ಸಮಗ್ರ ಸುದ್ದಿ

ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ಕ್ಕೆ ಸಚಿವ ಸಂಪುಟ ಅನುಮೋದನೆ: ಪ್ರಿಯಾಂಕ್ ಖರ್ಗೆ

Share

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಿನ್ಮೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಗೃಹ, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದಿರುವುದು ರಾಜ್ಯದ ಮೊದಲ ವಿಶೇಷ ಸಚಿವ ಸಂಪುಟ ಸಭೆಯಾಗಿದ್ದು, ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳೊಂದಿಗೆ ಡಿಜಿಟಲ್ ಮೂಲಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ.

ಹೊಸ ನೀತಿಯ ಮೂಲಕ ಕರ್ನಾಟಕವನ್ನು ಸುಸ್ಥಿರ ಹಾಗೂ ಜಾಗತಿಕ ಮಟ್ಟದ ಡೇಟಾ ಸೆಂಟರ್ ಹಬ್ ಆಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಡೇಟಾ ಸೆಂಟರ್‌ಗಳ ವಿಸ್ತರಣೆಯೊಂದಿಗೆ ವಿದ್ಯುತ್, ನೀರು ಮತ್ತು ಇತರೆ ಸಂಪನ್ಮೂಲಗಳ ಸಮರ್ಥ ಬಳಕೆ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಹಾಗೂ ಕಾರ್ಬನ್ ಉತ್ಸರ್ಜನೆ ತಗ್ಗಿಸುವ ಕ್ರಮಗಳಿಗೆ ನೀತಿಯಲ್ಲಿ ಒತ್ತು ನೀಡಲಾಗಿದೆ.

₹1,300.45 ಕೋಟಿ ಪ್ರೋತ್ಸಾಹಕ ಚೌಕಟ್ಟು

2026ರಿಂದ 2031ರವರೆಗೆ ಜಾರಿಯಾಗಲಿರುವ ನೀತಿಯಡಿ ಒಟ್ಟು ₹1,300.45 ಕೋಟಿ ಮೊತ್ತದ ಬಜೆಟ್ ಚೌಕಟ್ಟಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬಂಡವಾಳ ಹೂಡಿಕೆ, ಎಡ್ಜ್ ಡೇಟಾ ಸೆಂಟರ್‌ಗಳು, ವಿದ್ಯುತ್ ಮತ್ತು ಡಿಜಿಟಲ್ ಮೂಲಸೌಕರ್ಯ, ಮೌಲ್ಯ ಸರಪಳಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ಸುಸ್ಥಿರತೆ ಆಧಾರಿತ ಪ್ರೋತ್ಸಾಹಕಗಳಿಗೆ ಆದ್ಯತೆ ನೀಡಲಾಗಿದೆ.

ಡೇಟಾ ಸೆಂಟರ್ ಅಭಿವೃದ್ಧಿಗೆ ಹೊಸ ಮೂಲಸೌಕರ್ಯ

ಡೇಟಾ ಸೆಂಟರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡಲು ಡೇಟಾ ಸೆಂಟರ್‌ಗಳ ಅತ್ಯುತ್ತಮತಾ ಕೇಂದ್ರ ಸ್ಥಾಪನೆ, ಸುಸ್ಥಿರ ಡೇಟಾ ಸೆಂಟರ್ ವಲಯಗಳು ಹಾಗೂ ಡೇಟಾ ಸೆಂಟರ್ ಪಾರ್ಕ್‌ಗಳ ಅಭಿವೃದ್ಧಿ ಮತ್ತು ರಾಜ್ಯದ ವಿವಿಧೆಡೆ ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ವಿದ್ಯುತ್, ನೀರು ಹಾಗೂ ಇತರೆ ಮೂಲಸೌಕರ್ಯಗಳ ಲಭ್ಯತೆಯನ್ನು ಗುರುತಿಸುವ ‘ಸಂಪನ್ಮೂಲ ಲಭ್ಯತಾ ನಕ್ಷೆ’ ಸಿದ್ಧಪಡಿಸುವುದು ನೀತಿಯ ಪ್ರಮುಖ ಅಂಶಗಳಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಭೂಮಿ, ವಿದ್ಯುತ್, ನೀರು, ಸಂಪರ್ಕ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಲಭ್ಯತೆಯನ್ನು ಆಧರಿಸಿ ಡೇಟಾ ಸೆಂಟರ್ ಅಭಿವೃದ್ಧಿಗೆ ಸೂಕ್ತ ಪ್ರದೇಶಗಳನ್ನು ಗುರುತಿಸಲು ಸಂಪನ್ಮೂಲ ಲಭ್ಯತಾ ನಕ್ಷೆ (Resource Heat Mapping) ಬಳಸಿಕೊಳ್ಳಲಾಗುತ್ತದೆ. ಮಂಗಳೂರು, ಮೈಸೂರು ಸೇರಿದಂತೆ ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿಯೂ ಡೇಟಾ ಸೆಂಟರ್ ಹೂಡಿಕೆಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ನೀತಿ ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಹಸಿರು ಮತ್ತು ಸುಸ್ಥಿರ ಡೇಟಾ ಸೆಂಟರ್‌ಗಳಿಗೆ ಆದ್ಯತೆ

ಡೇಟಾ ಸೆಂಟರ್‌ಗಳ ಕಾರ್ಯಾಚರಣೆಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆ, ಶಕ್ತಿ ದಕ್ಷತೆ, ನೀರಿನ ಸಮರ್ಥ ಬಳಕೆ, ಸುಧಾರಿತ ಕೂಲಿಂಗ್ ವ್ಯವಸ್ಥೆ, ತ್ಯಾಜ್ಯ ನೀರಿನ ಮರುಬಳಕೆ ಮತ್ತು ಕಾರ್ಬನ್ ಉತ್ಸರ್ಜನೆ ತಗ್ಗಿಸುವಿಕೆಗೆ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದು, ಪರಿಸರ ಸ್ನೇಹಿ ಡೇಟಾ ಸೆಂಟರ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

AI ಮತ್ತು ಹೊಸ ತಂತ್ರಜ್ಞಾನಗಳಿಗೆ ಡಿಜಿಟಲ್ ಮೂಲಸೌಕರ್ಯ

ಕೃತಕ ಬುದ್ಧಿಮತ್ತೆ (AI), ಕ್ಲೌಡ್ ಕಂಪ್ಯೂಟಿಂಗ್, IoT, 5G, ಬಿಗ್ ಡೇಟಾ ಮತ್ತು ಇತರೆ ಉದಯೋನ್ಮುಖ ತಂತ್ರಜ್ಞಾನಗಳ ಬೆಳವಣಿಗೆಗೆ ಅಗತ್ಯವಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದು ನೀತಿಯ ಪ್ರಮುಖ ಉದ್ದೇಶವಾಗಿದೆ. 2031ರ ವೇಳೆಗೆ ಭಾರತದ AI-ready ಡೇಟಾ ಸೆಂಟರ್ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕವು 10–12% ಪಾಲು ಹೊಂದುವ ಹಾಗೂ ರಾಜ್ಯದಲ್ಲಿ 1 GW ವರೆಗೆ ಡೇಟಾ ಸೆಂಟರ್ ಸಾಮರ್ಥ್ಯ ವೃದ್ಧಿ ಸಾಧಿಸುವ ಗುರಿಯನ್ನು ನೀತಿ ಹೊಂದಿದೆ ಎಂದೂ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವರು ಹೇಳಿದ್ದಾರೆ.

ಮಂಗಳೂರಿಗೆ ವಿಶೇಷ ಅವಕಾಶ

ಕರ್ನಾಟಕದ ಸುಸ್ಥಿರ ಡೇಟಾ ಸೆಂಟರ್ ವಿಸ್ತರಣೆಯಲ್ಲಿ ಮಂಗಳೂರು ಪ್ರಮುಖ ಸ್ಥಳವಾಗಿ ಹೊರಹೊಮ್ಮುವ ಸಾಧ್ಯತೆಯನ್ನು ನೀತಿ ಗುರುತಿಸಿದೆ. ಕರಾವಳಿ ಪ್ರದೇಶದ ಸಂಪರ್ಕ, ಭವಿಷ್ಯದ ಕೇಬಲ್ ಲ್ಯಾಂಡಿಂಗ್ ಮೂಲಸೌಕರ್ಯ ಮತ್ತು ಇತರೆ ಅನುಕೂಲತೆಗಳನ್ನು ಬಳಸಿಕೊಂಡು ಬೆಂಗಳೂರಿನ ಹೊರಗೂ ಡೇಟಾ ಸೆಂಟರ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಉದ್ದೇಶವಿದೆ ಎಂದು ವಿವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಮಂಗಳೂರಿನಲ್ಲಿ ಸಮುದ್ರದಡಿ ಕೇಬಲ್ ಲ್ಯಾಂಡಿಂಗ್ ವ್ಯವಸ್ಥೆಯ ಸಾಧ್ಯತೆ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ.

₹206.50 ಕೋಟಿ ಹೆಚ್ಚುವರಿ ಪ್ರೋತ್ಸಾಹಕ

ಹಣಕಾಸು ಇಲಾಖೆಯ ಪರಿಶೀಲನೆಯ ನಂತರ ಬಂಡವಾಳ ಸಬ್ಸಿಡಿ, ವೀಲಿಂಗ್ ಶುಲ್ಕ ಮರುಪಾವತಿ, ಡಿಮ್ಯಾಂಡ್ ಸೆಂಟರ್ ಪ್ರೋತ್ಸಾಹ ಮತ್ತು R&D ಬೆಂಬಲ ಸೇರಿದಂತೆ ಕೆಲವು ಪ್ರಮುಖ ಪ್ರೋತ್ಸಾಹಕಗಳ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಪರಿಷ್ಕರಣೆಗಳಿಂದ ಒಟ್ಟು ₹206.50 ಕೋಟಿ ಹೆಚ್ಚುವರಿ ಮೊತ್ತವನ್ನು ಪ್ರಸ್ತಾಪಿಸಲಾಗಿದ್ದು, ಅಂತಿಮವಾಗಿ ನೀತಿಯ ಒಟ್ಟು ಬಜೆಟ್ ₹1,300.45 ಕೋಟಿಗೆ ನಿಗದಿಯಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್ ಮೂಲಸೌಕರ್ಯದ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಕರ್ನಾಟಕದ ಮುಂದಿನ ಹಂತದ ಡಿಜಿಟಲ್ ಬೆಳವಣಿಗೆ ಸುಸ್ಥಿರವಾಗಿರಬೇಕು ಎಂಬ ಉದ್ದೇಶದಿಂದ ಹೊಸ ನೀತಿಯಲ್ಲಿ ವಿದ್ಯುತ್ ಮತ್ತು ನೀರಿನ ದಕ್ಷತೆ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಹಾಗೂ ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ಹೂಡಿಕೆಗಳಿಗೆ ಒತ್ತು ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Share

You cannot copy content of this page