ಕಲಬುರಗಿ: ಕಲಬುರಗಿ ನಗರದ ಎಸ್‌ಬಿ ಕೆರೆಯನ್ನು ಅತ್ಯಾಕರ್ಷಕ, ಪರಿಸರ ಸ್ನೇಹಿ ಹಾಗೂ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತಹ ಸಮಗ್ರ ಜನಸ್ನೇಹಿ ಸಾರ್ವಜನಿಕ ತಾಣವಾಗಿ ಅಭಿವೃದ್ಧಿಪಡಿಸಲಾಗಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ, ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸ್ಥಳಗಳ ಗುಣಮಟ್ಟವನ್ನು ಹೆಚ್ಚಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ನಾಗರಿಕರಿಗೆ ಉತ್ತಮ ವಾತಾವರಣ, ಮನರಂಜನೆ, ವಾಯುವಿಹಾರ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ಆಧುನಿಕ ಸಾರ್ವಜನಿಕ ತಾಣವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಎಸ್‌ಬಿ ಕೆರೆಯ ದಡವನ್ನು ಸುಂದರವಾಗಿ ಮರುರೂಪಿಸುವುದರ ಜೊತೆಗೆ, ಕೆರೆಯ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು, ಹಸಿರು ಪರಿಸರದೊಂದಿಗೆ ವಿನ್ಯಾಸಗೊಳಿಸಿ ನಡಿಗೆ ಮಾರ್ಗಗಳು, ಆಸನ ವ್ಯವಸ್ಥೆಗಳು, ಮನರಂಜನಾ ಸ್ಥಳಗಳು, ಮಕ್ಕಳ ಆಟದ ವಲಯಗಳು ಹಾಗೂ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ನಗರಾಭಿವೃದ್ಧಿ ಎಂದರೆ ಕೇವಲ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಜನರು ನೆಮ್ಮದಿಯಿಂದ ಸಮಯ ಕಳೆಯಲು, ವಾಯುವಿಹಾರ ಮಾಡಲು, ಕುಟುಂಬದೊಂದಿಗೆ ಬೆರೆಯಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ಉತ್ತಮ ಸಾರ್ವಜನಿಕ ಸ್ಥಳಗಳ ನಿರ್ಮಾಣವೂ ನಗರಾಭಿವೃದ್ಧಿಯ ಪ್ರಮುಖ ಭಾಗವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಎಸ್‌ಬಿ ಕೆರೆಯ ಅಭಿವೃದ್ಧಿ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಬಳಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲಾಗುವುದು, ಕೆರೆಯ ನೈಸರ್ಗಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ, ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಯೋಜನೆಯನ್ನು ರೂಪಿಸಲಾಗಿದೆ, ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನರು ಬಳಸಿಕೊಳ್ಳಬಹುದಾದಂತಹ ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ತಾಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಕಲಬುರಗಿ ನಗರಕ್ಕೆ ಅಗತ್ಯವಿರುವ ಆಧುನಿಕ ಸಾರ್ವಜನಿಕ ಮೂಲಸೌಕರ್ಯವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ನಗರದ ಸೌಂದರ್ಯೀಕರಣದ ಜೊತೆಗೆ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್‌ಬಿ ಕೆರೆ ಅಭಿವೃದ್ಧಿ ಯೋಜನೆಯು ಕಲಬುರಗಿಗೆ ಮತ್ತೊಂದು ಪ್ರಮುಖ ಸಾರ್ವಜನಿಕ ಆಸ್ತಿಯನ್ನು ರೂಪಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಎಸ್‌ಬಿ ಕೆರೆಯನ್ನು ಕೇವಲ ಸೌಂದರ್ಯೀಕರಣ ಗೊಳಿಸಿರುವುದಷ್ಟೇ ಅಲ್ಲದೆ, ಕಲಬುರಗಿಯ ಜನರ ಜೀವನದೊಂದಿಗೆ ಬೆಸೆದುಕೊಂಡಿರುವ ಹಸಿರು, ಆರೋಗ್ಯಕರ ಹಾಗೂ ಚೈತನ್ಯಮಯ ಸಾರ್ವಜನಿಕ ತಾಣವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. ಭವಿಷ್ಯದಲ್ಲಿ ಇದು ಕಲಬುರಗಿ ನಗರದ ಹೊಸ ಹೆಗ್ಗುರುತಾಗಬೇಕು ಎಂಬುದು ನಮ್ಮ ಆಶಯ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
