ಸಮಗ್ರ ಸುದ್ದಿ

ಬೆಂಗಳೂರು ಪ್ರೆಸ್ ಕ್ಲಬ್ ಗೌರಿ-ಗಣೇಶ ಹಬ್ಬದ ಆಚರಣೆಯಲ್ಲಿ ಶಾಸಕ ಕೆ. ಗೋಪಾಲಯ್ಯ ಭಾಗಿ: ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ

Share

ಬೆಂಗಳೂರು:ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಗೌರಿ-ಗಣೇಶ ಹಬ್ಬದ ಸಂಭ್ರಮದ ಆಚರಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರು ಭಾಗವಹಿಸಿ, ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಕಾರ್ಯಕ್ರಮಗಳ ಒತ್ತಡದ ನಡುವೆಯೂ ಪ್ರೆಸ್ ಕ್ಲಬ್ ಆಹ್ವಾನದ ಮೇರೆಗೆ ಆಗಮಿಸಿ, ಪೂಜೆಯಲ್ಲಿ ಪಾಲ್ಗೊಂಡು ಸಹಭೋಜನ ಮಾಡಿರುವುದಾಗಿ ತಿಳಿಸಿದರು. ಈ ಶುಭ ಸಂದರ್ಭದಲ್ಲಿ ಪ್ರೆಸ್ ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥನೆ:

ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಶಾಸಕರು, “ರಾಜ್ಯದಲ್ಲಿ ಮಳೆಯಿಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ ಮತ್ತು ಬರಗಾಲದ ಭೀತಿ ಎದುರಾಗಿದೆ. ಮಳೆ ಹೀಗೆಯೇ ಕಡಿಮೆಯಾದರೆ ಬೆಂಗಳೂರು ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಹಾಗೂ ಬೋರ್‌ವೆಲ್‌ಗಳು ಬತ್ತಿ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳಿಗೂ ನೀರಿನ ಕೊರತೆ ಉಂಟಾಗಲಿದೆ” ಎಂದು ಹೇಳಿದರು.

ಗೌರಿ-ಗಣೇಶ ಹಬ್ಬದ ಈ ಪವಿತ್ರ ದಿನದಂದು ರಾಜ್ಯಾದ್ಯಂತ ಉತ್ತಮ ಮಳೆ-ಬೆಳೆಯಾಗಿ, ಜನರ ಸಂಕಷ್ಟಗಳು ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ನ ಉಪಾಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಬೆಳ್ಳಿ ತಟ್ಟೆ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page