ಸಮಗ್ರ ಸುದ್ದಿ

ಬೆಂಗಳೂರಿನಲ್ಲಿ ರೋಜ್ಗಾರ್ ಮೇಳ; ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಹೆಚ್‍.ಡಿ. ಕುಮಾರಸ್ವಾಮಿ

Share

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಯುವ ಜನತೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಉದ್ಯೋಗ ಮೇಳದ (ರೋಜ್ಗಾರ್ ಮೇಳ) ಇಪ್ಪತ್ತನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು; ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸಂಕಲ್ಪ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾದ ರೋಜ್‌ಗಾರ್ ಮೇಳ ಯುವಕರಿಗೆ ಹೆಚ್ಚು ಉದ್ಯೋಗ ಅವಕಾಶಗಳು ಸಿಗುತ್ತಿದೆ ಎಂದು ಹೇಳಿದರು.

ವಿಕಸಿತ ಭಾರತ ಗುರಿ ಸಾಧನೆಗೆ ರೋಜ್ಗಾರ್ ಮೇಳ ಸಹಕಾರಿ

ಪ್ರಧಾನಿಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸೇರಿ ಇಡೀ ದೇಶಾದ್ಯಂತ 51,000ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ನಾನೂ ಸಹ ಅನೇಕ ಯುವಜನರಿಗೆ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟು ಶುಭ ಹಾರೈಸಿದೆ ಎಂದು ಸಚಿವರು; ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಮುಂತಾದ ಕಾರ್ಯಕ್ರಮಗಳ ಮೂಲಕ ವಿಕಸಿತ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ನೇಮಕಾತಿ ಪರ್ವವೂ ಬಹುದೊಡ್ಡ ಕಾಣಿಕೆ ನೀಡುತ್ತಿದೆ. ಎಂದು ಹೇಳಿದರು.

ಈ ಉದ್ಯೋಗ ಮೇಳವು ದೇಶದ 45 ವಿವಿಧ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದು, ಆಯ್ಕೆಯಾದ ಅಭ್ಯರ್ಥಿಗಳು ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕಂದಾಯ, ರೇಲ್ವೆ, ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು, ರಕ್ಷಣೆ ಸೇರಿದಂತೆ ಹಲವಾರು ಪ್ರಮುಖ ಇಲಾಖೆಗಳಲ್ಲಿ ನೇಮಕ ಅಗಲಿದ್ದಾರೆ. ಈ 20ನೇ ಆವೃತ್ತಿಯೊಂದಿಗೆ ರೋಜ್‌ಗಾರ್ ಮೇಳದ ಮೂಲಕ ನೇಮಕಾತಿ ಆದೇಶ ಪತ್ರಗಳನ್ನು ಪಡೆದ ಒಟ್ಟು ಯುವಜನರ ಸಂಖ್ಯೆ ಸುಮಾರು 12.75 ಲಕ್ಷ ಮೀರಿದೆ. ಮಾನ್ಯ ಪ್ರಧಾನಿಗಳ ನಾಯಕತ್ವದಲ್ಲಿ ಇಷ್ಟೆಲ್ಲಾ ಅವಕಾಶಗಳು ನಮ್ಮ ಯುವಜನರಿಗೆ ದೊರೆತಿವೆ ಎಂದು ಸಂತೋಷವಾಗಿ ಹೇಳಬಯಸುತ್ತೇನೆ.

ಶಾಸಕ ಮುನಿರತ್ನ ಅವರು, ಬೆಂಗಳೂರು ಕಸ್ಟಮ್ಸ್ ವಿಭಾಗದ ಮುಖ್ಯ ಆಯುಕ್ತ ಆಶಿಸ್ ಚಂದನ್ ಸೇರಿದಂತೆ ಹಲವರು ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರದ ವಿವಿಧ ಸೇವೆಗಳಿಗೆ ಆಯ್ಕೆಯಾದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸಚಿವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ರೋಜ್ಗಾರ್ ಮೇಳದ ಮುಖ್ಯ ಕಾರ್ಯಕ್ರಮಕ್ಕೆ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಆನ್ಲೈನ್ ವೇದಿಕೆ ಮೂಲಕ ಭಾಗಿಯಾಗಿ ಮಾತನಾಡಿದರು.


Share

You cannot copy content of this page