ಕನಕಪುರ:ವಿದ್ಯಾರ್ಥಿಗಳು ವ್ಯಕ್ತಪಡಿಸಿರುವ ಕುಂದು ಕೊರತೆಗಳನ್ನು ಉಪ ಆಯುಕ್ತರು, ಸಿಇಒಗಳಿಗೆ ಕಳಿಸಿ ಮರು ಪರಿಶೀಲನೆ ಮಾಡಿಸಿ ಸರಿಪಡಿಸಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಸಿಎಂ ಡಿ ಕೆ ಶಿವಕುಮಾರ್ ಅವರು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ, ಅವರ ಕುಂದುಕೊರತೆ ಆಲಿಸಿದರು.
“ಇಂದು ಕನಕಪುರದ ಹಾಸ್ಟೆಲ್ ಗೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಊಟ ಮಾಡಿ, ಚರ್ಚೆ ಮಾಡಿದ್ದೇನೆ. ಇಲ್ಲಿನ ಕೊಠಡಿ, ಶೌಚಾಲಯಗಳನ್ನು ಪರಿಶೀಲಿಸಿದ್ದೇನೆ. ಇವರಿಗೆ ಬೆಡ್ ಶೀಟ್ ಇಲ್ಲ ಎಂಬುದನ್ನು ಗಮನಿಸಿರುವೆ. ಅವರ ಸಮಸ್ಯೆಗಳೇನು ಎಂದು ಅವರಿಂದಲೇ ಬರೆಸಿದ್ದೇನೆ” ಎಂದರು.
“ಈ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆದಿದ್ದಾರೆ. ಕಲಬುರ್ಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು, ಬಳ್ಳಾರಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದ್ದೇನೆ” ಎಂದು ಹೇಳಿದರು.
“ನಾನು ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನಕಪುರಕ್ಕೆ ಆಗಮಿಸಿದ್ದೆ. ಹಾಸ್ಟೆಲ್ ಗೆ ಭೇಟಿ ನೀಡುವ ಉದ್ದೇಶದೊಂದಿಗೆ ಒಂದು ದಿನ ಮುಂಚಿತವಾಗಿ ಬಂದಿರುವೆ. ಹಬ್ಬದ ಕಾರಣ ಮಕ್ಕಳು ಊರುಗಳಿಗೆ ಹೋಗಿದ್ದು ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯ ಖಾಲಿ ಇದೆ. ಹೀಗಾಗಿ ಅಲ್ಲಿಗೆ ಹೋಗಿಲ್ಲ. ಹಾಸ್ಟೆಲ್ ನಲ್ಲಿ 75% ವ್ಯವಸ್ಥೆ ಉತ್ತಮವಾಗಿದ್ದು, ಉಳಿದದ್ದನ್ನು ಸರಿ ಮಾಡಲಾಗುವುದು” ಎಂದು ತಿಳಿಸಿದರು.
ನಿಮ್ಮ ಊರಿನಂತೆ ಬಿಸಿಲು ಇದೆಯೇ ಎಂದು ಸಿಎಂ ಕೇಳಿದಾಗ, ವಿದ್ಯಾರ್ಥಿಯೊಬ್ಬ ‘ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲು ಜಾಸ್ತಿ’ ಎಂದರು. ಅದಕ್ಕೆ “ಎಸಿ ಹಾಕಿಸೋಣ” ಎಂದು ಸಿಎಂ ಚಟಾಕಿ ಹಾರಿಸಿದರು. ಆಗ ಮಳೆ ಇಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದಾಗ, “ನೀವು ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ. ಎಲ್ಲರಿಗೂ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು” ಎಂದರು.
ವಿದ್ಯಾರ್ಥಿಗಳು ಬಸ್ ಸೌಲಭ್ಯದ ಬಗ್ಗೆ ಇಟ್ಟ ಬೇಡಿಕೆ ಬಗ್ಗೆ ಕೇಳಿದಾಗ, “ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿದ್ದು, ಇಲ್ಲಿ ಕೆಂಪು ಬಸ್ ನಿಲ್ಲಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುವೆ” ಎಂದು ತಿಳಿಸಿದರು.
