹೈಡ್ರೋಜನ್ ಕುರಿತ 4ನೇ ಅಂತಾರಾಷ್ಟ್ರೀಯ ಸಮ್ಮೇಳನವೂ ನಡೆಯಲಿದ್ದು, ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮಿಗಳು, ಹೂಡಿಕೆದಾರರು ಹಾಗೂ ನವೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಹೇಳಿದರು.


Share

You cannot copy content of this page