ಸಮಗ್ರ ಸುದ್ದಿ

ಕ್ವಾಂಟಮ್‌ ಭದ್ರತಾ ಕ್ಷೇತ್ರದಲ್ಲಿ ಜಾಗತಿಕ ಸಾಮರ್ಥ್ಯ ನಿರ್ಮಾಣಕ್ಕೆ ಬೆಂಗಳೂರು ಪೂರಕ: ಪ್ರಿಯಾಂಕ್‌ ಖರ್ಗೆ

Share

ಬೆಂಗಳೂರು: ಕ್ವಾಂಟಮ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಜಾಗತಿಕ ಮಟ್ಟದ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಮುನ್ನಡೆಯುತ್ತಿದ್ದು, ಪ್ರತಿಭೆ, ಸಂಶೋಧನೆ, ನವೋದ್ಯಮಗಳು ಹಾಗೂ ಸುರಕ್ಷಿತ ಡಿಜಿಟಲ್‌ ಮೂಲಸೌಕರ್ಯ ಸೇರಿದಂತೆ ಕ್ವಾಂಟಮ್‌ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬೆಂಗಳೂರಿನಲ್ಲಿ ಸ್ಥಾಪನೆಯಾಗಿ ಕ್ವಾಂಟಮ್‌ ಭದ್ರತಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯೂಎನ್‌ಯು ಲ್ಯಾಬ್ಸ್‌ (QNu Labs) ಸಂಸ್ಥೆಯ 10ನೇ ವಾರ್ಷಿಕೋತ್ಸವ ಹಾಗೂ ನೂತನ ಉತ್ಪನ್ನ ಕ್ಯೂಶೀಲ್ಡ್ 2.0 ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಸಚಿವರು, ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆ ಹಾಗೂ ಕ್ವಾಂಟಮ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಅದರ ಸಾಧನೆಯನ್ನು ಶ್ಲಾಘಿಸಿದರು. ಭಾರತದ ಮೊದಲ ಹಾಗೂ ಏಕೈಕ ಕ್ವಾಂಟಮ್‌ ಕ್ರಿಪ್ಟೋಗ್ರಫಿ ಮತ್ತು ಕ್ವಾಂಟಮ್‌-ಸೇಫ್‌ ಸೈಬರ್‌ಸುರಕ್ಷತಾ ಸಂಸ್ಥೆಯಾಗಿ ಕ್ಯೂಎನ್‌ಯು ಲ್ಯಾಬ್ಸ್‌ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂದು ದಶಕದಲ್ಲಿ ಕ್ವಾಂಟಮ್‌ ಭದ್ರತಾ ಕ್ಷೇತ್ರದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.

ಆರಂಭಿಕ ಹಂತದಲ್ಲೇ ಕರ್ನಾಟಕ ಸರ್ಕಾರದ ಬೆಂಬಲ
ಕರ್ನಾಟಕದ ಹೆಮ್ಮೆಯ ಡೀಪ್‌ಟೆಕ್‌ ಸಂಸ್ಥೆಯಾಗಿ ಕ್ಯೂಎನ್‌ಯು ಲ್ಯಾಬ್ಸ್‌ ಬೆಳೆಯಲು ಆರಂಭಿಕ ಹಂತದಲ್ಲಿಯೇ ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಎಲಿವೇಟ್‌ ಮತ್ತು ಕಿಟ್‌ವೆನ್‌ (KITVEN) ಕಾರ್ಯಕ್ರಮಗಳ ಮೂಲಕ ದೊರೆತ ಬೆಂಬಲವೂ ಪ್ರಮುಖವಾಗಿದೆ ಎಂದು ಸಚಿವರು ಹೇಳಿದರು. ಕರ್ನಾಟಕದಲ್ಲಿ ನವೋದ್ಯಮಗಳು ಕೇವಲ ಆರಂಭಗೊಳ್ಳುವುದಷ್ಟೇ ಅಲ್ಲದೆ, ಸಂಶೋಧನೆ ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ. ಕ್ಯೂಎನ್‌ಯು ಲ್ಯಾಬ್ಸ್‌ ‌ನಂತಹ ಡೀಪ್‌ಟೆಕ್‌ ಸಂಸ್ಥೆಗಳ ಬೆಳವಣಿಗೆ ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.

ಕ್ಯೂಶೀಲ್ಡ್ 2.0 ಬಿಡುಗಡೆ
ಕಾರ್ಯಕ್ರಮದ ಸಂದರ್ಭದಲ್ಲಿ ಕ್ಯೂಎನ್‌ಯು ಲ್ಯಾಬ್ಸ್‌ನ ಬೆಳೆಯಲು ಆರಂಭಿಕ ಹಂತದಲ್ಲಿಯೇ ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಮುಂದಿನ ತಲೆಮಾರಿನ ವೇದಿಕೆಯಾದ ಕ್ಯೂಶೀಲ್ಡ್ 2.0 ಅನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಡುಗಡೆ ಮಾಡಿದರು. ಕ್ವಾಂಟಮ್‌ ಭದ್ರತೆಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ಪದರದೊಂದಿಗೆ ಸಂಯೋಜಿಸುವ ಉದ್ದೇಶದಿಂದ ಕ್ಯೂಶೀಲ್ಡ್ 2.0 ಅನ್ನು ರೂಪಿಸಲಾಗಿದ್ದು, ಹೆಚ್ಚುತ್ತಿರುವ ಸೈಬರ್‌ ದಾಳಿಗಳು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಎನ್‌ಕ್ರಿಪ್ಶನ್‌ ಸವಾಲುಗಳನ್ನು ಎದುರಿಸಲು ಇದು ನೆರವಾಗುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು. ಸೈಬರ್‌ ಸುರಕ್ಷತೆ ದಿನದಿಂದ ದಿನಕ್ಕೆ ಹೆಚ್ಚು ಮಹತ್ವ ಪಡೆಯುತ್ತಿರುವ ಸಂದರ್ಭದಲ್ಲಿ, ಕ್ವಾಂಟಮ್‌ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಂಯೋಜನೆಯ ಮೂಲಕ ಸುರಕ್ಷಿತ ಡಿಜಿಟಲ್‌ ವ್ಯವಸ್ಥೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಕರ್ನಾಟಕದ ಕ್ವಾಂಟಮ್‌ ರೋಡ್‌ಮ್ಯಾಪ್‌ಗೆ ವೇಗ
ಕರ್ನಾಟಕದ ಕ್ವಾಂಟಮ್‌ ರೋಡ್‌ಮ್ಯಾಪ್‌ ಅನ್ನು ಮುಂದಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ, ಕ್ವಾಂಟಮ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಅವರು ಹೇಳಿದರು. ಪ್ರತಿಭೆ, ಸಂಶೋಧನೆ, ನವೋದ್ಯಮಗಳು ಮತ್ತು ಸುರಕ್ಷಿತ ಡಿಜಿಟಲ್‌ ಮೂಲಸೌಕರ್ಯ ಸೇರಿದಂತೆ ಕ್ವಾಂಟಮ್‌ ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ಬಲಿಷ್ಠ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಮಹತ್ವದ ತಾಂತ್ರಿಕ ಸಾಮರ್ಥ್ಯಗಳನ್ನು ನಿರ್ಮಿಸುವ ಅವಕಾಶ ಕರ್ನಾಟಕಕ್ಕಿದೆ ಎಂದು ಅವರು ತಿಳಿಸಿದರು.

ಕ್ವಾಂಟಮ್‌ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಸೈಬರ್‌ ಸುರಕ್ಷತೆ, ದತ್ತಾಂಶ ರಕ್ಷಣೆ ಹಾಗೂ ಸುರಕ್ಷಿತ ಡಿಜಿಟಲ್‌ ಮೂಲಸೌಕರ್ಯದ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಮೂಲಕ ಕರ್ನಾಟಕವನ್ನು ಜಾಗತಿಕ ಕ್ವಾಂಟಮ್‌ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಪ್ರಮುಖ ಕೇಂದ್ರವನ್ನಾಗಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳು ಮುಂದುವರಿಯಲಿವೆ ಎಂದು ಸಚಿವರು ತಿಳಿಸಿದರು.


Share

You cannot copy content of this page