ಸಮಗ್ರ ಸುದ್ದಿ

ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025- ಮುಂಚೂಣಿ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ

Share

ಬೆಂಗಳೂರು: ನೀತಿ ಆಯೋಗ ಬಿಡುಗಡೆ ಮಾಡಿರುವ ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ -2025ರಲ್ಲಿ ಕರ್ನಾಟಕವು 73 ಅಂಕಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನ ಪಡೆದು, ದೇಶದ ಮುಂಚೂಣಿ ರಾಜ್ಯಗಳ ಪೈಕಿ ಒಂದಾಗಿ ಹೊರಹೊಮ್ಮಿದೆ.

‘ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ’ಗಳ ಪಟ್ಟಿಯಲ್ಲಿ ಕರ್ನಾಟಕವೂ ಒಂದಾಗಿದ್ದು, ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದಲ್ಲಿ ರಾಜ್ಯ ಸಾಧಿಸಿರುವ ಪ್ರಗತಿಯ ಪ್ರತೀಕ ಇದಾಗಿದೆ.

ಒಟ್ಟಾರೆ ಶ್ರೇಯಾಂಕದಲ್ಲಿ 84 ಅಂಕಗಳೊಂದಿಗೆ ದಿಲ್ಲಿ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ 78 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 73 ಅಂಕಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚಂಡೀಗಢ (71) ಮತ್ತು ಗೋವಾ (65) ಇವೆ. 65 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ‘ಅತ್ಯುತ್ತಮ ಸಾಧನೆ ಮಾಡಿದವು’ ಎಂದು ಸೂಚ್ಯಂಕದಲ್ಲಿ ವರ್ಗೀಕರಿಸಲಾಗಿದೆ.

ಚಾರ್ಜಿಂಗ್ ಮೂಲಸೌಕರ್ಯ ಸನ್ನದ್ಧತೆ ವಿಭಾಗದಲ್ಲಿ ಕರ್ನಾಟಕವು 97 ಅಂಕಗಳನ್ನು ಗಳಿಸಿದ್ದು, ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯ ಸಾಧಿಸಿರುವ ಪ್ರಗತಿಗೆ ಇದು ಸಾಕ್ಷಿಯಾಗಿದೆ.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ನೀತಿ ಆಯೋಗದ ಕಾರ್ಯಾಗಾರದ ಭಾಗವಾಗಿ ‘ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ–2025’ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕದ ಪರವಾಗಿ ಈ ಗೌರವ ಸ್ವೀಕರಿಸಿ ಮಾತನಾಡಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, “ನಮ್ಮ ರಾಜ್ಯದ ಎಲೆಕ್ಟ್ರಿಕ್ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯ ಉಪಕ್ರಮಗಳಲ್ಲಿ ಬೆಸ್ಕಾಂನ ‘ಇವಿ ಮಿತ್ರ’, ಏಕೀಕೃತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಅಪ್ಲಿಕೇಶನ್, ಏಕಗವಾಕ್ಷಿ ಅನುಮತಿ ವ್ಯವಸ್ಥೆ ಮತ್ತು ಇವಿ ಆಕ್ಸಿಲರೇಟರ್ ಸೆಲ್ ಸೇರಿವೆ. ಇವಿ ವಾಹನಗಳ ಮಾರಾಟ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಗಳನ್ನು ಒಳಗೊಂಡ ಪ್ರತ್ಯೇಕ ಎಲೆಕ್ಟ್ರಿಕ್ ವಾಹನ ನೀತಿಯನ್ನು 2017ರಲ್ಲಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ,” ಎಂದರು.

“ರಾಜ್ಯಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿರುವದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಸದ್ಯ ರಾಜ್ಯದಲ್ಲಿ 6,979 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿದ್ದು, ಬೆಂಗಳೂರಿನಲ್ಲೇ 4,896 ಚಾರ್ಚಿಂಗ್‌ ಕೇಂದ್ರಗಳಿವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವೂ ಹೆಚ್ಚುತ್ತಿದ್ದು, 2026–27ನೇ ಹಣಕಾಸು ವರ್ಷದ ಮೊದಲ 5 ತಿಂಗಳಲ್ಲಿ ಮಾರಾಟ ಶೇ.15ರಷ್ಟಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ದೇಶದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾರಾಟ ದಾಖಲಿಸಿರುವ ರಾಜ್ಯ ನಮ್ಮದು,” ಎಂದು ಅವರು ಹೇಳಿದರು.

“ದೇಶದ ಒಟ್ಟು ಎಲೆಕ್ಟ್ರಿಕ್ ವಾಹನ ನೋಂದಣಿಗಳಲ್ಲಿ ಕರ್ನಾಟಕದ ಪಾಲು ಶೇ.8.81ರಷ್ಟಿದೆ. ಎಲೆಕ್ಟ್ರಿಕ್ ವಾಹನ ನೋಂದಣಿಯಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರದ ಸ್ಥಾನ ಕರ್ನಾಟಕದ್ದು. ದ್ವಿಚಕ್ರ ಮತ್ತು ನಾಲ್ಕುಚಕ್ರ ಎಲೆಕ್ಟ್ರಿಕ್ ವಾಹನ ನೋಂದಣಿಯಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇ-ಬಸ್ ನೋಂದಣಿಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಎಲೆಕ್ಟ್ರಿಕ್ ಸಾರಿಗೆಯನ್ನು ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗುವುದು,” ಎಂದು ಗೌರವ್ ಗುಪ್ತ ಹೇಳಿದರು.

ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ

ನೀತಿ ಆಯೋಗವು ಡಬ್ಲ್ಯುಆರ್‌ಐ ಇಂಡಿಯಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಭಾರತ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕದ ಎರಡನೇ ಆವೃತ್ತಿ ಇದಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ನೀತಿ ನಿರೂಪಣೆ ಮತ್ತು ಅನುಷ್ಠಾನದ ಆಧಾರದ ಮೇಲೆ ಸೂಚ್ಯಂಕ ಮೌಲ್ಯಮಾಪನ ಮಾಡುತ್ತದೆ.

“ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ–2025ರಲ್ಲಿ ದೇಶದ ಮುಂಚೂಣಿ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಸ್ಥಾನ ಪಡೆದಿರುವುದು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಒತ್ತು ನೀಡುವ ನಮ್ಮ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ನೀತಿ ನಿರೂಪಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಬಳಕೆಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು.”
ಕೆ.ಜೆ. ಜಾರ್ಜ್,ಇಂಧನ ಮತ್ತು ಪ್ರವಾಸೋದ್ಯಮ ಸಚಿವರು

“ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನೋಡಲ್ ಸಂಸ್ಥೆಯಾಗಿ ಬೆಸ್ಕಾಂ, ರಾಜ್ಯದ ಚಾರ್ಜಿಂಗ್ ಜಾಲವನ್ನು ವಿಸ್ತರಿಸಿ ಬಲಪಡಿಸಲು ಬದ್ಧವಾಗಿದೆ. ಜನರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರವಾಗಿ ನೆರವು ನೀಡುವುದರ ಜತೆಗೆ, ರಾಜ್ಯದಲ್ಲಿ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಗೆ ಎಲ್ಲ ಅಗತ್ಯ ಬೆಂಬಲ ನೀಡಲಾಗುವುದು.”
ಡಾ. ಎನ್. ಶಿವಶಂಕರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು


Share

You cannot copy content of this page