ಬೆಂಗಳೂರು:ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಅನುಷ್ಠಾನಗೊಂಡರೆ ಅದು ಮಲೆನಾಡು, ಕರಾವಳಿ ಹಾಗೂ ಪರಿಸರ ಸೂಕ್ಷ್ಮ ವಲಯದ ಜನರ ಬದುಕಿಗೆ ‘ಮರಣ ಶಾಸನ’ವಾಗಲಿದೆ. ಈಗಿರುವ ಕಠಿಣ ಕಾನೂನುಗಳ ನಡುವೆಯೇ ಬದುಕು ನಡೆಸುವುದು ದುಸ್ತರವಾಗಿರುವಾಗ, ಈ ವರದಿ ಜಾರಿಯಾದರೆ ಜನಸಾಮಾನ್ಯರು ಜೀವಿಸುವುದೇ ಸಾಧ್ಯವಿಲ್ಲ” ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ವರದಿಯಲ್ಲಿರುವ ನ್ಯೂನತೆಗಳು, ಸ್ಥಳೀಯ ಜನರ ಸಮಸ್ಯೆಗಳು ಹಾಗೂ ಸರ್ಕಾರದ ಮುಂದಿನ ನಡೆ ಕುರಿತು ಕಳಕಳಿಯ ವಿಚಾರಗಳನ್ನು ಮಂಡಿಸಿದರು.
ನಾವೇ ನಿಜವಾದ ಪರಿಸರ ಪ್ರೇಮಿಗಳು:
ಭಾರತೀಯ ಸಂಸ್ಕೃತಿಯಲ್ಲಿ ಪರಿಸರವನ್ನು ಕೇವಲ ಪ್ರೀತಿಸುವುದಿಲ್ಲ, ಪೂಜಿಸುತ್ತೇವೆ. ಬಿಳಿಗಿರಿ ರಂಗನಾಥ, ಮಲೈ ಮಹದೇಶ್ವರ ಹಾಗೂ ಚಾಮುಂಡಿ ಬೆಟ್ಟದಂತಹ ಶ್ರದ್ಧಾ ಕೇಂದ್ರಗಳು ಕಾಡಿನಲ್ಲೇ ಇವೆ. ಆಲದ ಮರ, ಅರಳಿ ಮರಗಳನ್ನು ದೈವ ರೂಪದಲ್ಲಿ ಕಾಣುವ ನಮಗೆ ಪಾಶ್ಚಿಮಾತ್ಯರಿಂದ ಪರಿಸರ ಕಾಳಜಿ ಕಲಿಯಬೇಕಾದ ಅಗತ್ಯವಿಲ್ಲ.
ಜನಸಂಖ್ಯೆ ನೆಪ, ಕಾಡುಪ್ರಾಣಿಗಳ ಉಪಟಳ ನಿರ್ಲಕ್ಷ್ಯ: ವರದಿಯಲ್ಲಿ ‘ಹ್ಯಾಬಿಟ್ಯಾಟ್ ಪ್ರೆಶರ್’ (ಮಾನವ ವಸತಿ ಒತ್ತಡ) ಹೆಚ್ಚಾಗಿದೆ ಎಂದು ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಚಿಕ್ಕಮಗಳೂರು (0.28%), ಕೊಡಗು (1.13%) ಹಾಗೂ ಹಾಸನದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಋಣಾತ್ಮಕ ಅಥವಾ ಅತೀ ಕಡಿಮೆಯಾಗಿದೆ. ಯುವಕರು ನೌಕರಿ ಅರಸಿ ನಗರಗಳಿಗೆ ವಲಸೆ ಹೋಗಿದ್ದು, ಊರುಗಳಲ್ಲಿ ವೃದ್ಧರು ಮಾತ್ರ ಉಳಿದಿದ್ದಾರೆ. ವರದಿಯಲ್ಲಿ ಕಾಡುಪ್ರಾಣಿಗಳ ಸಂಖ್ಯೆ ವಿಪರೀತ ಹೆಚ್ಚಾಗಿರುವುದರ ಬಗ್ಗೆ ಅಥವಾ ಅವುಗಳಿಂದ ರೈತರಿಗಾಗುತ್ತಿರುವ ಹಾನಿಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ವನ್ಯಜೀವಿಗಳ ಹಾವಳಿ ಹಾಗೂ ಅರಣ್ಯ ಇಲಾಖೆ ಕಿರುಕುಳ: ಕನಕಪುರ, ಕುಣಿಗಲ್, ಮಾಗಡಿ ಸೇರಿದಂತೆ ಬಯಲುಸೀಮೆ ಭಾಗಗಳಲ್ಲೂ ಚಿರತೆ, ಕಾಡುಹಂದಿ ಹಾಗೂ ಆನೆಗಳ ಹಾವಳಿ ವಿಪರೀತವಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಆನೆಗಳು ಒಂದೇ ರಾತ್ರಿಯಲ್ಲಿ ನಾಶಪಡಿಸುತ್ತಿವೆ. ಬೆಳಗಿನ ಜಾವ ಆನೆಗಳ ತುಳಿತಕ್ಕೆ ಸಿಲುಕಿ ಬಡ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತ, ಅರಣ್ಯದ ಅಂಚಿನಲ್ಲಿರುವ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದ ಜನರಿಗೆ ಮೂಲಸೌಕರ್ಯ ಕಲ್ಪಿಸಲು, ಕುಡಿಯುವ ನೀರಿನ ಪೈಪ್‌ಲೈನ್ ಅಥವಾ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ತೀವ್ರ ಕಿರುಕುಳ ನೀಡುತ್ತಿದೆ.
ಶ್ರೀಲಂಕಾ ಮಾದರಿ-ಆತುರ ಬೇಡ: ಏಕಾಏಕಿ ಸಾವಯವ ಕೃಷಿ ಜಾರಿಗೆ ತಂದು ಶ್ರೀಲಂಕಾ ದೇಶವೇ ಆರ್ಥಿಕ ಹಾಗೂ ಆಹಾರ ಬಿಕ್ಕಟ್ಟಿಗೆ ಸಿಲುಕಿದ್ದನ್ನು ನೆನಪಿಸಿದ ರವಿ, ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸದೆ ಇಂತಹ ಕಠಿಣ ನಿಯಮಗಳನ್ನು ಹೇರುವುದು ಅಪಾಯಕಾರಿ ಎಂದರು.
ಪ್ರವಾಸೋದ್ಯಮ ಮತ್ತು ಕೃಷಿಗೆ ಉತ್ತೇಜನ ಅಗತ್ಯ: ಪ್ರಕೃತಿಗೆ ಹಾನಿಯಾಗದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಬೆಳೆಸಬೇಕು. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಿ ಜನ ವಲಸೆ ಹೋಗುವುದನ್ನು ತಡೆಯಬೇಕು. ಸಂಪೂರ್ಣ ಮರಳು ಗಣಿಗಾರಿಕೆ ನಿಷೇಧಿಸುವುದು ಅವೈಜ್ಞಾನಿಕ, ಸ್ಥಳೀಯರ ಮನೆ ನಿರ್ಮಾಣಕ್ಕೆ ನಿಯಮಾವಳಿಗೊಳಪಟ್ಟು ಮರಳು ಸಿಗುವಂತಾಗಬೇಕು.
ಪಕ್ಷಾತೀತ ಒಕ್ಕೂಟ ಹಾಗೂ ಕೇಂದ್ರದ ಮೇಲೆ ಒತ್ತಡ: ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಸೃಷ್ಟಿಸಿರುವ ಜನಾಂದೋಲನ ಮತ್ತು ಕರೆದಿರುವ ವಿಶೇಷ ಅಧಿವೇಶನ ಶ್ಲಾಘನೀಯ. ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು (ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್, ತಮಿಳುನಾಡು) ಈಗಾಗಲೇ ಈ ವರದಿಗೆ ಆಕ್ಷೇಪಣೆ ಸಲ್ಲಿಸಿವೆ. ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ, ಅಗತ್ಯ ಕಾನೂನು ತಿದ್ದುಪಡಿ ತರಲು ಒತ್ತಡ ಹೇರಬೇಕೆಂದು ಅವರು ಸದನವನ್ನು ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ಮತ್ತು ಅರಣ್ಯ ಅಧಿಕಾರಿಗಳ ಧೋರಣೆ ಕುರಿತು ವಿಧಾನ ಪರಿಷತ್ತಿನಲ್ಲಿ ಎಸ್.ಎಲ್ ಭೋಜೇಗೌಡ ಅವರ ಆಕ್ರೋಶ
ವಿಧಾನ ಪರಿಷತ್ತಿನ ವಿಶೇಷ ಚರ್ಚೆಯ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅವರು ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ ಮತ್ತು ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಕಸ್ತೂರಿರಂಗನ್ ಮತ್ತು ಗಾಡ್ಗಿಲ್ ವರದಿ:
ಕಸ್ತೂರಿರಂಗನ್ ಹಾಗೂ ಗಾಡ್ಗಿಲ್ ವರದಿಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವೇನೂ ಇಲ್ಲ. ಗಾಡ್ಗಿಲ್ ವರದಿ ನೀಡಿದ್ದ ವಿಸ್ತೀರ್ಣದಲ್ಲಿ ಕಸ್ತೂರಿರಂಗನ್ ವರದಿಯು ಸ್ವಲ್ಪ ಕಡಿತಗೊಳಿಸಿದೆಯಷ್ಟೇ. ಚಿಕ್ಕಮಗಳೂರಿನ ಉದಾಹರಣೆ ನೀಡಿದ ಅವರು, ತಮ್ಮ ವ್ಯಾಪ್ತಿಯ 9 ಹಳ್ಳಿಗಳಲ್ಲಿ ಸುಮಾರು 247 ಎಕರೆ ಪ್ರದೇಶ ಕಸ್ತೂರಿರಂಗನ್ ವರದಿಯಡಿ ಬಂದರೆ, 300ಕ್ಕೂ ಹೆಚ್ಚು ಎಕರೆ ಗಾಡ್ಗಿಲ್ ವರದಿಯಡಿ ಬರುತ್ತದೆ ಎಂದರು.
ಅರಣ್ಯ ನಾಶಕ್ಕೆ ಅಧಿಕಾರಿಗಳೇ ಹೊಣೆ: ಮಲೆನಾಡಿನ ಕಾಡುಗಳು ನಾಶವಾಗಲು ಅಲ್ಲಿನ ರೈತರು ಅಥವಾ ಸಾಮಾನ್ಯ ಜನರಲ್ಲ, ಬದಲಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ನೇರ ಹೊಣೆ ಎಂದು ಆಪಾದಿಸಿದರು. ಕೆಳಹಂತದ ಅಧಿಕಾರಿಗಳಿಗೆ ಬೆಂಬಲ ನೀಡದ ಅಧಿಕಾರಿಗಳು, ಕಾಡುಗಳನ್ನು ಉಳಿಸುವ ಬದಲು ಹಾಳುಮಾಡಿದ್ದಾರೆ ಎಂದು ಕಿಡಿಕಾರಿದರು.
ವೈಜ್ಞಾನಿಕ ತನಿಖೆಗೆ ಒತ್ತಾಯ: ಭದ್ರಾ ಅಭಯಾರಣ್ಯ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕೈಗೊಂಡ ಯೋಜನೆಯಿಂದ ಎಷ್ಟು ಅರಣ್ಯ ಪ್ರದೇಶ ನಿಜವಾಗಿ ಉಳಿದಿದೆ ಎಂಬುದರ ಕುರಿತು ಆತ್ಮಾವಲೋಕನ ಹಾಗೂ ಸತ್ಯಾಸತ್ಯತೆ ತಿಳಿಯಲು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮಲೆನಾಡಿಗರ ಜೀವನೋಪಾಯ ರಕ್ಷಣೆಗೆ ಮನವಿ: ದಶಕಗಳಿಂದ ಮಲೆನಾಡಿನಲ್ಲಿ ಜೀವಿಸುತ್ತಿರುವ ರೈತರು ಹಾಗೂ ಸ್ಥಳೀಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸದನದ ಗಮನ ಸೆಳೆದರು.
ಪಶ್ಚಿಮ ಘಟ್ಟ ಸಂರಕ್ಷಣೆ ಅತ್ಯವಶ್ಯಕ : ವಿಶೇಷ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಒತ್ತಾಯ
ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಸದಸ್ಯ ಡಿ.ಎಸ್. ಅರುಣ್ ಅವರು ರೈತರ ಮತ್ತು ಮಲೆನಾಡಿನ ಜನರ ಆತಂಕಗಳನ್ನು ಸರ್ಕಾರದ ಗಮನಕ್ಕೆ ತಂದಿದರು.
ಮಲೆನಾಡು ಪ್ರದೇಶ ಮತ್ತು ರೈತರ ಆತಂಕ:
ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಜನರಲ್ಲಿ ಮತ್ತು ರೈತರಲ್ಲಿ ತೀವ್ರ ಆತಂಕವಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಅಡಿಕೆ ಬೆಲೆಯ ಏರಿಳಿತ ಹಾಗೂ ಮಳೆ ಕೊರತೆಯಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ವರದಿ ಜಾರಿಯ ಭೀತಿಯಿಂದ ಭೂಮಿಯ ಮೌಲ್ಯ ಕುಸಿಯುತ್ತಿದ್ದು, ಸುಮಾರು 50 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಈ ಹಿಂದಿನ ವರ್ಷಗಳಿಂದ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಈ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದಾಗ್ಯೂ, ಈಗ 7ನೇ ಬಾರಿಗೆ ಕರಡು ಅಧಿಸೂಚನೆ (Draft Notification) ಹೊರಬಿದ್ದಿದ್ದು, ಸುಪ್ರೀಂ ಕೋರ್ಟ್, ಎನ್‌ಜಿಟಿ (NGT) ಮತ್ತು ಕೇಂದ್ರ ಸರ್ಕಾರದ ಒತ್ತಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಸರ್ವಪಕ್ಷ ನಿಯೋಗ ಮತ್ತು ಕೇರಳ ಮಾದರಿ ಸಂಧಾನ:
ಕೇವಲ ವರದಿಯನ್ನು ‘ಬೇಡ’ ಎಂದು ನಿರಾಕರಿಸುವ ಬದಲು, ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವು ಕೇಂದ್ರ ಸರ್ಕಾರಕ್ಕೆ ತೆರಳಿ ಮಾತುಕತೆ ನಡೆಸಬೇಕು ಎಂದು ಅರುಣ್ ಅವರು ಸಲಹೆ ನೀಡಿದರು. ಕೇರಳ ಸರ್ಕಾರವು ನೈಜ ಸ್ಥಿತಿಯನ್ನು ಮನವರಿಕೆ ಮಾಡಿ ತನ್ನ ವ್ಯಾಪ್ತಿಯ ಇಎಸ್‌ಝೆಡ್ (Eco-Sensitive Zone) ಪ್ರದೇಶವನ್ನು 13,108 ಚ.ಕಿ.ಮೀ ನಿಂದ 9,993 ಚ.ಕಿ.ಮೀ ಗೆ ಕಡಿಮೆ ಮಾಡಿಕೊಂಡ ಮಾದರಿಯನ್ನು ಕರ್ನಾಟಕವೂ ಅನುಸರಿಸಬೇಕು ಎಂದು ಪ್ರತಿಪಾದಿಸಿದರು.
ಸ್ಥಳೀಯರ ವಾಸ್ತವ ಸ್ಥಿತಿ ಮತ್ತು ಗ್ರಾಮೀಣ ಸಭೆಗಳ ಅಗತ್ಯ:
ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಗತ್ಯ ಎಂಬ ವಿಷಯದಲ್ಲಿ ಎರಡನೇ ಮಾತಿಲ್ಲ. ಆದರೆ, ಲಿಂಗನಮಕ್ಕಿ, ಚಕ್ರಾ, ವರಾಹಿ ಮತ್ತು ಸಾವೇಹಕ್ಲು ಜಲಾಶಯಗಳ ನಿರ್ಮಾಣದ ಸಮಯದಲ್ಲಿ ದಶಕಗಳ ಹಿಂದೆ ತಮ್ಮ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾದ ಜನರಿಗೆ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಆಂಗ್ಲ ಭಾಷೆಯಲ್ಲಿರುವ ಈ ಕರಡು ಅಧಿಸೂಚನೆಯನ್ನು ಕನ್ನಡಕ್ಕೆ ಅನುವಾದಿಸಿ, ಪ್ರತಿಯೊಂದು ಗ್ರಾಮ ಪಂಚಾಯತಿ ಹಾಗೂ ಗ್ರಾಮ ಸಭೆಗಳಲ್ಲಿ ವಿಸ್ತೃತವಾಗಿ ಚರ್ಚಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು. ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ನೈಜ ಪರಿಸರವಾದಿಗಳು ಮತ್ತು ರೈತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕ- ಮರುಪರಿಶೀಲನೆಗೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಆಗ್ರಹ
ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯ (ESA – Ecologically Sensitive Area) ಕುರಿತು ಹೊರಡಿಸಿರುವ ಕರಡು ಅಧಿಸೂಚನೆಯು (Draft Notification) ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಜನರ ಜೀವನೋಪಾಯ, ಕೃಷಿ ಮತ್ತು ಮೂಲಸೌಕರ್ಯಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಈ ಕುರಿತು ವೈಜ್ಞಾನಿಕವಾಗಿ ಮರುಸಮೀಕ್ಷೆ ನಡೆಸಿ ಆಕ್ಷೇಪಣೆ ಸಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ತಿಳಿಸಿದರು.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಎಷ್ಟು ಮುಖ್ಯವೋ, ಅದೇ ರೀತಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಜನರ, ಕೃಷಿಕರ ಹಾಗೂ ಶ್ರಮಿಕರ ಹಿತಾಸಕ್ತಿಯನ್ನು ಕಾಪಾಡುವುದು ಸಹ ಅಷ್ಟೇ ಮುಖ್ಯವಾಗಿದೆ.
ಕಸ್ತೂರಿ ರಂಗನ್ ವರದಿಯು ಉಪಗ್ರಹ (Satellite) ಚಿತ್ರಗಳು ಹಾಗೂ ಇಲಾಖಾ ಮಾಹಿತಿಯ ಆಧಾರದ ಮೇಲೆ ಕರಡು ಸಿದ್ಧಪಡಿಸಿದಂತೆ ಕಾಣುತ್ತಿದ್ದು, ಭೌತಿಕವಾಗಿ ವಾಸ್ತವ ಸ್ಥಿತಿಯನ್ನು (Ground Reality) ಪರಿಶೀಲಿಸಿಲ್ಲ. ಇದರಿಂದಾಗಿ ಅರಣ್ಯವಲ್ಲದ, ಹಳ್ಳಿಗಳು ಹಾಗೂ ಕೃಷಿ ಭೂಮಿಗಳಿರುವ ಪ್ರದೇಶಗಳೂ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಟ್ಟಿವೆ.
ಕರ್ನಾಟಕದ 10 ಜಿಲ್ಲೆಗಳ ಸುಮಾರು 1,499 ಕ್ಕೂ ಹೆಚ್ಚು ಗ್ರಾಮಗಳು ಹಾಗೂ 20,668 ಚದರ ಕಿಲೋಮೀಟರ್‌ಗೂ ಹೆಚ್ಚಿನ ಪ್ರದೇಶವು ಈ ಅಧಿಸೂಚನೆಯ ವ್ಯಾಪ್ತಿಗೆ ಬರಲಿದ್ದು, ಬೆಳಗಾವಿ (ಖಾನಾಪುರ ಭಾಗ), ಕರಾವಳಿ, ಮಲೆನಾಡು ಹಾಗೂ ಚಾಮರಾಜನಗರದವರೆಗಿನ ಪ್ರದೇಶಗಳ ಮೇಲೆ ಇದು ಪರಿಣಾಮ ಬೀರಲಿದೆ.
ನಿಯಮಗಳು ಬಿಗಿಯಾದರೆ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳಾದ ಮನೆ ನಿರ್ಮಾಣ, ರಸ್ತೆ, ವಿದ್ಯುತ್ ಸಂಪರ್ಕ, ಆಸ್ಪತ್ರೆ ಹಾಗೂ ತುರ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವುದು ಕಷ್ಟಕರವಾಗಲಿದೆ.
ಅಕ್ರಮ ಗಣಿಗಾರಿಕೆ ಅಥವಾ ಪರಿಸರ ನಾಶ ಮಾಡುವ ಚಟುವಟಿಕೆಗಳಿಗೆ ತಮ್ಮ ವಿರೋಧವಿದೆ, ಆದರೆ ಆರ್ಥಿಕ ಸುಸ್ಥಿರತೆ ಹಾಗೂ ಸಣ್ಣ ಉದ್ಯೋಗಗಳನ್ನು ನಂಬಿರುವ ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಬಾರದು.
ಸರ್ವಪಕ್ಷಗಳ ಒಮ್ಮತದ ನಿರ್ಧಾರಕ್ಕೆ ಮನವಿ: ಹಿಂದೆ ಬಂಗಾರಪ್ಪ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕಾವೇರಿ ಹಾಗೂ ಗಡಿ ವಿಚಾರಗಳಲ್ಲಿ ವಿಶೇಷ ಅಧಿವೇಶನ ಕರೆದು ರಾಜ್ಯದ ಹಿತ ಕಾಯ್ದಂತೆ, ಈ ವಿಷಯದಲ್ಲೂ ಪಕ್ಷಾತೀತವಾಗಿ ಒಮ್ಮತದಿಂದ ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ವರದಿ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಸ್ತೂರಿರಂಗನ್ ವರದಿ ಜಾರಿ: ಗ್ರಾಮೀಣ ಜನರ ಜೀವನ ಸಂಕಷ್ಟಕ್ಕೆ – ಪರಿಷತ್ ಸದಸ್ಯ ಐವಾನ್ ಡಿ.ಸೋಜಾ
ಕಸ್ತೂರಿರಂಗನ್ ವರದಿಯು ಗ್ರಾಮೀಣ ಭಾಗದ ರೈತರು, ಬಡವರು ಮತ್ತು ಸಣ್ಣ ಹಿಡುವಳಿದಾರರ ಜೀವನದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರಲಿದ್ದು, ಜನರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣ ಮಾಡಲಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿ.ಸೋಜಾ ಅವರು ತೀವ್ರ ಕಳವಳ ವ್ಯಕ್ತಪಡಿಸಿರರು.
ವಿಶೇಷ ಅಧಿವೇಶನ ಅಥವಾ ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಶೇಷ ಕಲಾಪವು ಸಾರ್ವಜನಿಕರು ಹಾಗೂ ಭಾಗೀದಾರರ (Stakeholders) ಕಷ್ಟ-ನಷ್ಟಗಳನ್ನು ಆಲಿಸಲು ಉತ್ತಮ ವೇದಿಕೆಯಾಗಿದೆ ಎಂದು ಸರ್ಕಾರದ ನಡೆಗೆ ಅಭಿನಂದನೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ 44 ಹಳ್ಳಿಗಳಿಗೆ ಧಕ್ಕೆ :
ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳಾದ ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ವ್ಯಾಪ್ತಿಯ ಸುಮಾರು 44 ಗ್ರಾಮಗಳು ಕಸ್ತೂರಿರಂಗನ್ ವರದಿಯ ಅಧಿಸೂಚನೆಗೊಳಪಡುತ್ತವೆ.
ಬೆಳ್ತಂಗಡಿ ತಾಲೂಕು: ಕಳಂಜ, ಮಲವಂತಿಗೆ, ನಾಡ, ನಾವೂರು, ನೆರಿಯ, ಕಾಯ್ಕಂಬ, ಶಿವಾಜೆ, ಶಿಶಿಲ, ನಾರಾವಿ, ನಾವರ, ಸವಣಾಲು, ಸುಲ್ಕೇರಿ ಮುಂತಾದ 18 ಗ್ರಾಮಗಳು.
ಕಡಬ ತಾಲೂಕು: ಅಲಂತಾಯ, ಐತ್ಯಾ, ರೇಣಜಿ, ದೋಲ್ಪಾಡಿ, ಗೋಳಿಬೊಟ್ಟು, ಐಚಲಪಾಡಿ, ಕೊಂಬಾರು, ರೇಂಜಾಡಿ, ಶಿರಾಡಿ, ಸಿರಿಬಾಗಿಲು, ಕೊಳ್ಪೆ, ಸುಬ್ರಹ್ಮಣ್ಯ ಸೇರಿ 12 ಗ್ರಾಮಗಳು.
ಸುಳ್ಯ ತಾಲೂಕು: ಐನಕಲ್ಲು, ಅಲೆಟ್ಟಿ, ಅರಂತೋಡು, ಬಾಳುಗೋಡು, ದೇವಚಳ್ಳ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಮಂಡಕೋಲು, ಸಂಪಾಜೆ, ತೊಡಿಕಾನ, ಯಡಮಂಗಲ ಸೇರಿದಂತೆ 14 ಗ್ರಾಮಗಳು.
ವರದಿ ಜಾರಿಯಾದರೆ ಸ್ಥಳೀಯರು ತಮ್ಮ ಸ್ವಂತ ಜಾಗದಲ್ಲೂ ಮುಕ್ತವಾಗಿ ಜೀವಿಸಲು ಸಾಧ್ಯವಿಲ್ಲ.
ಮನೆಗಳಿಗೆ ಬಣ್ಣ ಬಳಿಯುವುದು, ಮನೆ ದುರಸ್ತಿ ಮಾಡುವುದು, ತೋಟಗಳಲ್ಲಿ ರಬ್ಬರ್ ಹಾಲಿನ ಪೇಸ್ಟ್ ತೆಗೆಯುವುದು, ಕೃಷಿ ಚಟುವಟಿಕೆ ಮಾಡುವುದು ಅಥವಾ ಶಾಲೆಗಳ ಅಭಿವೃದ್ಧಿಗೂ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ.
ವಿದ್ಯುತ್ ಸಂಪರ್ಕ, ಕಲ್ಲು ಕ್ವಾರಿ, ರಸ್ತೆ/ಸೇತುವೆ ನಿರ್ಮಾಣಕ್ಕೂ ನಿರ್ಬಂಧ ಹೇರಲಾಗುತ್ತಿದ್ದು, ಸಣ್ಣಪುಟ್ಟ ಕೆಲಸಗಳಿಗೂ ಅರಣ್ಯ ಇಲಾಖೆ ಕಡೆಯಿಂದ ಕೇಸ್ ಹಾಕುವ ಬೆದರಿಕೆ ಎದುರಾಗುತ್ತಿದೆ.
ಏರಿಯಲ್ ಸರ್ವೇ ಬದಲು ‘ಫಿಜಿಕಲ್ ಸರ್ವೇ’ (ಭೌತಿಕ ಸಮೀಕ್ಷೆ) ಅಗತ್ಯ:
ಹಿಂದೆ ಹೆಲಿಕಾಪ್ಟರ್ ಮೂಲಕ ನಡೆಸಿದ ಏರಿಯಲ್ ಸರ್ವೇಯಿಂದಾಗಿ (Aerial Survey) ಅಡಿಕೆ, ರಬ್ಬರ್ ಹಾಗೂ ತೆಂಗಿನ ತೋಟಗಳು ಕಾಡಿನಂತೆ ಕಂಗೊಳಿಸಿದ್ದು, ಅದನ್ನು ‘ಡೀಮ್ಡ್ ಫಾರೆಸ್ಟ್’ (Deemed Forest) ಎಂದು ತಪ್ಪಾಗಿ ಗುರುತಿಸಲಾಗಿದೆ. ಅಧಿಕಾರಿಗಳು ಪ್ರತ್ಯಕ್ಷವಾಗಿ ಭೂಮಿಗೆ ಇಳಿದು ಭೌತಿಕ ಸಮೀಕ್ಷೆ (Physical Survey/Ground Verification) ನಡೆಸಿಲ್ಲ. ಕೇರಳ ಮಾದರಿಯಲ್ಲಿ ಡಾ. ಉಮ್ಮನ್ ಕಮಿಟಿಯಂತೆ ಪ್ರತ್ಯಕ್ಷ ಸಮೀಕ್ಷೆ ನಡೆಸಿ, ನೈಜ ವರದಿ ಸಿದ್ಧಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ವೈಜ್ಞಾನಿಕ ತನಿಖೆ ಹಾಗೂ ಸರ್ಕಾರದ ಸ್ಪಷ್ಟ ತೀರ್ಮಾನ ಅಗತ್ಯ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಸಾಂಪ್ರದಾಯಿಕವಾಗಿ ಉತ್ತರಗಳನ್ನು ನೀಡಿ ವರದಿಗಳನ್ನು ಮರುಕಳುಹಿಸುವ ಬದಲು, ಸುಪ್ರೀಂ ಕೋರ್ಟ್ ಅಥವಾ NGT (ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ) ಮುಂದೆ ವೈಜ್ಞಾನಿಕ ಆಧಾರಿತ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕಿತ್ತು. ಈವರೆಗೂ ಸೂಕ್ತ ಸಂಶೋಧನೆ ಮತ್ತು ವೈಜ್ಞಾನಿಕ ಸಮೀಕ್ಷೆ ನಡೆಸದಿರುವುದೇ ಇಂದಿನ ಸಮಸ್ಯೆಗೆ ಕಾರಣವಾಗಿದೆ.
ಪರಿಸರ ಸಂರಕ್ಷಣೆಯ ಜೊತೆಗೆ ಜನಸಾಮಾನ್ಯರು, ರೈತರು ಹಾಗೂ ಸ್ಥಳೀಯ ನಿವಾಸಿಗಳ ಹಿತರಕ್ಷಣೆಯೂ ಮುಖ್ಯ. ಆದ್ದರಿಂದ ರಾಜ್ಯ ಸರ್ಕಾರವು ಈ ಕುರಿತು ಶಾಸನಸಭೆಯಲ್ಲಿ ಸ್ಪಷ್ಟ ಮತ್ತು ದೃಢ ತೀರ್ಮಾನ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಗ್ರಾಮೀಣ ಜನರನ್ನು ಕಸ್ತೂರಿರಂಗನ್ ವರದಿಯ ಭೀತಿಯಿಂದ ಮುಕ್ತಗೊಳಿಸಬೇಕು ಎಂದು ಐವಾನ್ ಡಿ.ಸೋಜಾ ಅವರು ತಿಳಿಸಿದರು.
ಕಸ್ತೂರಿ ರಂಗನ್ ವರದಿ ಮತ್ತು ಪರಿಸರ ನೀತಿಗಳಿಂದ ಮಲೆನಾಡು ಹಾಗೂ ರೈತರ ಮೇಲೆ ಪರಿಣಾಮ : ವಿಧಾನ ಪರಿಷತ್ತಿನಲ್ಲಿ ಧನಂಜಯ ಸರ್ಜಿ ಕಳವಳ
ಇಂದು ಕಸೂರಿ ರಂಗನ್ ವರದಿ ಕುರಿತು ವಿಶೇಷ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಅವರು, ಪಶ್ಚಿಮ ಘಟ್ಟಗಳ ಸಂರಕ್ಷಣೆ, ಕಸ್ತೂರಿ ರಂಗನ್ ವರದಿ ಜಾರಿ ಹಾಗೂ ಪರಿಸರ ನೀತಿಗಳ ಅನುಷ್ಠಾನದ ವೇಳೆ ಮಲೆನಾಡಿನ ಜನರ ಜೀವನೋಪಾಯಕ್ಕೆ ಮತ್ತು ಅಭಿವೃದ್ಧಿಗೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ರಾಜಕೀಯ ಆರೋಪಗಳಲ್ಲಿ ತೊಡಗದೆ, ಸ್ಥಳೀಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳ ವಿಚಾರದಲ್ಲಿ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗದೆ ರಾಜಕೀಯ ಲಾಭಕ್ಕಿಂತ ಜನರ ಬದುಕನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನಕ್ಕೆ ಬರಬೇಕು. ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ‘ಶ್ವಾಸಕೋಶ’ದಂತೆ (Lungs) ಕಾರ್ಯನಿರ್ವಹಿಸುತ್ತಿದ್ದು, ಅಪಾರ ಪ್ರಮಾಣದ ಜೀವವೈವಿಧ್ಯತೆ ಹಾಗೂ ಜಲಮೂಲಗಳನ್ನು ಹೊಂದಿವೆ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದೆ ಕೈಗೊಳ್ಳುವ ನಿರ್ಧಾರಗಳು ವಿಪರೀತ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ.
ಶಿವಮೊಗ್ಗ ಜಿಲ್ಲೆಯ ಉದಾಹರಣೆ ನೀಡಿದ ಅವರು, ಸ್ಥಳೀಯ ಕ್ವಾರಿಗಳನ್ನು ಮುಚ್ಚಿದ್ದರಿಂದ ಗೃಹ ಮತ್ತು ಮೂಲಸೌಕರ್ಯ ನಿರ್ಮಾಣಗಳಿಗೆ ಕಲ್ಲು-ಬಂಡೆಗಳನ್ನು ತರಲು ನೆರೆ ಜಿಲ್ಲೆಗಳಿಂದ ಪ್ರತಿದಿನ ನೂರಾರು ಲಾರಿಗಳಲ್ಲಿ ನೂರಾರು ಕಿಲೋಮೀಟರ್ ಸಾಗಾಟ ಮಾಡಬೇಕಾಗಿದೆ. ಇದರಿಂದ ವರ್ಷಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ವ್ಯರ್ಥವಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಭದ್ರಾ ಮತ್ತು ತುಂಗಾ ನದಿಗಳ ನೀರಿನ ನಿರ್ವಹಣೆ, ಮಲೆನಾಡಿನ ರೈತರ ಬೆಳೆ ಹಾನಿ, ಕಾಡಾನೆ ಮತ್ತು ವನ್ಯಜೀವಿಗಳ ಉಪಟಳ, ಶರಾವತಿ ಸಂತ್ರಸ್ತರ ದಶಕಗಳ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕದಿರುವುದನ್ನು ಸದನದ ಗಮನಕ್ಕೆ ತಂದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಸ್ಥಳೀಯ ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಬಹುದು. ಕಾಡುಗಳನ್ನು ನೈಜವಾಗಿ ರಕ್ಷಿಸಿಕೊಂಡು ಬಂದಿರುವುದು ಅಲ್ಲಿನ ಜನರೇ ಹೊರತು ಕೇವಲ ಸರ್ಕಾರಗಳಲ್ಲ. ಆದ್ದರಿಂದ ರೈತರು ಮತ್ತು ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಷ್ಪಕ್ಷಪಾತವಾಗಿ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಕಸ್ತೂರಿ ರಂಗನ್ ವರದಿ ಕುರಿತು ಪರಿಶೀಲನೆಗೆ ವಿಧಾನಪರಿಷತ್ ಸದಸ್ಯ ಮೋಹನ್ ಒತ್ತಾಯ
ವಿಧಾನಪರಿಷತ್ ಸದಸ್ಯ ಮೋಹನ್ ಅವರು ಮಾತನಾಡಿ, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವಿವಿಧ ಉದ್ದೇಶಗಳಿಗಾಗಿ ಲಕ್ಷಾಂತರ ಹೆಕ್ಟೇರ್ ಅರಣ್ಯ ಭೂಮಿ ಬಳಕೆಯಾಗುತ್ತಿದ್ದು ಆನೆ, ಹುಲಿ ಹಾಗೂ ಇತರ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ಕುಗ್ಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ
“ನಾವು ಭೂಮಿಯ ಯಜಮಾನರಲ್ಲ, ಬದಲಿಗೆ ನಾವು ಈ ಭೂಮಿಯ ಒಂದು ಭಾಗ” ಎಂದು ಪ್ರತಿಪಾದಿಸಿದ ಅವರು, ಮನುಷ್ಯರಷ್ಟೇ ನದಿ, ಬೆಟ್ಟ, ಪ್ರಾಣಿ-ಪಕ್ಷಿಗಳಿಗೂ ಈ ಭೂಮಿಯ ಮೇಲೆ ಸಮಾನ ಹಕ್ಕಿದೆ ಎಂದು ನೆನಪಿಸಿದರು
ಕಸ್ತೂರಿ ರಂಗನ್ ವರದಿಯನ್ನು ಕುರುಡಾಗಿ ಒಪ್ಪಿಕೊಳ್ಳುವುದು ಅಥವಾ ಸಂಪೂರ್ಣವಾಗಿ ತಿರಸ್ಕರಿಸುವುದು ಸರಿಯಲ್ಲ ಎಂದು ಹೇಳಿದ ಅವರು, ಪರಿಸರವಾದಿಗಳು ಹಾಗೂ ತಜ್ಞರೊಂದಿಗೆ ವೈಜ್ಞಾನಿಕವಾಗಿ ಚರ್ಚಿಸಿ ವರದಿಯನ್ನು ಪುನಃ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರ್ನಾಟಕದ ಪಶ್ಚಿಮ ಘಟ್ಟಗಳು ಕಬ್ಬಿಣದ ಅದಿರು, ಮ್ಯಾಗ್ನೆಟೈಟ್, ಕ್ರೋಮೈಟ್ ಮುಂತಾದ ಅಪಾರ ಖನಿಜ ಸಂಪನ್ಮೂಲಗಳನ್ನು ಹೊಂದಿದ್ದು, ಸೂಕ್ತ ನಿಯಂತ್ರಣವಿಲ್ಲದಿದ್ದರೆ ಪರಿಸರಕ್ಕೆ ದೊಡ್ಡ ಮಟ್ಟದ ಧಕ್ಕೆಯಾಗಲಿದೆ. ಆದ್ದರಿಂದ ಸರ್ಕಾರವು ಈ ವಿಷಯದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಸಮಗ್ರ ಹಾಗೂ ನ್ಯಾಯಯುತ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು
ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ: ವಿಧಾನ ಪರಿಷತ್ತಿನಲ್ಲಿ ಸದಸ್ಯ ರಘು ಆಚಾರ್ ಸುದೀರ್ಘ ಚರ್ಚೆ
ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಕುರಿತು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ವಿಷಯ ಪ್ರಸ್ತಾಪಿಸಿ, ಅತ್ಯಂತ ಪ್ರಮುಖ ಹಾಗೂ ಅರ್ಥಪೂರ್ಣ ಚರ್ಚೆ ನಡೆಸುತ್ತಾ, ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪ್ರದೇಶದ ಉಳಿವು ಮತ್ತು ಅಲ್ಲಿನ ಜನರ ಬದುಕಿನ ಹಕ್ಕಿನ ಕುರಿತು ಚರ್ಚಿಸಲು ಈ ವಿಶೇಷ ಸದನ ಕರೆದಿರುವುದಕ್ಕಾಗಿ ಅವರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ರೈತರು, ಮೂಲವಾಸಿಗಳು ಹಾಗೂ ಸಣ್ಣ ಉದ್ದಿಮೆದಾರರು ಕಸ್ತೂರಿರಂಗನ್ ವರದಿಯ ಜಾರಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವರದಿಯಿಂದಾಗಿ ತಮ್ಮ ಮನೆ ನಿರ್ಮಾಣ, ಮನೆ ದುರಸ್ತಿ, ಸಣ್ಣ ಕೈಗಾರಿಕೆಗಳು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಲಿದೆ ಎಂಬ ಭೀತಿ ಜನರಲ್ಲಿದೆ.
ಅವೈಜ್ಞಾನಿಕ ವರದಿ ತಿರಸ್ಕಾರಕ್ಕೆ ಆಗ್ರಹ:
ಸ್ಯಾಟಿಲೈಟ್ (ಉಪಗ್ರಹ) ಚಿತ್ರಗಳನ್ನು ಮಾತ್ರ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದ್ದು, ಭೌತಿಕವಾಗಿ ಸರಿಯಾದ ಸರ್ವೇ ನೆಡೆಸಲಾಗಿಲ್ಲ. ವಾಸ್ತವ ಪರಿಸ್ಥಿತಿಗೆ ದೂರವಾಗಿರುವ ಈ ಅಧಿಸೂಚನೆಯನ್ನು ಸರ್ಕಾರ ತಿರಸ್ಕರಿಸಬೇಕು ಅಥವಾ ಅಗತ್ಯ ಬದಲಾವಣೆಗಳನ್ನು ಮಾಡಿ ಮರುಪರಿಶೀಲಿಸಬೇಕು ಎಂದು ಅವರು ಹೇಳಿದರು.
ಬೃಹತ್ ವಾಣಿಜ್ಯ ಚಟುವಟಿಕೆಗಳೇ ನಾಶಕ್ಕೆ ಕಾರಣ:
ಪ್ರಕೃತಿ ಹಾಗೂ ಅರಣ್ಯ ನಾಶಕ್ಕೆ ಸ್ಥಳೀಯ ರೈತರಾಗಲಿ ಅಥವಾ ಜನರಾಗಲಿ ಕಾರಣರಲ್ಲ. ಬದಲಾಗಿ ಬೃಹತ್ ಗಣಿಗಾರಿಕೆ, ಬೃಹತ್ ಕೈಗಾರಿಕೆಗಳು ಹಾಗೂ ರೆಸಾರ್ಟ್ ಸಂಸ್ಕೃತಿಯಂತಹ ವಾಣಿಜ್ಯಿಕ ಉದ್ದೇಶದ ದಾಳಿಗಳೇ ಪರಿಸರ ನಾಶಕ್ಕೆ ಮುಖ್ಯ ಕಾರಣವಾಗಿದ್ದು, ಇಂತಹ ಚಟುವಟಿಕೆಗಳ ಮೇಲಷ್ಟೇ ಕಟ್ಟುನಿಟ್ಟಿನ ನಿಯಂತ್ರಣ ತರಬೇಕು ಎಂದು ಆಗ್ರಹಿಸಿದರು.
ಪರಿಸರ ವಿಕೋಪಗಳ ನೆನಪು: ಇತ್ತೀಚೆಗೆ ವಯನಾಡ್ ಹಾಗೂ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪಗಳನ್ನು ಉದಾಹರಿಸಿದ ಅವರು, ಮನುಷ್ಯನು ಪ್ರಕೃತಿಯ ಮೇಲೆ ನಡೆಸುವ ಅತಿಯಾದ ಹಸ್ತಕ್ಷೇಪವು ಸುನಾಮಿ, ಭೂಕಂಪ, ಕರೋನಾದಂತಹ ಅಪಾಯಗಳ ರೂಪದಲ್ಲಿ ತಿರುಗೇಟು ನೀಡುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಪರ್ಯಾಯ ಪರಿಹಾರ ಹಾಗೂ ಸಲಹೆ:
ಸರ್ಕಾರವು ‘ಭೂ ಬ್ಯಾಂಕ್’ ಯೋಜನೆ ರೂಪಿಸಿ, ಅರಣ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ರೈತರ ಹಿತವನ್ನು ಕಾಯಬೇಕು. ಪರಿಸರ ಸಂರಕ್ಷಣೆ ಮತ್ತು ಜನರ ಜೀವನೋಪಾಯ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಂಡು, ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜನರಿಗೆ ಧೈರ್ಯ ತುಂಬುವಂತಹ ಏಕಮತೀಯ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು ಎಂದು ರಘು ಆಚಾರ್ ಅವರು ಮನವಿ ಮಾಡಿದರು.
ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯ ದುರುಪಯೋಗ: ಭೌತಿಕ ಪರಿಶೀಲನೆಗೆ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಆಗ್ರಹ
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯ್ದೆ (TSA) ನಿಯಮಗಳು ಸತ್ಯಕ್ಕೆ ದೂರವಾಗಿ ಅನುಷ್ಠಾನಗೊಳ್ಳುತ್ತಿದ್ದು, ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರು ವಿಶೇಷ ಅಧಿವೇಷನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲವೇ ಕೆಲವು ಸಂಘಟನೆಗಳ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡಜನರು ಹಾಗೂ ಮೂಲಭೂತ ಸೌಕರ್ಯ ಅಗತ್ಯವಿರುವ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಕಸ್ತೂರಿ ರಂಗನ್ ಅವರ ವರದಿಯ ಅನುಷ್ಠಾನದಿಂದ ಮೂಲಭೂತ ಸೌಕರ್ಯಗಳಿಗೆ ತೊಡಕುಂಟಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ರಸ್ತೆ, ಕಾಲುದಾರಿ, ವಿದ್ಯುತ್ ಸಂಪರ್ಕ ಹಾಗೂ ಸಣ್ಣ ಸೇತುವೆಗಳನ್ನು ನಿರ್ಮಿಸಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಅತ್ಯಂತ ಸವಾಲಿನ ಕೆಲಸವಾಗಿದೆ.
ಕೇವಲ ಹಳೆಯ ನಕ್ಷೆಗಳು ಹಾಗೂ ದಾಖಲೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವ ಬದಲು, ಸ್ಥಳಕ್ಕೆ ತೆರಳಿ ಭೌತಿಕ ಪರಿಶೀಲನೆ (Physical Verification) ನಡೆಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅನುಭವ ಇರುವ ಬೆಳೆಗಾರರನ್ನು ಒಳಗೊಂಡಂತೆ ಜಂಟಿ ಸರ್ವೇ ನಡೆಸಿ, ಸಮಗ್ರ ವರದಿ ಸಿದ್ಧಪಡಿಸ ಬೇಕು.
ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ದಿಟ್ಟ ನಿಲುವು ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಜಾರಿ: ಕೊಡುಗಿನ ರೈತರ ಹಿತರಕ್ಷಣೆಗೆ ಪರಿಷತ್ ಸದಸ್ಯ ಸುಜಾಲಪ್ಪ ಆಗ್ರಹ
ವಿಶೇಷ ಅಧಿವೇಶನದ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಸುಜಾಲಪ್ಪ ಅವರು ಕಸ್ತೂರಿರಂಗನ್ ವರದಿ ಜಾರಿಯಿಂದ ಕೊಡಗು ಜಿಲ್ಲೆಯ ಜನರ ಹಾಗೂ ರೈತರ ಮೇಲಾಗುವ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ಗಾಡ್ಗೀಲ್ ವರದಿ ವಿರುದ್ಧದ ಹೋರಾಟದ ನೆನಪು:
2010ರಲ್ಲಿ ಗಾಡ್ಗೀಲ್ ವರದಿ ಬಂದಾಗ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾದಳ (ದಳ) ಮತ್ತು ಕಮ್ಯುನಿಸ್ಟ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಒಂದಾಗಿ ಸದನದಲ್ಲಿ ವಿರೋಧಿಸಿ ನಿರ್ಣಯ ಕೈಗೊಂಡಿದ್ದನ್ನು ಸುಜಾಲಪ್ಪ ಸ್ಮರಿಸಿದರು.
ಸ್ಥಳೀಯ ಜನರ ಬದುಕಿಗೆ ಎದುರಾಗುವ ಸಂಕಷ್ಟ:
ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಕೊಡಗಿನ ಸುಮಾರು 54 ಹಳ್ಳಿಗಳು ಒಳಪಡುತ್ತವೆ. ಈ ವರದಿ ಜಾರಿಯಾದರೆ ಕಾಫಿ ಬೆಳೆಗಾರರು ರಾಸಾಯನಿಕ ಗೊಬ್ಬರ ಬಳಸದಂತೆ, ಮನೆಗಳಿಗೆ ನಿರ್ದಿಷ್ಟ ಬಣ್ಣ ಬಳಿಯದಂತೆ ಹಾಗೂ ಗಣಿಗಾರಿಕೆ ಮತ್ತು ಮರಳು ತೆಗೆಯುವುದಕ್ಕೆ ಕಠಿಣ ನಿಯಮಗಳು ಜಾರಿಯಾಗಲಿವೆ. ಇದರಿಂದ ಸಾಮಾನ್ಯ ಜನರ ಬದುಕು ಕಷ್ಟಕರವಾಗುತ್ತದೆ ಎಂದು ಹೇಳಿದರು.
ಮರಳು ತೆರವು ಹಾಗೂ ರೈತರ ಸಮಸ್ಯೆ:
ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಕೆರೆ ಮತ್ತು ಹೊಳೆಗಳಲ್ಲಿ ಮರಳು ಹಾಗೂ ಹೂಳು ತುಂಬಿ, ನೀರು ಗದ್ದೆಗಳಿಗೆ ಹರಿದು ಬೆಳೆ ನಾಶವಾಗುತ್ತಿದೆ. ಸಣ್ಣಪುಟ್ಟ ಮನೆ ನಿರ್ಮಾಣ ಮತ್ತು ಕೃಷಿ ಕಾರ್ಯಕ್ಕೆ ಮರಳು ಅಗತ್ಯವಿದ್ದು, ಕಠಿಣ ನಿಯಮಗಳಿಂದ ಸ್ಥಳೀಯ ರೈತರಿಗೆ ತೊಂದರೆಯಾಗುತ್ತದೆ.
ಬಫರ್ ಝೋನ್ ಹಾಗೂ ಕೃಷಿ ಭೂಮಿ ವರ್ಗೀಕರಣ:
ಕೊಡಗಿನ ಪ್ರತಿಯೊಂದು ಗ್ರಾಮದಲ್ಲೂ ಸಾಂಪ್ರದಾಯಿಕ ‘ದೇವರ ಕಾಡು’ಗಳಿದ್ದು, 10 ಕಿ.ಮೀ. ಬಫರ್ ಝೋನ್ ನಿಯಮ ಅನ್ವಯಿಸಿದರೆ ಇಡೀ ಜಿಲ್ಲೆಯೇ ಅರಣ್ಯ ಪ್ರದೇಶವಾಗಿ ಬದಲಾಗುವ ಅಪಾಯವಿದೆ. ಆದ್ದರಿಂದ ಭೂಕುಸಿತ ಪ್ರದೇಶ, ನದಿ ಮೂಲ, ದಟ್ಟ ಅರಣ್ಯ ಮತ್ತು ತಲೆಮಾರುಗಳಿಂದ ಕೃಷಿ ಮಾಡುತ್ತಿರುವ ಪ್ರದೇಶಗಳಿಗೆ ಪ್ರತ್ಯೇಕ ಹಾಗೂ ಸೂಕ್ತ ನಿಯಮಗಳನ್ನು ರೂಪಿಸಬೇಕು.
ಜಂಟಿ ಸರ್ವೇಗೆ ಮನವಿ:
ಕೇರಳ ಮಾದರಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಶೀಲನೆ ಹಾಗೂ ಸರ್ವೇ ನಡೆಸಿ, ಸಾಧಕ-ಬಾಧಕಗಳ ವರದಿ ಸಿದ್ಧಪಡಿಸಬೇಕು.
ಕೊಡಗಿನ ಜನರು ತಲೆಮಾರುಗಳಿಂದ ಪರಿಸರವನ್ನು ಪೂಜಿಸುತ್ತಾ ರಕ್ಷಿಸಿಕೊಂಡು ಬಂದಿದ್ದಾರೆ. ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವುದು ತಮ್ಮ ಉದ್ದೇಶವಲ್ಲ, ಬದಲಿಗೆ ರೈತರು, ಬಗರ್ ಹುಕುಂ ಜಮೀನಿನಲ್ಲಿ ಜೀವಿಸುತ್ತಿರುವ ಬಡವರ ಹಿತದೃಷ್ಠಿಯಿಂದ ಅಗತ್ಯ ವಿನಾಯಿತಿಗಳನ್ನು ನೀಡಿ, ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸುಜಾಲಪ್ಪ ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಮರುಪರಿಶೀಲನೆಗೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ಆಗ್ರಹ
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸ್ಯಾಟಲೈಟ್ ಮೂಲಕ ಸಿದ್ಧಪಡಿಸಲಾಗಿರುವ ಕಸ್ತೂರಿ ರಂಗನ್ ವರದಿಯು ವಾಸ್ತವಿಕ ಪರಿಸ್ಥಿತಿಗೆ ದೂರವಾಗಿದ್ದು, ಇದರಿಂದ ಮಲೆನಾಡು ಭಾಗದ ಜನರ ಬದುಕಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಈ ವರದಿಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ಅವರು ಸದನದಲ್ಲಿ ಆಗ್ರಹಿಸಿದರು.
ಶಿವಮೊಗ್ಗ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ಸೇರಿದಂತೆ ವಿವಿಧ ಭಾಗಗಳ ಸಾವಿರಾರು ಸಾರ್ವಜನಿಕರು ಹಾಗೂ ರೈತರು ಈ ವರದಿಯ ವಿರುದ್ಧ ಕನಿಷ್ಠ 100 ಕಿಲೋಮೀಟರ್‌ಗಳಿಗೂ ಹೆಚ್ಚು ಪಾದಯಾತ್ರೆ ಮಾಡಿ ತಮ್ಮ ಆತಂಕ ಹಾಗೂ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಗೂಗಲ್ ಮ್ಯಾಪ್ ಮತ್ತು ಉಪಗ್ರಹಗಳ (ಸ್ಯಾಟಲೈಟ್) ಮೂಲಕ ಉಪಗ್ರಹ ಆಧಾರಿತ ಅಧ್ಯಯನ ನಡೆಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ ತಾಂತ್ರಿಕ ಲೋಪಗಳಿದ್ದು, ಸತ್ಯಾಸತ್ಯತೆಗೆ ದೂರವಾಗಿದೆ. ಇದರಿಂದಾಗಿ ಶಿವಮೊಗ್ಗ ಒಂದರಲ್ಲೇ ನೂರಾರು ಗ್ರಾಮಗಳು ಮತ್ತು ಸಾವಿರಾರು ಚದರ ಕಿಲೋಮೀಟರ್ ಪ್ರದೇಶಗಳು ‘ಸೂಕ್ಷ್ಮ ವಲಯ’ದ ವ್ಯಾಪ್ತಿಗೆ ಸೇರ್ಪಡೆಯಾಗಿವೆ.
ಪರಿಸರ ಸೂಕ್ಷ್ಮ ವಲಯ (Eco-Sensitive Zone) ಎಂದು ಘೋಷಿಸುವುದರಿಂದ ಸ್ಥಳೀಯ ಜನರಿಗೆ ಕುಡಿಯುವ ನೀರಿನ ಯೋಜನೆ, ರಸ್ತೆ ನಿರ್ಮಾಣ, ಶಾಲೆ, ಆಸ್ಪತ್ರೆ ಹಾಗೂ ವಸತಿ ಸೌಕರ್ಯಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾನೂನು ತೊಡಕುಗಳು ಉಂಟಾಗುತ್ತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ವರದಿಗಳನ್ನು ನೆಚ್ಚಿಕೊಳ್ಳದೆ, ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಸ್ಥಳೀಯ ಸಾರ್ವಜನಿಕರ ಹಾಗೂ ಶಾಸಕರ ಅಭಿಪ್ರಾಯಗಳನ್ನು ಪಡೆಯಬೇಕು. ಪರಿಸರ ಸಂರಕ್ಷಣೆ ಜತೆಗೆ ಅಲ್ಲಿನ ಜನರ ಜೀವನೋಪಾಯವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಸೂಕ್ತ ತಂಡವನ್ನು ಕಳುಹಿಸಿ, ನೆಲದ ಮಟ್ಟದಲ್ಲಿ ಸ್ಥಳ ಪರಿಶೀಲನೆ (Ground Verification) ನಡೆಸಿ ವರದಿಯನ್ನು ಸರಿಪಡಿಸುವಂತೆ ಒತ್ತಡ ಹೇರಬೇಕು ಎಂದು ತಿಳಿಸಿದರು.
