ಸಮಗ್ರ ಸುದ್ದಿ

ಕೆಪಿಎಸ್.ಸಿ ರದ್ದು ಮಾಡಲು ಸಿಎಂಗೆ ಮನವಿ: ಈಶ್ವರ ಖಂಡ್ರೆ

Share

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ)ದ ಮೇಲೆ 1998 ರಿಂದಲೂ ಗುರುತರ ಆರೋಪಗಳು ಬರುತ್ತಿದ್ದು, ಇದನ್ನು ರದ್ದು ಮಾಡಿ ಯುಪಿಎಸ್ಸಿ ಮಾದರಿ ರೂಪಿಸಬೇಕು ಅಥವಾ ಕೆ.ಇ.ಎ.ಯಿಂದ ನೇಮಕಾತಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಪಿ.ಎಸ್.ಸಿ. ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ಇಲಾಖೆಯ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕಾದ್ದು ಅದರ ಅಧ್ಯಕ್ಷರು ಮತ್ತು ಸದಸ್ಯರ ಜವಾಬ್ದಾರಿ. ಈ ನಿಟ್ಟಿನಲ್ಲಿ ವಿಫಲವಾಗಿರುವ ಆಯೋಗ ರದ್ದು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪಶುವೈದ್ಯರ ನೇಮಕಾತಿ ಹಗರಣದ ಬಗ್ಗೆ ಸರ್ಕಾರ ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದೆ. ಅಕ್ರಮದಲ್ಲಿ ಭಾಗಿಯಾದ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಅವರಿಗೆ ದಂಡನೆ ಆಗುತ್ತದೆ, ಸತ್ಯ ಹೊರಬಂದೇ ಬರುತ್ತದೆ ಎಂದರು.

ಕೆ.ಪಿ.ಎಸ್.ಸಿ. ರದ್ದಾದರೆ ಪರ್ಯಾಯ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್.ಸಿ. ಮಾದರಿಯಲ್ಲಿ ಪುನಾರಚನೆ ಮಾಡಬಹುದು ಇಲ್ಲವೇ ನಮ್ಮ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕೆ.ಇ.ಎ.ಗೆ. ಹೊಣೆಗಾರಿಕೆ ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಕಷ್ಟಪಟ್ಟ ಓದಿದ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಮತ್ತು ಪ್ರತಿಭಾವಂತರು ಸರ್ಕಾರಿ ಅಧಿಕಾರಿಗಳಾಗಬೇಕು, ಹಗರಣ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನೇಮಕಾತಿ ಆಗಬೇಕು ಎಂಬ ನಿಟ್ಟಿನಲ್ಲಿ ಉತ್ತಮವಾದ ವ್ಯವಸ್ಥೆ ಬರಬೇಕು ಎಂಬುದು ಸರ್ಕಾರದ ಹಾಗೂ ನಮ್ಮೆಲ್ಲರ ಒಮ್ಮತದ ನಿಲುವಾಗಿದೆ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ನಡೆಸಿ ನೇಮಕಾತಿ ಮಾಡಿದ ಅನುಭವ ಹೊಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ, ಪರೀಕ್ಷೆ, ಮೌಲ್ಯಮಾಪನ ಪಾರದರ್ಶಕವಾಗಿ ನಡೆಯುವಂತೆ, ಮೌಖಿಕ ಸಂದರ್ಶನವೂ ಪಾರದರ್ಶಕವಾಗಿರುವಂತೆ ಮಾಡಿದಲ್ಲಿ ಇದಕ್ಕೆ ಶಾಶ್ವತ ಪರಿಹಾರ ದೊರಕುತ್ತದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಈಗಾಗಲೇ ತಾವೂ ಸೇರಿದಂತೆ ಹಲವು ಸಚಿವರು ಈ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದೂ ತಿಳಿಸಿದರು.


Share

You cannot copy content of this page