ಬೆಂಗಳೂರು:ಇಂಜಿನಿಯರ್ ಗಳಿಗೆ ವೃತ್ತಿಗೌರವ ನೀಡುವ ಉದ್ದೇಶದಿಂದ ಅವರ ಹೆಸರಿನ ಮುಂದೆ Er. (ಅಭಿಯಂತರ) ಎಂದು ಬಳಸಲು ಆದೇಶ ಹೊರಡಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಕರ್ನಾಟಕ ವಿಭಾಗ ಮಂಗಳವಾರ ಆಯೋಜಿಸಿದ್ದ 59ನೇ ಇಂಜಿನಿಯರ್ ದಿನಾಚರಣೆಯನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.
“ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್ ಗಳ ಅತ್ಯಮೌಲ್ಯವಾದ ಕೊಡುಗೆಯನ್ನು ಸ್ಮರಿಸಲು ಹಾಗೂ ಗೌರವ ಸಮರ್ಪಣೆ ಮಾಡುವ ಸಲುವಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನವಾದ ಸೆಪ್ಟೆಂಬರ್ 15 ನ್ನು “ಇಂಜಿನಿಯರ್ ಗಳ ದಿನ” ವನ್ನಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ” ಎಂದು ತಿಳಿಸಿದರು.
ಪ್ರತಿ ಪಟ್ಟಣಕ್ಕೂ ವರ್ತುಲ ರಸ್ತೆ ಗ್ರಿಡ್ ನಿರ್ಮಾಣದ ಚಿಂತನೆಯಿದೆ
“ಬೆಂಗಳೂರಿನಲ್ಲಿ ರಸ್ತೆ ಕೇವಲ ಶೇ. 8 ರಷ್ಟಿದ್ದು, ದೇಶದ ಉಳಿದೆಡೆಗಳಲ್ಲಿ ಶೇ. 18 ರಷ್ಟು ರಸ್ತೆಗಳಿವೆ. ಕೆಲವೊಂದು ಬಡಾವಣೆಗಳನ್ನು ಹೊರತುಪಡಿಸಿದರೆ ಬೆಂಗಳೂರು ಯೋಜನಾಬದ್ಧ ನಗರವಲ್ಲ. ಇಲ್ಲಿ ರಸ್ತೆಗಳು ಬಹಳ ಚಿಕ್ಕದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಸ ಕರ್ನಾಟಕ ಮಾಡುವುದು ನನ್ನ ಕಲ್ಪನೆ. ಟೌನ್ ಪ್ಲಾನಿಂಗ್ ಖಾತೆಯನ್ನು ನಾನೇ ನಿರ್ವಹಿಸುತ್ತಿದ್ದು, ಈ ಬಗ್ಗೆ ಸ್ಪಷ್ಠ ಚಿಂತನೆ ಹೊಂದಿದ್ದೇನೆ. ಪ್ರತಿಯೊಂದು ಪಟ್ಟಣಕ್ಕೂ ಒಂದು ವರ್ತುಲ ರಸ್ತೆ ನಿರ್ಮಿಸುವ ಚಿಂತನೆಯಿದ್ದು, ಇದರಿಂದ ವಾಹನ ದಟ್ಟಣೆ ಪರಿಹರಿಸಿದಂತಾಗುತ್ತದೆ” ಎಂದರು.
ಬೆಂಗಳೂರಿನಲ್ಲಿ ಹೊಸ ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪಿಸಲು ಚಿಂತನೆ
“ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಹೊಸ ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೊಬಿಲಿಟಿ ಯೋಜನೆಗೆ ಒತ್ತು ನೀಡಲಾಗುತ್ತಿದೆ. ನವ ಕರ್ನಾಟಕ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಸರ್ ಎಂ ವಿಯವರ ತ್ಯಾಗ, ಚಿಂತನೆಗಳು ನಮಗೆ ಮಾರ್ಗದರ್ಶನವಾಗಿದೆ. ನವ ಕರ್ನಾಟಕ ನಿರ್ಮಾಣದಿಂದ ನವಭಾರತ ನಿರ್ಮಾಣ ಸಾಧ್ಯ. ಕರ್ನಾಟಕದ ಬೆಳವಣಿಗೆಯಲ್ಲಿ ಭಾರತದ ಬೆಳವಣಿಗೆ ಅಡಗಿದೆ. ದಕ್ಷಿಣ ಭಾರತದ ಜ್ಞಾನ ಪ್ರತಿಭೆಗಳು ಭಾರತದ ಅಭಿವೃದ್ಧಿಗೆ ಕಾರಣವಾಗಿದೆ” ಎಂದರು.
ಬೆಂಗಳೂರಿಗೆ 16 ಕಿ.ಮೀ. ಡಬ್ಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ಯೋಜನೆ
“ಬೆಂಗಳೂರಿಗೆ ಮೆಟ್ರೋವನ್ನು 500 ಕಿ.ಮೀ. ವಿಸ್ತರಿಸುವ ಯೋಜನೆ ಬಗ್ಗೆ ಬಿಎಂಆರ್ ಸಿ ಎಲ್ ಪ್ರಗತಿ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಲಾಗುತ್ತಿದೆ. 45 ಕಿ.ಮಿ. ಡಬ್ಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ. ಆದ್ದರಿಂದ ಕೇವಲ 16 ಕಿ.ಮೀ. ಗೆ ಅನುಮತಿಸಿದ್ದಾರೆ. ರಸ್ತೆಗಳನ್ನು ಒಡೆಯಲು ಆಗದ ಕಾರಣ, 16 ಕಿ.ಮೀ. ಡಬ್ಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ಯೋಜನೆಗೆ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ಒಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ” ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರತಿ ವರ್ಷ ಒಂದು ಲಕ್ಷ ಇಂಜಿನಿಯರ್ ಗಳು ತಯಾರಾಗುತ್ತಾರೆ
“ರಾಜ್ಯದಲ್ಲಿ 230 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಭಾರತದಲ್ಲಿಯೇ ಅತಿ ಹೆಚ್ಚಿನ ಇಂಜಿನಿಯರಿಂಗ್ *ಕಾಲೇಜುಗಳು ನಮ್ಮಲ್ಲಿವೆ. ಪ್ರತಿ ವರ್ಷ ಒಂದು ಲಕ್ಷ ಇಂಜಿನಿಯರ್ ಗಳನ್ನು ರಾಜ್ಯದಲ್ಲಿ ತಯಾರು ಮಾಡಲಾಗುತ್ತಿದೆ. ಈ ವರ್ಷ 23 ಸಾವಿರ ಇಂಜಿನಿಯರ್ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೆ ಉಳಿದುಕೊಂಡಿವೆ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 24 ಲಕ್ಷ ಐಟಿ ವೃತ್ತಿಪರರಿದ್ದಾರೆ”ಎಂದರು.
ಬೇಡಿಕೆಗೆ ಸಿಎಂ ಸ್ಪಂದನೆ
ಜಮೀನು ನವೀಕರಣವಾಗಬೇಕೆಂದು ಸಂಸ್ಥೆ ಮಾಡಿರುವ ಮನವಿಗೆ ಸ್ಪಂದಿಸಿದ ಸಿಎಂ, “ಈ ಬಗ್ಗೆ ಭೇಟಿ ಮಾಡಿದರೆ ಕೂಡಲೇ ವ್ಯವಸ್ಥೆ ಮಾಡಿಕೊಡಲಾಗುವುದು” ಎಂದರು. “ಇಂಜಿನಿಯರ್ ದಿನಾಚರಣೆ, ತುಮಕೂರು, ಬೆಂಗಳೂರು ಸ್ಥಳಗಳ ಬಗ್ಗೆ ಇರುವ ಬೇಡಿಕೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಲು ನೆರವು ನೀಡಲಾಗುವುದು” ಎಂದು ಭರವಸೆ ನೀಡಿದರು.
ಕೆಲಸವನ್ನು ನೀವು ಗೌರವಿಸಿದರೆ ಜಗತ್ತು ನಿಮ್ಮನ್ನು ಗೌರವಿಸುತ್ತದೆ
“ದೇಶದ ಪ್ರಗತಿಯಲ್ಲಿ, ಪ್ರತಿಯೊಬ್ಬರ ಬದುಕಿನಲ್ಲಿ ಇಂಜಿನಿಯರ್ ಗಳು ಅವಿಭಾಜ್ಯ ಅಂಗ. ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಸ್ಮರಿಸುವ ದಿನವಿದು. ಮಹಾನ್ ಇಂಜಿನಿಯರ್ ಗಳನ್ನು ಸ್ಮರಿಸುವ ಪವಿತ್ರ ದಿನ. ಜ್ಞಾನವೇ ಅಭಿವೃದ್ಧಿಯಾಗಿ ತಂತ್ರಜ್ಞಾನವೇ ಜನರ ಬದುಕನ್ನು ಪರಿವರ್ತಿಸುವ ದಿನ. ಎಲ್ಲರೂ ಹೊಸ ಆಲೋಚನೆಗಳನ್ನು ಮೊಳೆಯಬೇಕು. ವಿಶ್ವೇಶ್ವರಯ್ಯನವರು ದೂರಾಲೋಚನೆಯಿದ್ದವರು. ಕೈಗಾರೀಕರಣಗೊಳಿಸಿ ಅಥವಾ ವಿನಾಶ ಎಂದು ಘೋಷಣೆ ಮಾಡಿದ್ದರು. ಕೈಗಾರೀಕರಣ ಕೂಡ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆಯು ಅಷ್ಟೇ ಮುಖ್ಯ. ಸಮಾಜದಲ್ಲಿ ಇಂಜಿನಿಯರ್ ಗಳನ್ನು ಹಾಗೂ ವಿಜ್ಞಾನಿಗಳನ್ನು ಸಂಶೋಧನೆಗೆ ಸರಿಯಾಗಿ ರೂಪಿಸುವುದು ಮುಖ್ಯ. ಕೆಲಸವನ್ನು ನೀವು ಗೌರವಿಸಿದರೆ ಜಗತ್ತು ನಿಮ್ಮನ್ನು ಗೌರವಿಸುತ್ತದೆ” ಎಂದರು.
ಇಂಜಿನಿಯರ್ ಗಳ ಪ್ರತಿಭೆ, ಜ್ಞಾನವನ್ನು ಸರ್ಕಾರ ಮೆಚ್ಚುತ್ತದೆ
“Think, Plan, Execute (ಆಲೋಚಿಸು, ಯೋಜಿಸು, ಕಾರ್ಯಗತಗೊಳಿಸು) ಎನ್ನುವುದು ವಿಶ್ವೇಶ್ವರಯ್ಯನವರ ಘೋಷಣೆಯಾಗಿತ್ತು. ನಾಳೆಯಿಂದ ಅಭಿಯಂತರರು ಇಂಜಿನಿಯರ್ ಎಂದು ನಿಮ್ಮ ಹೆಸರಿನ ಮುಂದೆ ಸೇರಿಸಿಕೊಳ್ಳಬಹುದು. ನಮ್ಮ ನಡುವೆ ಇರುವ ಬುದ್ಧಿವಂತರನ್ನು ವಿಶ್ವೇಶ್ವರಯ್ಯನ ತಲೆ ಎನ್ನುವುದು ವಾಡಿಕೆ. ಇಂಜಿನಿಯರ್ ಗಳ ಪ್ರತಿಭೆ, ಜ್ಞಾನವನ್ನು ಸರ್ಕಾರ ಮೆಚ್ಚುತ್ತದೆ. ನಿಮ್ಮ ಪ್ರತಿ ತೀರ್ಮಾನ ಜನರ ಬದುಕಿನ ಮೇಲಾಗುತ್ತದೆ. ಸಮಾಜ ನಿಮ್ಮ ಗುಣವನ್ನು ಗುರುತಿಸುತ್ತದೆ. ಇದನ್ನು ಯಾರೂ ಮರೆಯುವಂತಿಲ್ಲ” ಎಂದರು.
ಸಮಸ್ಯೆಗಳಿಗೆ ಪರಿಹಾರ ಹುಡುಕುವ ಇಂಜಿನಿಯರ್ ಗಳನ್ನು ಸೃಷ್ಟಿಸಬೇಕು
“ಸಮಸ್ಯೆಗಳಿಗೆ ಪರಿಹಾರ ಹುಡುಕುವ ಇಂಜಿನಿಯರ್ಗಳನ್ನು ಸೃಷ್ಟಿಸಬೇಕು. ಇಂಜಿನಿಯರಿಂಗ್ ಕೇವಲ ವೃತ್ತಿಯಲ್ಲ. ಬದುಕನ್ನು ಪರಿವರ್ತಿಸುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ. ಇದನ್ನು ಅಬ್ದುಲ್ ಕಲಾಂ ಕೂಡ ಹೇಳಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಆಧುನಿಕ ಜಗತ್ತಿಗೆ ಇಂಜಿನಿಯರ್ ಗಳು ರಾಯಭಾರಿಗಳು
“ವಿಶ್ವೇಶ್ವರಯ್ಯನವರನ್ನು ಪಡೆದ ನಾವು ಪುಣ್ಯವಂತರು. ಅವರು ಓಡಾಡಿದ ನೆಲದಲ್ಲಿ, ಅವರು ಕಟ್ಟಿದ ಕಟ್ಟಡಗಳಲ್ಲಿ ನಾವು ನಡೆದಾಡುತ್ತಿದ್ದೇವೆ. ಅವರು ಹಾಕಿಕೊಟ್ಟ ಅಡಿಪಾಯ ಹಾಗೂ ಅವರ ನಂತರ ನೀವು ಹಾಕಿ ಕೊಟ್ಟಿರುವ ಅಡಿಪಾಯ ದೊಡ್ದದು. ಆತ್ಮಸಾಕ್ಷಿಗೆ ತಕ್ಕಂತೆ ಇಂಜಿನಿಯರ್ ಗಳು ನಡೆದುಕೊಳ್ಳಬೇಕು. ಏಕೆಂದರೆ ನೀವು ಹಾಕುವ ಯೋಜನೆಗಳು ನೂರಾರು ವರ್ಷ ಜೀವಂತವಾಗಿ ಉಳಿದುಕೊಳ್ಳುತ್ತದೆ. ಕೆ.ಆರ್.ಎಸ್ ಕೇವಲ ಅಣೆಕಟ್ಟಲ್ಲ ಅದು ಅನ್ನದ ತಟ್ಟೆ. ವಿಶ್ವೇಶ್ವರಯ್ಯನವರ ಶಿಸ್ತು, ದೂರದೃಷ್ಟಿ ನಮಗೆ ಪ್ರೇರಣೆ. ಅವರ ಆಲೋಚನೆ, ಚಿಂತನೆಗಳು ವಿಶೇಷ. ಅವರ ನಂತರ ಬಂದ ಅನೇಕ ಇಂಜಿನಿಯರ್ ಗಳು ಸಹ ಉತ್ತಮ ಕೆಲಸ ಮಾಡಿದ್ದಾರೆ” ಎಂದರು.
ಕರ್ನಾಟಕ; ತಂತ್ರಜ್ಞಾನ ಕ್ಷೇತ್ರಕ್ಕೆ ಭದ್ರ ಅಡಿಪಾಯವಾಗಿದೆ
“ಕರ್ನಾಟಕದ ಐಟಿಬಿಟಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಏಷಿಯಾ ಖಂಡದಲ್ಲಿಯೇ ಪ್ರಥಮವಾಗಿ ಕರ್ನಾಟಕದ ಶಿವನಸಮುದ್ರದಲ್ಲಿ ಮೊದಲ ವಿದ್ಯುಚ್ಛಕ್ತಿ ಘಟಕ ಪ್ರಾರಂಭವಾಗಿತ್ತು. ಕರ್ನಾಟಕದಲ್ಲಿ ತಂತ್ರಜ್ಞಾನಕ್ಕೆ ಭದ್ರಅಡಿಪಾಯವಿದ್ದು, ಈ ಸಾಧನೆಗಳ ಬಗ್ಗೆ ರಾಜ್ಯದ ಜನರು ಹೆಮ್ಮೆಪಡಬೇಕು. ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಹಲವು ಇಲಾಖೆಗಳಲ್ಲಿ ಇಂಜಿನಿಯರ್ಸ್ ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಜಿನಿಯರ್ಸ್ ಗಳ ಸೇವೆಯನ್ನು ಸಮಾಜ ಗುರುತಿಸಿದ್ದು, ಅವರು ಆತ್ಮಸಾಕ್ಷಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಸಲಹೆ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ
“ನಾನು ಇಂಜಿನಿಯರ್ ವ್ಯಾಸಂಗ ಮಾಡಬೇಕೆಂದು ನನ್ನ ತಂದೆ ಇಚ್ಛಿಸಿದ್ದರು. ಎಸ್. ಎಸ್.ಎಲ್ .ಸಿ ಯಲ್ಲಿ 287 ಅಂಕಗಳನ್ನು ಗಳಿಸಿ ತಂದೆಯ ಒತ್ತಾಸೆಯಿಂದ ಮೊದಲ ವರ್ಷ ವಿಜ್ಞಾನ ಕೋರ್ಸಿಗೆ ಸೇರಿಕೊಂಡು ಅದು ತಲೆಗೆ ಹತ್ತದ ಕಾರಣ ಅದನ್ನು ಬಿಟ್ಟು, ನಂತರ ವಾಣಿಜ್ಯ ಕೋರ್ಸಿಗೆ ಸೇರಿದೆ. ರಾಜಕೀಯದಲ್ಲಿ ಆಸಕ್ತಿ ಇದ್ದುದ್ದರಿಂದ ಶಾಲಾ ಕಾಲೇಜುಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ. ತಂದೆಯ ಆಸೆಯನ್ನು ನೆರವೇರಿಸುವ ಉದ್ದೇಶದಿಂದ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸ್ಥಾಪಿಸಿದ್ದೇನೆ” ಎಂದು ತಿಳಿಸಿದರು.
ನಾನು ಆಡಿದ ಮಾತಿನಂತೆ ನಡೆಯುವವನು
“ರಾಜ್ಯದ ಜನರು ಕರ್ತವ್ಯನಿಷ್ಠರನ್ನು ಎಂದಿಗೂ ಬೆಂಬಲಿಸುತ್ತಾರೆ. ನಾನು ಆಡಿದ ಮಾತಿನಂತೆ ನಡೆಯುವವನು. ನಾನು ಮಾಜಿ ಸಿಎಂ ಕೃಷ್ಣಾ ಅವರ ಸಂಪುಟದಲ್ಲಿಯೂ ಕಾರ್ಯನಿರ್ವಹಿಸಿದ್ದು, ಇತಿಹಾಸವನ್ನು ಸೃಷ್ಠಿಸುವುದರಲ್ಲಿ ನಂಬಿಕೆಯಿರಿಸಿದವನು. ಇಂಜಿನಿಯರ್ ಗಳ ಸಹಕಾರ ನಮ್ಮೊಂದಿರಬೇಕು. ಸರ್ಕಾರ ನಿಮ್ಮ ಸಲಹೆ ಸೂಚನೆಗಳನ್ನು ಸದಾ ಸ್ವಾಗತಿಸುತ್ತದೆ” ಎಂದರು.
ಟನಲ್ ಯೋಜನೆ ವಿರೋಧಿಸುವವರೇ ಕಾರಿನಲ್ಲಿ ಓಡಾಡುತ್ತಾರೆ
“ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ ಸಂಸ್ಥೆಯಿಂದ ಕೆಲವು ಸಲಹೆಗಳು ಬಂದಿವೆ. ಟನಲ್ ಯೋಜನೆಗೆ ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ. ಯೋಜನೆಗೆ ಪರ್ಯಾಯ ಭೂಮಿ ಬಗ್ಗೆ ಅಲ್ಲಿನ ಸಂಸದರಿಗೆ ಕೇಳಿದಾಗ, ಸಾರ್ವಜನಿಕ ಸಾರಿಗೆ ನಿರ್ಮಿಸಬೇಕು ಎಂದರು. ಆದರೆ ಅವರು ಹಾಗೂ ಅವರ ಕುಟುಂಬದವರು ಸಾರ್ವಜನಿಕ ಸಾರಿಗೆ ಬಳಸದೇ ಕಾರನ್ನು ಬಳಸುತ್ತಾರೆ” ಎಂದರು.
ಸಿಎಂ ಕಾರ್ಯವೈಖರಿ ಕೊಂಡಾಡಿದ ಇಂಜಿನಿಯರ್ ಗಳು
ಮಂಗಳವಾರ ಬೆಳಗ್ಗೆ ಸಂಸ್ಥೆಯ ಪದಾಧಿಕಾರಿಗಳ (ನಿವೃತ್ತ ಇಂಜಿನಿಯರ್ ಗಳು) ನಿಯೋಗ ನೀಡಿದ ಬೇಡಿಕೆಗಳನ್ನು ಈಡೇರಿಸಿ ಸಂಜೆ ವೇಳೆಗೆ ಘೋಷಣೆ ಮಾಡಿದ್ದನ್ನು ಮುಕ್ತಕಂಠದಿಂದ ಕೊಂಡಾಡಿದರು.
ನಮ್ಮ ಜೀವಮಾನದಲ್ಲೇ ಇಷ್ಟು ವೇಗವಾಗಿ ಬೇಡಿಕೆಗಳನ್ನು ಈಡೇರಿಸಿದ ಮುಖ್ಯಮಂತ್ರಿಗಳನ್ನು ನಾವು ನೋಡಿಯೇ ಇಲ್ಲ. ಬೆಳಗ್ಗೆ ಸಲ್ಲಿಸಿದ ಪ್ರಸ್ತಾವನೆಗಳೆಲ್ಲವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಣೆ ಮಾಡಿರುವುದು ಸಂತೋಷದ ವಿಚಾರ. ಅವರಿಗೆ ಧನ್ಯವಾದಗಳು ಎಂದು ನಿವೃತ್ತ ಇಂಜಿನಿಯರ್ ಗಳು ಮೆಚ್ಚುಗೆ ವ್ಯಕ್ತಪಡಿಸಿದರು.
