ಬೆಂಗಳೂರು: ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರು ಹಾಗೂ ಅವರ ಕುಟುಂಬಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮಾಜಿ ಸೈನಿಕರಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು. ಮಾಜಿ ಸೈನಿಕರ ಉದ್ಯೋಗ, ಮೀಸಲಾತಿ, ವಸತಿ, ನಿವೇಶನ, ಕಲ್ಯಾಣ ಸೌಲಭ್ಯಗಳು ಸೇರಿದಂತೆ ಹಲವು ವಿಷಯಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಮಾಜಿ ಸೈನಿಕರಿಗೆ ಮೀಸಲಾಗಿರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವುದು, ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ಅರ್ಹ ಮಾಜಿ ಸೈನಿಕರ ಅವಲಂಬಿತರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದರೊಂದಿಗೆ ಮಾಜಿ ಸೈನಿಕರ ಕಲ್ಯಾಣ ನಿಧಿ ಮತ್ತು ವಿವಿಧ ಕಲ್ಯಾಣ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವಂತೆ ಕೋರಿದರು.
ಮಾಜಿ ಸೈನಿಕರು ಹಾಗೂ ವೀರನಾರಿಯರಿಗೆ ವಸತಿ ಮತ್ತು ನಿವೇಶನ ಸೌಲಭ್ಯ ಕಲ್ಪಿಸುವುದು, ಜಿಲ್ಲಾಮಟ್ಟದಲ್ಲಿ ಸೈನಿಕ ಸಹಾಯ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವುದು, ಸರ್ಕಾರಿ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆಯೂ ಮನವಿ ಮಾಡಲಾಯಿತು. ಜಿಲ್ಲಾವಾರು ಮಾಜಿ ಸೈನಿಕರ ಸಹಾಯ ಕೇಂದ್ರಗಳಿಗೆ ಸಂಬಂಧಿಸಿದಂತೆ ಭೂಮಿ ಹಾಗೂ ಇತರ ಮೂಲಸೌಕರ್ಯಗಳ ಲಭ್ಯತೆ ಕುರಿತು ಇಲಾಖಾ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳನ್ನೂ ಸಚಿವರ ಗಮನಕ್ಕೆ ತರಲಾಯಿತು.
ಮಾಜಿ ಸೈನಿಕರ ವಿವಿಧ ಬೇಡಿಕೆಗಳ ಕುರಿತು ಈಗಾಗಲೇ ಜಾರಿಯಲ್ಲಿರುವ ಸರ್ಕಾರದ ನಿಯಮಗಳು, ಆದೇಶಗಳು ಮತ್ತು ನೀತಿಗಳನ್ನು ಪರಿಶೀಲಿಸಿ, ಅರ್ಹ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ನಿರ್ದಿಷ್ಟ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಮಾಜಿ ಸೈನಿಕರು ದೇಶದ ಭದ್ರತೆಗಾಗಿ ಸಲ್ಲಿಸಿರುವ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ. ಅವರ ಬೇಡಿಕೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಿಯಮಾನುಸಾರ ಸಾಧ್ಯವಿರುವ ಪರಿಹಾರಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ ಸಭೆಯಲ್ಲಿ ಹಾಜರಿದ್ದರು.
