ಬೆಂಗಳೂರು:ಬರಗಾಲದ ಪರಿಸ್ಥಿತಿಯಲ್ಲಿ ನಾವು ರೈತರನ್ನು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನು ಮನ್ನಾ ಮಾಡಲಿ. ನಮ್ಮ ರಾಜ್ಯದ ಪಾಲನ್ನು ಭರಿಸಲು ಸಿದ್ಧರಿದ್ದೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಬರದ ವಿಚಾರವಾಗಿ ನಡೆದ ವಿಶೇಷ ಚರ್ಚೆ ಬಳಿಕ ಸಿಎಂ ಡಿ ಕೆ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಮಾತುಗಳಿಗೆ ಉತ್ತರ ನೀಡಿದರು.
“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ರೈತರ ಸಾಲಮನ್ನಾ ಬಗ್ಗೆ ಸದನದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಬೆಂಬಲಿತ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿದ್ದಾರೆ. 80 ಶಾಸಕರ ಸಂಖ್ಯಾಬಲವಿದ್ದ ನಾವು ಬೆಂಬಲ ನೀಡದೇ ಇದ್ದಿದ್ದರೆ 38 ಶಾಸಕರ ಬೆಂಬಲವಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಲು ಆಗುತ್ತಿತ್ತೇ?” ಎಂದು ಪ್ರಶ್ನಿಸಿದರು.
ರೈತರಿಗಾಗಿ ಎಲ್ಲಾ ಕಾರ್ಯಕ್ರಮ ನಿಲ್ಲಿಸೋಣ
“ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಸಾಲ ಮನ್ನಾ ಮಾಡಿದರು. ನೀವೆಲ್ಲರೂ ಸರ್ವಪಕ್ಷ ನಿಯೋಗದಲ್ಲಿ ಬರುವುದಾಗಿ ತಿಳಿಸಿದ್ದೀರಿ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರನ್ನು ಬೇಡಿಕೊಳ್ಳೋಣ. ಕೇಂದ್ರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲಿ. ಬೇಕಿದ್ದರೆ ಎಲ್ಲಾ ಕಾರ್ಯಕ್ರಮ ನಿಲ್ಲಿಸಿ ರೈತರಿಗಾಗಿ ಈ ತೀರ್ಮಾನ ಮಾಡುತ್ತೇನೆ. 50:50, 60:40, 70:30 ಯಾವ ಸೂತ್ರಕ್ಕಾದರೂ ಸರಿ ನಮಗೆ ಕೇಂದ್ರ ಸರ್ಕಾರದಿಂದ ಏನಾದರೂ ಕೊಡಿಸಿ” ಎಂದು ವಿರೋಧ ಪಕ್ಷದ ನಾಯಕರಿಗೆ ಆಗ್ರಹಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೋರ್ಟ್ ಮೂಲಕ ಪರಿಹಾರ ಪಡೆದ ಇತಿಹಾಸ ಕರ್ನಾಟಕದ್ದು
“ಕಳೆದ ಬಾರಿ ನಾವು ಕೋರ್ಟ್ ಮೆಟ್ಟಿಲೇರಿ 3 ಸಾವಿರ ಕೋಟಿ ಪರಿಹಾರ ಪಡೆದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಸೇರುವುದು ಕೂಡ ಇತಿಹಾಸ. ಆ ಸಂದರ್ಭದಲ್ಲಿ ಒಬ್ಬ ಸಂಸದ ಪ್ರಧಾನಮಂತ್ರಿಗಳ ಮುಂದೆ ಹೋಗಿ ಬಾಯಿ ಬಿಡಲಿಲ್ಲ. ಈಗ ನಮ್ಮ ವಿರೋಧ ಪಕ್ಷದ ನಾಯಕರು ಪ್ರಧಾನಮಂತ್ರಿಗಳ ಭೇಟಿಗೆ ನಾನು ಬರುತ್ತೇನೆ ಎಂದು ಹೇಳಿದ್ದು, ಅವರಿಗೆ ಅಭಿನಂದನೆ, ನಮನ ಸಲ್ಲಿಸುತ್ತೇನೆ. ಅವರು ಈ ಮಾತು ಹೇಳಿದ ಕೂಡಲೇ ನಾನು ಪ್ರಧಾನಮಂತ್ರಿಗಳಿಗೆ ಸಮಯಾವಕಾಶ ಕೋರಿ ಪತ್ರ ಬರೆಯಲಿದ್ದೇನೆ. ನಾನು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುವೆ, ಅವರು ಅವರ ಸಂಬಂಧದಲ್ಲಿ ಕಾಲಾವಕಾಶ ಕೋರಲಿ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇನೆ” ಎಂದು ಭರವಸೆ ನೀಡಿದರು.
ಅಭಿವೃದ್ಧಿ ಕೆಲಸಕ್ಕೂ ಮತಕ್ಕೂ ವ್ಯತ್ಯಾಸವಿದೆ
“ನಾವು ಕೆಲಸ ಮಾಡಿದವರೆಲ್ಲಾ ನಮಗೆ ಮತ ಹಾಕುವುದಿಲ್ಲ. 1.36 ಕೋಟಿ ಜನ ನಮಗೆ ಮತಹಾಕಿದ್ದಾರೆ, ನಾವು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.40 ಕೋಟಿ ಜನರಿಗೆ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಿದ್ದೇವೆ. ಅವರೆಲ್ಲರೂ ನಮಗೆ ಮತ ಹಾಕುತ್ತಾರಾ? ಮಂಗಳೂರು, ಉಡುಪಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ನಾವು ಈ ರಾಜ್ಯದ ಮಹಿಳೆಯರನ್ನು ನಮ್ಮ ತಾಯಂದಿರು ಎಂದು ಭಾವಿಸಿ ಎಲ್ಲರಿಗೂ ಯೋಜನೆ ನೀಡುತ್ತಿದ್ದೇವೆ. ಆದರೆ ಅಸ್ಸಾಂ ರಾಜ್ಯದಲ್ಲಿ ನೀವು ಆ ಪಕ್ಷಕ್ಕೆ ಮತ ಹಾಕಿದ್ದರೆ ಮಾತ್ರ ನಿಮಗೆ ಯೋಜನೆ. ನಾವು ಆ ರೀತಿ ಮಾಡುವುದಿಲ್ಲ. ಹೀಗಾಗಿ ಮತಕ್ಕೂ ಅಭಿವೃದ್ಧಿ ಕೆಲಸಕ್ಕೂ ವ್ಯತ್ಯಾಸವಿದೆ” ಎಂದು ವಿವರಿಸಿದರು.
ನೆರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಳ
“ನಾನು ಬೆಳಗಾವಿ, ಕಲಬುರ್ಗಿ, ಚಿತ್ರುದುರ್ಗದಲ್ಲಿ ವಿಭಾಗವಾರು ಸಭೆ ಮಾಡಿದೆ, ವಿವಿಧ ಜಿಲ್ಲೆಗಳಿಗೆ ಹೋಗಿ ಬರ ಅಧ್ಯಯನ ಮಾಡಿದೆ. ಕೆಲವು ಶಾಸಕರು ಹಾಲಿನ ದರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ನೆರೆಯ ತಮಿಳುನಾಡಿನಲ್ಲಿ 11 ರೂ. ದರ ಏರಿಕೆ ಮಾಡಿದ್ದಾರೆ. ನಮ್ಮ ಗಡಿ ಭಾಗದ ಹಾಲು ತಮಿಳುನಾಡು ಸೇರುತ್ತಿವೆ. ನಮ್ಮ ಮಲೆನಾಡಿನ ಸುರೇಶ್ ಶೆಟ್ಟಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಮೇವಿನ ಕೊರತೆ ಇದೆ. ಕೇಂದ್ರ ಸರ್ಕಾರ ನಮ್ಮ ನರೇಗಾ ಯೋಜನೆ ತೆಗೆದು ವಿಬಿ ಗ್ರಾಮ್ ಜಿ ಯೋಜನೆ ತಂದಿದೆ. ಬರ ಪ್ರದೇಶದಲ್ಲಿ 50 ದಿನ ಹೆಚ್ಚಿನ ಕೂಲಿ ನೀಡಲು ಅವಕಾಶವಿದೆ. ಈ ಹಿಂದೆ ಇದ್ದ 90:10 ಅನುಪಾತವನ್ನು ಈಗ 60:40 ಮಾಡಿದ್ದಾರೆ. ಆದರೂ ನಾವು ಒಪ್ಪಿದ್ದೇವೆ” ಎಂದು ಹೇಳಿದರು.
“ನಾವು ಜತೆಯಾಗಿ ಹೋಗೋಣ, ಸಂಸದರನ್ನು ಕರೆದುಕೊಳ್ಳೋಣ. ನಿಮ್ಮ ಧ್ವನಿ ಹೊರಬರಲಿ ಎಂಬ ಕಾರಣಕ್ಕೆ ನಾನು ಈ ಅಧಿವೇಶನ ಕರೆದು ಚರ್ಚೆ ಮಾಡುತ್ತಿದ್ದೇವೆ. ಈ ಅಧಿವೇಶನವನ್ನು ಉತ್ತಮವಾಗಿ ನಡೆಸಿಕೊಟ್ಟಿರುವುದಕ್ಕೆ ಧನ್ಯವಾದಗಳು. ಬರಗಾಲದಲ್ಲಿ ರಾಜಕಾರಣದ ಗುದ್ದಾಟ ಇಷ್ಟವಿಲ್ಲ. ನಾನು ತಿದ್ದಿಕೊಳ್ಳುವ ವಿಚಾರ ಇದ್ದರೆ ತಿದ್ದುಕೊಳ್ಳಲು ಸಿದ್ಧವಿದ್ದೇನೆ” ಎಂದರು.
ಸಂಘರ್ಷಕ್ಕಿಂತ ಸಹಕಾರದಲ್ಲಿ ಸಾಗಲು ಬಯಸುತ್ತೇನೆ
“ನಮ್ಮ ಸರ್ಕಾರ ರಚನೆಯಾದ ಬಳಿಕ ಎಲ್ಲಾ ಮಂತ್ರಿಗಳಿಗೆ ಜಿಲ್ಲೆಗಳಿಗೆ ಹೋಗಿ ಬರ ಪರಿಶೀಲಿಸಿ ವರದಿ ನೀಡಿ ಎಂದು ಸೂಚಿಸಿದೆ. ಅವರು ಮೂರು ದಿನ ಚರ್ಚೆ ಮಾಡಿ ವರದಿ ಕೊಟ್ಟರು. ಅಧಿವೇಶನ ಕರೆದಾಗ ಇವರು ಬರಲಿಲ್ಲ. ಈ ರೋಷಾವೇಶ ಆಗ ಬಳಸಬಹುದಿತ್ತು. ಇವರಿಗೆ ರೈತರು, ಜನರ ಬಗ್ಗೆ ಕಾಳಜಿ ಇಲ್ಲ. ಕೇವಲ ರಾಜಕೀಯ ಮಾತ್ರ ಮುಖ್ಯ. ಅವರ ರಾಜಕಾರಣ ಅವರು ಮಾಡಲಿ. ನನಗೆ ಈ ಸ್ಥಾನದಲ್ಲಿ ಕೂತು ಸಂಘರ್ಷ ಮಾಡುವುದಕ್ಕಿಂತ ಪರಸ್ಪರ ಸಹಕಾರದಲ್ಲಿ ಸಾಗಲು ಬಯಸುತ್ತೇನೆ. ನಾವು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದರು.
ಪ್ರತಿ ಯುನಿಟ್ ಗೆ 22 ರೂ. ನೀಡಿ ವಿದ್ಯುತ್ ಖರೀದಿಸುವ ಸಂಕಷ್ಟದ ಸ್ಥಿತಿ
“ರೈತರಿಗೆ ಕರೆಂಟ್ ಇಲ್ಲ ಎಂದು ಚರ್ಚೆ ಮಾಡಿದ್ದಾರೆ. ಕಲ್ಲಿದ್ದಲು ವಿದ್ಯುತ್ ಗೆ ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ನವೀಕರಿಸಬಹುದಾದ ಇಂಧನದತ್ತ ಗಮನಹರಿಸಿದೆ. ಪಾವಗಡದಲ್ಲಿ ಒಬ್ಬ ರೈತನ ಜಮೀನು ಖರೀದಿ ಮಾಡದೇ, ಸೋಲಾರ್ ಪವರ್ ಪ್ಲಾಂಟ್ ಮಾಡಿದೆ. ಅದನ್ನು ನೋಡಿ ಕೇಂದ್ರ ಸರ್ಕಾರ ಕುಸುಮ್ ಯೋಜನೆ ಜಾರಿಗೆ ತಂದಿದೆ. ನಮ್ಮ ಸಚಿವರಾದ ಕೆ.ಜೆ ಜಾರ್ಜ್ ಅವರು ಪ್ರತಿ ಯುನಿಟ್ ಗೆ 22 ರೂ. ನೀಡಿ ವಿದ್ಯುತ್ ಖರೀದಿಸುವ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ತಮಿಳುನಾಡು, 22, ಕೇರಳ 24 ರೂ.ಗೆ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ಪ್ರತಿ ವರ್ಷ ನಮ್ಮಲ್ಲಿ 10% ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ನಾನು ರೈತರ ಪರವಾಗಿ ತೀರ್ಮಾನ ಮಾಡಿದ್ದು ರಿಯಲ್ ಎಸ್ಟೇಟ್ ವ್ಯವಹಾರಕ್ಕಾ?
“ಪ್ರಧಾನಮಂತ್ರಿಗಳು ಬರದ ಬಗ್ಗೆ ಮೂರು ತಿಂಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದು ಯಾಕೆ? ರೈತರು ಬಿತ್ತನೆ ಮಾಡಬೇಡಿ, ನಾವು ಹೇಳುವವರೆಗೆ ಕಾಯಿರಿ ಎಂದು ನಾನು ಮನವಿ ಮಾಡಿದೆ. ಕೆಲವರು ಟೀಕೆ ಮಾಡಿದರು. ಕೆಲವು ರೈತರು ಬಿತ್ತನೆ ಮಾಡಿದರು. ಬಳ್ಳಾರಿ, ಕೊಪ್ಪಳ ಭಾಗವು ಅನ್ನದ ತಟ್ಟೆಯಾಗಿದೆ. ತುಂಗಭದ್ರಾ ಅಣೆಕಟ್ಟಿನಲ್ಲಿ 30 ಟಿಎಂಸಿ ನೀರಿನಷ್ಟು ಹೂಳು ತುಂಬಿದೆ. ಈ ಬಗ್ಗೆ ಚರ್ಚೆಗೆ ಚಂದ್ರಬಾಬು ನಾಯ್ಡು ಅವರು ಚರ್ಚೆಗೆ ಸಮಯ ನೀಡಲಿಲ್ಲ. ನಂತರ ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರ ಮುಂದೆ ಪ್ರಸ್ತಾಪ ಮಾಡಿದೆ. ಆಗ ಸೋಮಣ್ಣ, ಬೊಮ್ಮಾಯಿ ಅವರು ಸಹಕಾರ ನೀಡಿದರು. ತುಂಗಭದ್ರಾ ಅಣೆಕಟ್ಟು ಗೇಟ್ ಉದ್ಘಾಟನೆ ಮಾಡುವಾಗ ತೆಲಂಗಾಣ, ಆಂಧ್ರಪ್ರದೇಶ ಕರ್ನಾಟಕದ ಮುಖ್ಯಮಂತ್ರಿಗಳು ಸೇರಿ ಸಮಾನಂತರ ಜಲಾಶಯ ನಿರ್ಮಾಣ, ಹೂಳು ತೆಗೆಯುವ ಬಗ್ಗೆ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬಂದವು. ನಾನು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ಈ ತೀರ್ಮಾನ ಮಾಡಿದೆವು. ನಾನು ಈ ತೀರ್ಮಾನ ಮಾಡಿದ್ದು ನನ್ನ ರಿಯಲ್ ಎಸ್ಟೇಟ್ ವ್ಯವಹಾರಕ್ಕಾ?” ಎಂದು ತಿರುಗೇಟು ನೀಡಿದರು
“ನಾನು ಬೆಂಗಳೂರು ಜಿಲ್ಲೆಯವನು, ನನ್ನ ಆಸ್ತಿ ಬೆಂಗಳೂರು ಜಿಲ್ಲೆಯಲ್ಲಿದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ವ್ಯವಹಾರಸ್ಥ. ನಾನು ವ್ಯವಹಾರ ಮಾಡಬಾರದೇ? ನಾನು ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ನಾಯಕನಾಗಿದ್ದಾಗ ನನಗೆ ಪಕ್ಷ ಟಿಕೆಟ್ ನೀಡಿತು. ಅಲ್ಲಿಂದ ಈ ಸ್ಥಾನಕ್ಕೆ ಬಂದಿರುವೆ. ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಾನು ವಿಧಾನಸೌಧದ ನನ್ನ ಕಚೇರಿಯಲ್ಲಿ ಕೂತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಅಧಿಕಾರಿಗಳ ಮೂಲಕ ತೀರ್ಮಾನ ಮಾಡಬಹುದಾಗಿತ್ತಲ್ಲವೇ? ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರು ಇದನ್ನು ತಿರಸ್ಕರಿಸಿದ್ದಾರೆ. ನಾನು ಇದು ಏಕಾಂಗಿ ನಿರ್ಧಾರವಾಗಬಾರದು ಎಂದು ಶಾಸಕರು, ಜನರ ಅಭಿಪ್ರಾಯ ಸಂಗ್ರಹಿಸಿದೆ. ವಿರೋಧ ಪಕ್ಷಗಳ ನಾಯಕರೂ ಉತ್ತಮ ಸಲಹೆ ನೀಡಿದೆ. ನಾನು ಯಾರ ಜತೆ ಚರ್ಚೆ ಮಾಡಿದೆ ರೈತರೊಟ್ಟಿಗೆ. ಅರಣ್ಯಾಧಿಕಾರಿಗಳು ಆ ಭಾಗದ ರೈತರಿಗೆ ಕಿರುಕುಳ ನೀಡಬೇಡಿ ಎಂದು ಅಲ್ಲಿನ ಜನರ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬಿದೆ” ಎಂದರು.
ನಿಮ್ಮ ಸರ್ಕಾರಗಳ ಇತಿಹಾಸ ಕೆದುಕುವುದಿಲ್ಲ
ನಾನು ಹೆಲಿಕಾಪ್ಟರ್ ನಲ್ಲಿ ಸಮೀಕ್ಷೆ ಮಾಡಿದವನಲ್ಲ. ನನಗೂ ಬುದ್ಧಿ ಇದೆ. ಯಡಿಯೂರಪ್ಪನವರಿದ್ದಾಗ ಏನೇನಾಯ್ತು ಎಂದು ಈಗ ಬಿಚ್ಚಿ ಹೇಳುವುದಿಲ್ಲ. ಪರಿಷತ್ತಿನಲ್ಲಿ ಸಾಲಮನ್ನಾ ವಿಚಾರ ಬಂದಾಗ ನಾನು ಪ್ರಿಂಟಿಗ್ ಮಷಿನ್ ಇಟ್ಟಿದ್ದೀನಾ ಎಂದು ಕೇಳಿದ್ದ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ. ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳುವೆ. 70-80 ಕ್ಷೇತ್ರದ ಶಾಸಕರು ತಮ್ಮ ಜನರ ಪರವಾಗಿ ಧ್ವನಿ ಎತ್ತಿ ಅವರ ವಿಚಾರ ಮಂಡಿಸಲು ಅವಕಾಶ ಮಾಡಿಕೊಟ್ಟಿರುವುದು ಈ ಸರ್ಕಾರದ ಕರ್ತವ್ಯವಲ್ಲವೇ? ಎಂದು ಪ್ರಶ್ನಿಸಿದರು.
ಆರ್ಥಿಕತೆ ವಿಚಾರದಲ್ಲಿ ನಾನು ಒಪ್ಪುತ್ತೇನೆ. ಅವರು ಸಲಹೆ ನೀಡಿದ್ದಾರೆ. ಯಡಿಯೂರಪ್ಪನವರ ಸರ್ಕಾರದಲ್ಲಿ ಅವರು ಮಾಡಿದ್ದ ಸಲಹೆಗಳನ್ನು ತಂದು ಓದಲೇ? ನಾನು ಇತಿಹಾಸಕ್ಕೆ ಹೋಗುವುದಿಲ್ಲ. ನನಗೆ ಇತಿಹಾಸ ಓದಲು ಇಷ್ಟವಿಲ್ಲ, ಇತಿಹಾಸ ಸೃಷ್ಟಿ ಮಾಡುವುದು ನನ್ನ ಗುರಿ. ನಾನು ನೀರಾವರಿ ಸಚಿವನಾಗಿದ್ದೆ. ನಮ್ಮ ಇಲಾಖೆಯಲ್ಲಿ 20 ಸಾವಿರ ಕೋಟಿ ಅನುದಾನ ಮಾತ್ರ ಇದೆ. ಆದರೆ ಕಾಮಗಾರಿ ಮಾತ್ರ 1.25 ಲಕ್ಷ ಕೋಟಿಯಷ್ಟು ನಡೆಯುತ್ತಿದೆ. ಈ ಮಧ್ಯೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿi ಮುಳುಗಡೆ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕೆ 70 ಸಾವಿರ ಕೋಟಿ ಬೇಕಾಗಿದೆ. ಬಿಜೆಪಿ ಸರ್ಕಾರ ಎಷ್ಟು ಕೋಟಿ ಹಣದ ಯೋಜನೆ ಕೊಟ್ಟು ಹೋಗಿದ್ದಾರೆ ಎಂದು ಪಟ್ಟಿ ಓದಲೇ? ಎಂದು ಸವಾಲು ಹಾಕಿದರು.
ನಾನು ಚುನಾವಣೆಗೂ 6 ತಿಂಗಳು ಮುಂಚಿತವಾಗಿ ನಾನು ಈ ಟೆಂಡರ್ ಗಳನ್ನು ಕೈಗೆತ್ತಿಕೊಳ್ಳಬೇಡಿ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆಗಳನ್ನು ವಜಾಗೊಳಿಸಬಹುದಾಗಿತ್ತು. ಇರುವುದು 16 ಸಾವಿರ ಕೋಟಿ ಮಾತ್ರ. ಗುತ್ತಿಗೆದಾರರು ನಮ್ಮ ಶಾಸಕರ ಮೂಲಕ ಭಿಕ್ಷೆ ಬೇಡುವಂತೆ ಕೇಳುತ್ತಿದ್ದಾರೆ. ಆರ್ಥಿಕ ಇಲಾಖೆ ಸಲಹೆ ನೀಡವುದು ಅವರ ಕರ್ತವ್ಯ ಎಂದರು.
ಅದಾನಿ ಜತೆ ನೀನು ಕೆಲಸ ಮಾಡಿಲ್ಲವೇ ಸುನೀಲ್?
ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ರಾಜ್ಯದ ಬಜೆಟ್ ಸುಮಾರು 18 ಸಾವಿರ ಕೋಟಿ ಇತ್ತು, ಕೃಷ್ಣಾ ಅವರ ಕಾಲದಲ್ಲಿ ಅದು ಸುಮಾರು 25 ಸಾವಿರ ಕೋಟಿಗೆ ಮುಟ್ಟಿತು. ನಂತರ ಹೆಚ್ಚಿನ ಆದಾಯ ಬಂದು ವರ್ಷಕ್ಕೆ ನಾಲ್ಕುವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದೇವೆ. ಕರ್ನಾಟಕ ಆರ್ಥಿಕ ಶಿಸ್ತಿನ ರಾಜ್ಯ. ನಾನು ಇವತ್ತೂ ಸಾಲ ಮಾಡಬಹುದು. ನಾನು ಈಗಷ್ಟೇ ಹಣಕಾಸು ಸಚಿವನಾಗಿದ್ದೇನೆ. ನನಗೆ ಈ ವಿಚಾರದಲ್ಲಿ ಪರಿಣಿತಿ ಇದೆ ಎಂದು ಹೇಳುವುದಿಲ್ಲ. ನಮ್ಮ ಸುನೀಲ್ ಅವರು ಅದಾನಿ ಅವರನ್ನಾದರೂ ಕರೆಯಲಿ, ಬೇರೆಯವರನ್ನಾದರೂ ಕರೆಯಲಿ. ಅದಾನಿ ನಮ್ಮ ಮನೆಗೆ ಬಂದರೋ ಅಥವಾ ನಾನು ಅದಾನಿ ಅವರನ್ನು ಹುಡುಕಿಕೊಂಡು ಹೋಗಿದ್ದೀನಾ? ಅದಾನಿ ಜತೆ ನೀನು ಕೆಲಸ ಮಾಡಿದ್ದೆಯಲ್ಲಪ್ಪಾ. ನಿಮ್ಮ ಕಾಲಲ್ಲೇ ಅನೇಕ ಕಾಮಗಾರಿ ಮಾಡಿದ್ದೀರಿ. ನನಗೆ ಟೀಕೆ ಮಾಡಲು ಇಷ್ಟವಿಲ್ಲ. ಗುತ್ತಿಗೆದಾರರು, ಉದ್ಯಮಿಗಳು ಬರುತ್ತಾರೆ, ಹೋಗುತ್ತಾರೆ. ನಮ್ಮ ಯೋಜನೆಗೆ ಜಾಗತಿಕ ಹೂಡಿಕೆದಾರರು ಬರಲಿ ಎಂದು ಅದಕ್ಕೆ ಪ್ರತ್ಯೇಕ ಇಲಾಖೆ ರಚಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರದಿಂದ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ
ಬಂಡವಾಳ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಕ್ಕೆ, ಪ್ರಪಂಚ ಬೆಂಗಳೂರು ನೋಡುತ್ತಿರುವುದಕ್ಕೆ , ಉದ್ಯೋಗ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ಆದಾಯವನ್ನು ಹಳ್ಳಿಗಳಿಗೆ ಬಳಸುತ್ತಿದ್ದೇವೆ. ಕನಕಪುರ ತಾಲ್ಲೂಕಿನಲ್ಲಿ 100 ಹೆಚ್ ಪಿ ಸಾಮರ್ಥ್ಯದ ಒಂದು ಕೈಗಾರಿಕೆ ಇಲ್ಲ. ಲಗುನಾ ಎಂಬ ಕಾರ್ಖಾನೆ ಬಿಟ್ಟರೆ ಬೇರೆ ಇಲ್ಲ. ಹಾರೋಹಳ್ಳಿ ರಾಮನಗರದಲ್ಲಿ ಇವೆ.
ರಾಜ್ಯದ ಬೇರೆ ಭಾಗಗಳಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿರುವುದು ಉದ್ಯೋಗ ಹಾಗೂ ಶಿಕ್ಷಣಕ್ಕೆ. ನಾನು ಬೆಂಗಳೂರು ನಗರಕ್ಕೆ ಬಂದಿದ್ದು ಶಿಕ್ಷಣಕ್ಕೆ. ಇಲ್ಲಿನ ಉತ್ತಮ ಹವಾಮಾನ, ಕಾವೇರಿ ನೀರು ನೋಡಿ ವಾಪಸ್ ಹೋಗುತ್ತಿಲ್ಲ. 20 ವರ್ಷಗಳಲ್ಲಿ 70 ಲಕ್ಷ ಜನಸಂಖ್ಯೆ ಹೆಚ್ಚಾಗಿದ್ದು, 45 ಲಕ್ಷ ಜನರು ಹೊರಗಿನಿಂದ ಬಂದು ಕೆಲಸ ಮಾಡುತ್ತಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರಿದ್ದಾರೆ. ಇಲ್ಲಿಂದ ಬರುತ್ತಿರುವ ಹಣ ಹೆಚ್ಚು ಹೋಗುತ್ತಿರುವುದು ಕೇಂದ್ರ ಸರ್ಕಾರಕ್ಕೆ. ಇಲ್ಲಿ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ. ರೈತರ ಟ್ರ್ಯಾಕ್ಟರ್ ಗೂ ಜಿಎಸ್ಟಿ ಎಂದು ಕುಟುಕಿದರು.
