ಸಮಗ್ರ ಸುದ್ದಿ

ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧದ ಇಲಾಖಾ ವಿಚಾರಣೆಗೆ ತಡೆ

Share

ಬೆಂಗಳೂರು: ಶಿವಮೊಗ್ಗ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಅಶ್ವಿನ್‌ ಹೆಬ್ಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯರ್ದಶಿಗಳಾದ ಮೊಹಮ್ಮದ್‌ ಮೊಹ್ಸಿನ್‌ ವಿರುದ್ಧದ ಇಲಾಖಾವಾರು ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಇಲಾಖಾವಾರು ವಿಚಾರಣೆಗೆ ಆಗಸ್ಟ್ 4 ರಂದು ಆದೇಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠ, ಈ ತಡೆಯಾಜ್ಞೆ ನೀಡಿದೆ.

ಸಿಮ್ಸ್‌ನ ಪ್ರಾಧ್ಯಾಪಕರಾದ ಡಾ. ಅಶ್ವಿನ್‌ ಹೆಬ್ಬಾರ್‌ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅವರನ್ನು ಅಮಾನತು ಮಾಡಿ ನಂತರ ಹಿಂಪಡೆದು ಹಾವೇರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. ಡಾ.‌ ಹೆಬ್ಬಾರ್‌ ಈ ಸಂಬಂಧ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನ್ಯಾಯಪೀಠ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸಿಮ್ಸ್‌ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.

ಇಲಾಖಾವಾರು ತನಿಖೆಗೆ ಆದೇಶ ನೀಡಿದ್ದ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಡಾ. ಅಶ್ವಿನ್‌ ಹೆಬ್ಬಾರ್‌ ಅಮಾನತು ಆದೇಶವನ್ನು ಮುಂದಿನ ವಿಚಾರಣೆವರೆಗೆ ಮುಂದುವರಿಸಿದೆ.


Share

You cannot copy content of this page