ಸಮಗ್ರ ಸುದ್ದಿ

ಕಲಬುರಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಮಗ್ರ ಕಾರ್ಯಯೋಜನೆ ರೂಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Share


ಬೆಂಗಳೂರು:ಕಲಬುರಗಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಿ, ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ತಜ್ಞರ ತಂಡಕ್ಕೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ಪರಿಣಿತರು ನಡೆಸಿದ ಪ್ರಾಥಮಿಕ ಪರಿಶೀಲನೆಯ ಆಧಾರದ ಮೇಲೆ ಸಿದ್ಧಪಡಿಸಿರುವ ಸಲಹೆಗಳನ್ನು ಸಚಿವರು ಪರಿಶೀಲಿಸಿದರು. ಜಿಲ್ಲೆಯ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಕ್ಷಕರ ಬೋಧನಾ ವಿಧಾನ ಹಾಗೂ ಪರೀಕ್ಷಾ ಸಿದ್ಧತೆಯಲ್ಲಿರುವ ಕೊರತೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕೇವಲ ಪರೀಕ್ಷೆಗೆ ಮುನ್ನ ಕೈಗೊಳ್ಳುವ ಕ್ರಮಗಳಿಗೆ ಸೀಮಿತವಾಗಬಾರದು. ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು. ವಿಷಯವಾರು ವಿದ್ಯಾರ್ಥಿಗಳ ಪ್ರಗತಿಯನ್ನು ಗಮನಿಸಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿಗಳು ಹಾಗೂ ವೈಯಕ್ತಿಕ ಮಾರ್ಗದರ್ಶನ ಒದಗಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕಳೆದ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ನಿರೀಕ್ಷಿತ ಪ್ರಶ್ನೆಗಳ ಬ್ಯಾಂಕ್‌ (Question Bank) ಸಿದ್ಧಪಡಿಸಿ ವಿತರಿಸಲಾಗಿತ್ತು. ಈ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಅನುಕೂಲವಾಗಿದೆ, ಪ್ರಶ್ನೆಗಳ ಬ್ಯಾಂಕ್‌ ಬಳಕೆಯಿಂದ ಅವರ ಪರೀಕ್ಷಾ ಸಿದ್ಧತೆ ಮತ್ತು ಸಾಧನೆಯಲ್ಲಿ ಎಷ್ಟರಮಟ್ಟಿಗೆ ಸುಧಾರಣೆ ಕಂಡುಬಂದಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಸಚಿವರು ಸೂಚಿಸಿದರು. ಈ ಕ್ರಮದ ಪರಿಣಾಮಕಾರಿತ್ವವನ್ನು ಪರಿಶೀಲಿಸಿ, ಮುಂದಿನ ವರ್ಷಗಳಲ್ಲಿ ಇಂತಹ ಶೈಕ್ಷಣಿಕ ನೆರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಂತೆ ಅವರು ಸಲಹೆ ನೀಡಿದರು.

ಶಿಕ್ಷಕರಿಗೆ ಅಗತ್ಯ ತರಬೇತಿ, ಶಾಲೆಗಳಲ್ಲಿ ನಿಯಮಿತ ಶೈಕ್ಷಣಿಕ ಮೇಲ್ವಿಚಾರಣೆ, ಮಾದರಿ ಪರೀಕ್ಷೆಗಳು, ಪೋಷಕರ ಸಹಭಾಗಿತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವಂತಹ ಕ್ರಮಗಳಿಗೂ ಆದ್ಯತೆ ನೀಡಬೇಕೆಂದು ಸಚಿವರು ಸೂಚಿಸಿದರು. ತಜ್ಞರು ನೀಡಿರುವ ಸಲಹೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಲಬುರಗಿ ಜಿಲ್ಲೆಯ ಶಾಲೆಗಳ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯಗತಗೊಳಿಸಬಹುದಾದ ಕ್ರಮಗಳನ್ನು ಒಳಗೊಂಡ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕು. ಈ ಕಾರ್ಯಯೋಜನೆಯ ಅನುಷ್ಠಾನ ಮತ್ತು ಫಲಿತಾಂಶದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆಯನ್ನೂ ರೂಪಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ತರುವುದು ಈ ಪ್ರಯತ್ನದ ಉದ್ದೇಶವಾಗಿದೆ.

ಸಭೆಯಲ್ಲಿ ಸುಭಾಷ್ ವಿ ರಾಠೋಡ್ ಇತರರು ಭಾಗವಹಿಸಿದ್ದರು.


Share

You cannot copy content of this page