ಬೆಂಗಳೂರು: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಮನುಷ್ಯನ ಪ್ರಾಣ ಎಷ್ಟು ಮುಖ್ಯವೋ, ಬಹುಶಃ ಅದಕ್ಕಿಂತ ಒಂದು ಹೆಜ್ಜೆ ಹೆಚ್ಚು ಜಾನುವಾರುಗಳ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಜಾನುವಾರುಗಳು ನಮ್ಮ ಆಸ್ತಿ. ಇಂತಹ ಬರಗಾಲದಲ್ಲಿ ಅವುಗಳಿಗೆ ಮೇವು ಹೇಗೆ ಒದಗಿಸಬೇಕು ಎಂಬುದು ಬಹಳ ಮುಖ್ಯ ಎಂದರು.
ಶೇ.82ರಷ್ಟು ಬೆಳೆ ವೈಫಲ್ಯವಾಗಿದೆ. ಎಲ್ಲಿ ನೋಡಿದರೂ ಬೆಳೆ ಇಲ್ಲ. ಯಾವ ಜಿಲ್ಲೆ, ಯಾವ ತಾಲೂಕಿಗೆ ಹೋದರೂ ಬೆಳೆ ಇಲ್ಲದ ಪರಿಸ್ಥಿತಿಯಿದೆ. ಪ್ರಸ್ತುತ ನಮ್ಮ ಬಳಿ ಕೇವಲ 33 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಹೀಗಾಗಿ ತಕ್ಷಣವೇ ಮೇವಿನ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಎಲ್ಲೆಲ್ಲಿ ಕೊಳವೆಬಾವಿಗಳಿವೆ, ಎಲ್ಲೆಲ್ಲಿ ನೀರಿನ ಮೂಲಗಳಿವೆಯೋ ಅಲ್ಲಿ ಮೇವು ಬೆಳೆಯುವಂತೆ ರೈತರಿಗೆ ತಿಳಿಸಿ ಮೇವಿನ ಕಿಟ್‌ಗಳನ್ನು ನೀಡಿದ್ದೇವೆ ಎಂದರು.
ಈಗಾಗಲೇ ಪಶುಸಂಗೋಪನಾ ಇಲಾಖೆಗೆ ₹25 ಕೋಟಿ ಬಿಡುಗಡೆ ಮಾಡಿದ್ದೇವೆ. ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ ಲಕ್ಷಾಂತರ ಕಿಟ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇನ್ನೂ 3ರಿಂದ 4 ಲಕ್ಷ ಕಿಟ್‌ಗಳನ್ನು ನೀಡುತ್ತಿದ್ದೇವೆ. ಇದಷ್ಟೇ ಅಲ್ಲ, ಕೆಎಂಎಫ್‌ಗೂ ಈ ಸಂಬಂಧ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಲು ಪೂರೈಸುವ ರೈತರು ಕೆಎಂಎಫ್‌ಗೆ ಸೇರಿದವರೇ ಆಗಿರುವುದರಿಂದ ಅವರಿಗಾಗಿ ಹಣ ಖರ್ಚು ಮಾಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದ್ದೇವೆ. ಅದರಂತೆ ಕೆಎಂಎಫ್ ಮೂಲಕವೂ ಒಂದೊಂದು ಜಿಲ್ಲೆಯಲ್ಲಿ 4 ಲಕ್ಷ, 5 ಲಕ್ಷ ಕಿಟ್‌ಗಳನ್ನು ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಅನೇಕ ಕಡೆಗಳಲ್ಲಿ ರೈತರು ಮೇವು ಬೆಳೆಯಲು ಆರಂಭಿಸಿದ್ದಾರೆ. ಜೋಳ ಸೇರಿದಂತೆ ವಿವಿಧ ಮೇವಿನ ತಳಿಗಳನ್ನು ಬೆಳೆಯುವ ಕೆಲಸ ಪ್ರಾರಂಭವಾಗಿದೆ. ಇದು ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ. ಮೇವಿಗೆ ತೊಂದರೆಯಾಗದಂತೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ವಿಕೋಪಕ್ಕೆ ಹೋದರೆ ಗೋಶಾಲೆಗಳನ್ನು ತೆರೆಯಲು ಮತ್ತು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ತಕ್ಷಣ ಸ್ಪಂದಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಮತ್ತೆ ಪ್ರತ್ಯೇಕವಾಗಿ ಹಣ ಕೇಳುವ ಅಗತ್ಯವಿಲ್ಲ. ಜಿಲ್ಲಾಧಿಕಾರಿಗಳ ಬಳಿಯೇ ಹಣವಿದೆ. PD Accountನಲ್ಲಿ ಹಣವಿದ್ದು, ಅದನ್ನು ಖರ್ಚು ಮಾಡಿ ಈ ಕೆಲಸಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ ಎಂದು ಹೇಳಿದರು.
ಜನರು ಗುಳೆ ಹೋಗುತ್ತಿದ್ದಾರೆ ಎಂಬ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಗುರುಮಠಕಲ್ ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ಅವರು ರೈಲ್ವೆ ನಿಲ್ದಾಣಕ್ಕೆ ಹೋಗಿ ಯಾರು ಯಾರು ಟಿಕೆಟ್ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ನೂರಾರು ಜನ ರೈಲಿನಲ್ಲಿ ಬೆಂಗಳೂರಿಗೆ, ಮುಂಬೈಗೆ ಹೋಗುತ್ತಿದ್ದಾರೆ ಎಂಬ ಅಂಕಿ-ಅಂಶಗಳನ್ನು ಅವರು ಸಂಗ್ರಹಿಸಿದ್ದಾರೆ ಎಂದರು.
ನನಗೂ ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಜನರು ಗುಳೆ ಹೋಗುತ್ತಿರುವ ಮಾಹಿತಿ ಬಂದಿದೆ. ಜನರು ಮುಂಬೈಗೆ ಹೋಗುತ್ತಿದ್ದಾರೆ. ಮೊದಲು ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿದ್ದರು. ಆದರೆ ಈಗ ಕಾಫಿ ತೋಟಗಳಿರುವ ಪ್ರದೇಶಗಳಲ್ಲಿಯೂ ಮಳೆಯಿಲ್ಲ. ಮಡಿಕೇರಿಯಲ್ಲಿಯೂ ಮಳೆಯಿಲ್ಲ. ಕಾಫಿ ತೋಟಗಳು ಒಣಗುತ್ತಿವೆ. ಸಕಲೇಶಪುರದವರಿಗೂ ಈ ಪರಿಸ್ಥಿತಿ ಗೊತ್ತಿದೆ ಎಂದು ತಿಳಿಸಿದರು.
ನರೇಗಾದಿಂದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿದ್ದೀರಿ ಎಂದು ನಾವು ವಿರೋಧಿಸಿದ್ದು ನಿಜ. ಆದರೆ ಇಂದಿನ ಪರಿಸ್ಥಿತಿ ಹೇಗಿದೆ? ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದಿದ್ದೀರಿ ಎಂದು ನಾವೂ ನೀವೂ ಜಗಳ ಮಾಡಿಕೊಂಡು ಕುಳಿತರೆ ಅಲ್ಲಿರುವ ಜನರ ಪರಿಸ್ಥಿತಿ ಏನಾಗಬೇಕು? ಜನರು ಗುಳೆ ಹೋಗುವುದನ್ನು ತಡೆಯಬೇಕಲ್ಲವೇ? ಆ ಕಾರಣಕ್ಕಾಗಿ ವಿಬಿ ಜಿ ರಾಮ್ ಜಿ ಕಾರ್ಯಕ್ರಮವನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದ್ದೇವೆ ಎಂದರು.
“ಎಲ್ಲಿಯೂ ಕೆಲಸ ಮಾಡಿಲ್ಲ, ಏನೂ ಆಗಿಲ್ಲ” ಎಂದು ಹೇಳಲಾಗಿದೆ. ಆದರೆ ನಾನು ಸ್ವತಃ ಅನೇಕ ಕಡೆಗಳಿಗೆ ಹೋಗಿದ್ದೇನೆ. ಕೆರೆಗಳಲ್ಲಿ ನಡೆಯುತ್ತಿರುವ ಕೆಲಸಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಅನೇಕ ಕಡೆಗಳಲ್ಲಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಈವರೆಗೆ ನನ್ನ ಬಳಿ ಇರುವ ಮಾಹಿತಿಯ ಪ್ರಕಾರ ಸುಮಾರು 136 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆಲಸ ನಡೆಯುತ್ತಿದೆ. ಅದನ್ನು ಇನ್ನೂ ಮುಂದುವರಿಸುವಂತೆ ಸೂಚಿಸಿದ್ದೇವೆ. ಹಣ ನೀಡುತ್ತೇವೆ, ಎಷ್ಟೇ ಅಗತ್ಯವಿದ್ದರೂ ಹಣ ನೀಡುತ್ತೇವೆ, ಕೇಂದ್ರ ಸರ್ಕಾರವೂ ಹಣ ನೀಡುತ್ತದೆ ಎಂದು ತಿಳಿಸಿ ಕೆಲಸ ಮುಂದುವರಿಸಲು ಸೂಚಿಸಿದ್ದೇವೆ ಎಂದರು.
ಸುನೀಲ್ ಅವರು ಸಪ್ಲಿಮೆಂಟರಿ ಬಜೆಟ್‌ನಲ್ಲಿ ಹಣವನ್ನೇ ಇಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಸಪ್ಲಿಮೆಂಟರಿ ಬಜೆಟ್. VBG RAM Gಗೆ ಸಪ್ಲಿಮೆಂಟರಿ ಬಜೆಟ್‌ನಲ್ಲಿ ₹2,280 ಕೋಟಿ ಇಟ್ಟಿದ್ದೇವೆ ಎಂದು ತಿಳಿಸಿದರು.
VBG RAM G ಬಗ್ಗೆ ಬೇಕಾದರೆ ಇನ್ನೂ ವಿವರವಾಗಿ ಮಾತನಾಡಬಹುದು. ಈ VB G RAM G ಯೋಜನೆಯಲ್ಲಿ ಮೊದಲು 90:10 ಇದ್ದ ಅನುದಾನ ಹಂಚಿಕೆ ಈಗ 60:40 ಆಗಿದೆ. ಇದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಇದರಿಂದ ತೊಂದರೆ ಉಂಟಾಗಿದೆ. ಆದರೆ ಇಂದು ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಯಾವ ರೀತಿಯಲ್ಲಿ ತೊಂದರೆಯಾಗಿದೆ ಎಂಬುದನ್ನೂ ಹೇಳಬೇಕಾಗುತ್ತದೆ ಎಂದರು.
2023-24ರಲ್ಲಿ ಬರಗಾಲ ಬಂದಿತ್ತು. ಆಗ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಸುಮಾರು ₹39,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ NDRF ಮಾರ್ಗಸೂಚಿಗಳ ಪ್ರಕಾರ ಅಷ್ಟು ಮೊತ್ತವನ್ನು ಕೇಳಲು ಸಾಧ್ಯವಿರಲಿಲ್ಲ. ನಷ್ಟದ ಅಂದಾಜನ್ನು NDRF ಮಾರ್ಗಸೂಚಿಗಳಿಗೆ ಅನುಗುಣವಾಗಿ ಲೆಕ್ಕ ಹಾಕಿದ ನಂತರ ಅದು ಸುಮಾರು ₹18,000 ಕೋಟಿಗೆ ಬಂತು. ನಾವು ₹18,000 ಕೋಟಿ ಕೇಳಿದ್ದೆವು. “ನಿಮ್ಮದೇ ಮಾರ್ಗಸೂಚಿಗಳ ಪ್ರಕಾರ ಈ ಮೊತ್ತ ಬಂದಿದೆ, ಕನಿಷ್ಠ ಇಷ್ಟಾದರೂ ನೀಡಿ” ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಒಂದು ಪೈಸೆಯನ್ನೂ ನೀಡಲಿಲ್ಲ ಎಂದು ತಿಳಿಸಿದರು.
ಇದಕ್ಕೆ ವಿರುದ್ಧವಾಗಿ, “NDRF ಮಾರ್ಗಸೂಚಿಗಳನ್ನು ಪಾಲನೆ ಮಾಡಿದ ಏಕೈಕ ರಾಜ್ಯ ಕರ್ನಾಟಕವಾಗಿತ್ತು. ಉಳಿದ ರಾಜ್ಯಗಳು ನಮ್ಮನ್ನು ಅನುಸರಿಸಬೇಕು” ಎಂದು ಕರ್ನಾಟಕವು NDRF ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿರುವುದನ್ನು ಉಲ್ಲೇಖಿಸಲಾಯಿತು. ಆದರೆ ಹಣ ನೀಡಲಿಲ್ಲ ಎಂದರು.
ನಾವು ದೆಹಲಿಗೆ ಹೋಗಿ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ. ಒಂದು ರಾಜ್ಯದ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಮತ್ತು ಶಾಸಕರು ದೆಹಲಿಗೆ ಹೋದರೂ ನಮಗೆ ಭೇಟಿಗೆ ಅವಕಾಶ ನೀಡಲಿಲ್ಲ. ನಾವು ಹೊರಗಡೆ ಪ್ರತಿಭಟನೆ ನಡೆಸಿ ಹಿಂದಿರುಗಿದ್ದೇವೆ. ಅದರಿಂದಲೂ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
ಕೊನೆಗೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸುಪ್ರೀಂ ಕೋರ್ಟ್‌ಗೆ ಹೋಗಿ, ಬರಗಾಲದ ಸಂದರ್ಭದಲ್ಲಿ ನಮಗೆ ನೀಡಬೇಕಾದ ಹಣವನ್ನು ನೀಡಿ, ಇದು ನಮ್ಮ ಹಕ್ಕು ಎಂದು ಕೇಳಬೇಕಾಯಿತು. ನಾವು NDRF ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿದ್ದೆವು. ಒಂದು ವೇಳೆ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಿದ್ದರೆ ನಮಗೆ ಹಣ ಸಿಗುತ್ತಿರಲಿಲ್ಲ ಮತ್ತು ಅಲ್ಲಿಯೇ ತಿರಸ್ಕಾರವಾಗುತ್ತಿತ್ತು. ಆದರೆ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ್ದರಿಂದ ಕೊನೆಗೆ ನಮಗೆ ₹3,400 ಕೋಟಿ ಹಣ ದೊರೆಯಿತು. ಅಂತಿಮವಾಗಿ ಭಾರತ ಸರ್ಕಾರ ಆ ಹಣವನ್ನು ನೀಡಿತು ಎಂದು ತಿಳಿಸಿದರು.
ಕರ್ನಾಟಕಕ್ಕೆ ₹8,559 ಕೋಟಿ; ರಾಜ್ಯದ ಪಾಲನ್ನು ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ : ಈಗ 16ನೇ ಹಣಕಾಸಿನ ಹಿನ್ನೆಲೆಯಲ್ಲಿ, ಕಳೆದ ಐದು ವರ್ಷಗಳಲ್ಲಿ ಯಾವ ಯಾವ ರಾಜ್ಯಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನೂ ಗಮನಿಸಬೇಕು. ಮಹಾರಾಷ್ಟ್ರಕ್ಕೆ ₹39,492 ಕೋಟಿ ನೀಡಲಾಗಿದೆ. ಮಧ್ಯಪ್ರದೇಶಕ್ಕೆ ₹15,596 ಕೋಟಿ ನೀಡಲಾಗಿದೆ. ಬಿಹಾರಕ್ಕೆ ₹18,153 ಕೋಟಿ ಹಣ ಕೊಟ್ಟಿದ್ದಾರೆ. ರಾಜಸ್ಥಾನಕ್ಕೆ ₹12,281 ಕೋಟಿ ನೀಡಲಾಗಿದೆ. ಪಶ್ಚಿಮ ಬಂಗಾಳಕ್ಕೆ ₹9,158 ಕೋಟಿ ಹಾಗೂ ಕರ್ನಾಟಕಕ್ಕೆ ₹8,559 ಕೋಟಿ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಮಹಾರಾಷ್ಟ್ರಕ್ಕೆ ಹೆಚ್ಚು ಕೊಟ್ಟು, ಕರ್ನಾಟಕಕ್ಕೆ ಯಾಕೆ ಕಡಿಮೆ ಕೊಡಬೇಕು? ಏನಿದು ತಾರತಮ್ಯ? ನಾವು ನಿಯಮಿತವಾಗಿ ತೆರಿಗೆಗಳನ್ನು ಕಟ್ಟುತ್ತೇವೆ. ಮಾರ್ಗದರ್ಶನಗಳನ್ನು ಪಾಲಿಸುತ್ತೇವೆ. ನಮಗೆ ಯಾಕೆ ಈ ಶಿಕ್ಷೆ? ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬುದಿಲ್ಲ. ಇದು ರಾಜ್ಯದ ಹಿತದ ವಿಷಯ. ರಾಜ್ಯದ ಪಾಲನ್ನು ಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದರು.
ಹಿಂದಿನ ಮನಮೋಹನ್ ಸಿಂಗ್ ಅವರ ಸರ್ಕಾರ, ಈಗಿನ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಹಣಕಾಸನ್ನು ಹೋಲಿಕೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ ಆಗಿನ ಬಜೆಟ್ ಗಾತ್ರಕ್ಕೂ ಈಗಿನ ಬಜೆಟ್ ಗಾತ್ರಕ್ಕೂ ಹೋಲಿಕೆ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಒಂದಷ್ಟು ನಿಯಮ-ಮಾನದಂಡಗಳಿವೆ. 2023ರಲ್ಲಿ ಬರ ಬಂದಾಗ ಈ ನಿಯಮಗಳನ್ನು ಅನುಸರಿಸಲು ನಮಗೆ ಬಹಳ ಕಷ್ಟವಾಯಿತು. ಆದರೂ ಅದನ್ನು ಅನುಸರಿಸಿದ್ದೆವು. ನಂತರ ನಾವು ಕೇಂದ್ರ ಸರ್ಕಾರಕ್ಕೆ ಬರದ ಮಾನದಂಡಗಳಲ್ಲಿ ಕೆಲವು ಸಡಿಲಿಕೆ ಮತ್ತು ಬದಲಾವಣೆ ಮಾಡುವಂತೆ ಮನವಿ ಮಾಡಿದೆವು. ನಾವು ಸುಮಾರು 10 ಪತ್ರಗಳನ್ನು ಬರೆದಿದ್ದೇವೆ. ಹಿಂದಿನ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಕಂದಾಯ ಸಚಿವರು ಪತ್ರ ಬರೆದಿದ್ದಾರೆ, ಈಗಿನ ಮುಖ್ಯಮಂತ್ರಿಗಳು ಹಾಗೂ ನಾನು ಪತ್ರ ಬರೆದಿದ್ದೇನೆ. ಈ ಯಾವುದಕ್ಕೂ ನಮಗೆ ಸಹಕಾರ ಸಿಗಲಿಲ್ಲ ಎಂದು ಹೇಳಿದರು.
ಈ ಮಾನದಂಡಗಳಲ್ಲಿ ಮೊದಲನೆಯದು ಮಳೆಯ ಪ್ರಮಾಣದ ಬಗ್ಗೆ. ಎರಡನೆಯದು ಅಲ್ಲಿನ ಬೆಳೆ, ಬಿತ್ತನೆ ಪ್ರಮಾಣ, ಉಪಗ್ರಹದ ದತ್ತಾಂಶ, ಮಣ್ಣಿನ ತೇವಾಂಶ ಹಾಗೂ ನೀರಿನ ಸಂಗ್ರಹಣೆ ಸ್ಥಿತಿ. ಇದಾದ ನಂತರ ಗ್ರೌಂಡ್ ಟ್ರೂಥಿಂಗ್ ಮಾಡಬೇಕು. ಇವೆಲ್ಲವನ್ನೂ ಮಾಡಲೇಬೇಕು ಎಂದರು.
ಆದರೆ ಇದರ ನಡುವೆ ಕೆಲವು ಕಡೆ ಮುಷ್ಕರ, ಪ್ರತಿಭಟನೆಗಳು ನಡೆದವು. ನಾನು ಯಾವುದೇ ಅಧಿಕಾರಿಗೆ ಈ ತಾಲೂಕನ್ನು ಮಾಡಿ, ಈ ತಾಲೂಕನ್ನು ಮಾಡಬೇಡಿ ಎಂದು ಒಂದು ಬಾರಿ ಹೇಳಿಲ್ಲ. ಅವರ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿಯವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 50 ತಾಲೂಕುಗಳು ಈ ಮಾನದಂಡಗಳ ಅಡಿ ಬರಲಿದ್ದು, ಒಟ್ಟು 220 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಗ್ರೌಂಡ್ ಟ್ರೂಥಿಂಗ್ ಮಾಡದೆ, ಮಾನದಂಡಗಳನ್ನು ಪೂರೈಸದೆ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ಮೊದಲ ಸುತ್ತಿನಲ್ಲಿ ಗದಗ, ರೋಣ, ಮುಖ್ಯಮಂತ್ರಿಗಳ ಕ್ಷೇತ್ರ ಕೂಡ ಆಗಿರಲಿಲ್ಲ ಎಂದು ತಿಳಿಸಿದರು.
ಈ ಬಾರಿ 84.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 68.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಗುಂಡ್ಲುಪೇಟೆ, ನಂಜನಗೂಡು, ಹನೂರು, ಹಿರಿಯೂರು ಹೀಗೆ ಎಲ್ಲ ಕಡೆ ಹೋಗಿದ್ದೆವು. ಅಲ್ಲಿ ಎಲ್ಲ ಕಡೆ ಬಿತ್ತನೆ ನಷ್ಟವಾಗಿದೆ. ತೋಟಗಾರಿಕೆಯಲ್ಲಿ 4.36 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 3.78 ಲಕ್ಷ ಹೆಕ್ಟೇರ್‌ನಲ್ಲಿ ಆಗಿದೆ. ಇಂದು ಕುಡಿಯುವ ನೀರು, ಮೇವು, ಕೃಷಿ ಹೀಗೆ ಎಲ್ಲ ಕಡೆಗಳಲ್ಲಿ ನಮಗೆ ತೊಂದರೆ ಆಗಿದೆ ಎಂದು ಹೇಳಿದರು.
2019-20ರಲ್ಲಿ 206 ತಾಲೂಕುಗಳಲ್ಲಿ ಬರ ಬಂತು. ಆಗ ₹35,000 ಕೋಟಿ ಅಂದಾಜು ನಷ್ಟವಾಗಿತ್ತು. ಕರ್ನಾಟಕವು ಕೇಂದ್ರ ಸರ್ಕಾರವನ್ನು ಕೇಳಿದ್ದು ₹3,891 ಕೋಟಿ. ಆದರೆ ಕೇಂದ್ರ ಕೊಟ್ಟಿದ್ದು ₹1,652 ಕೋಟಿ ಮಾತ್ರ. 2020-21ರಲ್ಲಿ 104 ತಾಲೂಕುಗಳಲ್ಲಿ ಪ್ರವಾಹ ಬಂತು. ₹24,764 ಕೋಟಿ ನಷ್ಟವಾಯಿತು. ಕೇಂದ್ರವನ್ನು ಕೇಳಿದ್ದು ₹2,122 ಕೋಟಿ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ₹492 ಕೋಟಿ. 2023-24ರಲ್ಲಿ ಏನಾಯಿತು ಎಂದು ಸದನದ ಗಮನಕ್ಕೆ ತಂದಿದ್ದೇನೆ. ಇಂದು ನಾವು ಚರ್ಚೆ ಮಾಡುತ್ತಿರುವುದು ಒಂದು ಐತಿಹಾಸಿಕ ವಿಚಾರ. ಇಂತಹ ಪರಿಸ್ಥಿತಿ ಯಾವತ್ತಿಗೂ ರಾಜ್ಯಕ್ಕೆ ಬರಬಾರದು ಎಂದು ಆಶಿಸುತ್ತೇನೆ ಎಂದರು.
ಬೆಳೆ ವಿಮೆಗೆ ದಾಖಲೆಯ 49 ಲಕ್ಷ ರೈತರ ನೋಂದಣಿ : ಇನ್ನೊಂದು ಬೆಳೆ ವಿಮೆಯ ವಿಚಾರವನ್ನು ಸುನೀಲ್ ಅವರು ಪ್ರಸ್ತಾಪಿಸಿದ್ದಾರೆ. ಬೆಳೆ ವಿಮೆಗೆ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮ ರೈತರು ನೋಂದಣಿ ಮಾಡಿಕೊಂಡಿರಲಿಲ್ಲ. ಈ ವರ್ಷ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದು ಈವರೆಗಿನ ಅತ್ಯಧಿಕ ನೋಂದಣಿಯಾಗಿದೆ. ಅವರಿಗೆಲ್ಲ ಪರಿಹಾರ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಡಾ. ಜಿ. ಪರಮೇಶ್ವರ ಅವರು ಹೇಳಿದರು.
2020-21ರಲ್ಲಿ ತೋಟಗಾರಿಕೆ ಮತ್ತು ಕೃಷಿ ಎರಡೂ ಸೇರಿ 15 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದರು. 2021-22ರಲ್ಲಿಯೂ 15 ಲಕ್ಷ ರೈತರು ವಿಮೆ ಮಾಡಿಸಿದ್ದರು. 2024-25ರಲ್ಲಿ ಈ ಸಂಖ್ಯೆ 34 ಲಕ್ಷಕ್ಕೆ ಏರಿಕೆಯಾಗಿತ್ತು. 2026-27ರಲ್ಲಿ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಇದು ಈವರೆಗಿನ ಅತ್ಯಧಿಕ ಪ್ರಮಾಣವಾಗಿದೆ ಎಂದು ತಿಳಿಸಿದರು.
ಬೆಳೆ ನಷ್ಟವಾದ ಸಂದರ್ಭದಲ್ಲಿ ಒಂದಿಷ್ಟಾದರೂ ಪರಿಹಾರ, ತಮ್ಮ ಬೆಳೆಗಳಿಗೆ ಒಂದಿಷ್ಟಾದರೂ ಹಣ ಸಿಗಬಹುದು ಎಂಬ ನಿರೀಕ್ಷೆಯಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಇಂದು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಎಲ್ಲ ರೈತರಿಗೂ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ಇಂದು ವಿದ್ಯುತ್ ಶಕ್ತಿ ಬಗ್ಗೆ ಬಹಳಷ್ಟು ಮಂದಿ ಮಾತನಾಡಿದ್ದಾರೆ. ಇಂದು 30% ಬೇಡಿಕೆ ಹೆಚ್ಚಾಗಿದೆ. 19-09-2026ರ ಹೊತ್ತಿಗೆ ರಾಜ್ಯದಲ್ಲಿ 20,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ನಿರ್ಮಾಣವಾಗಿದೆ. ಆದರೂ ನಾವು ರೈತರಿಗೆ 6 ತಾಸು ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
16ನೇ ಹಣಕಾಸು ಆಯೋಗದ ಪ್ರಕಾರ ನಮಗೆ SDRFನಲ್ಲಿ ₹929 ಕೋಟಿ ಹಣ ಬರಬೇಕಿತ್ತು. ಆದರೆ ನಮಗೆ ಬಂದಿದ್ದು ₹464 ಕೋಟಿ ಹಣ. ಇದು ಬರ ಪರಿಹಾರದ ಹಣವಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ರಾಜ್ಯದ ಹಣಕಾಸನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ಆರ್ಥಿಕತೆ ಸದೃಢವಾಗಿರುವ ಕಾರಣಕ್ಕಾಗಿಯೇ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ ಎಂದರು.
ನಮ್ಮ ಆಡಳಿತದಲ್ಲಿ ರಾಜ್ಯದ ಹಿತ ಮತ್ತು ಜನರಿಗೆ ಸಮಸ್ಯೆ ಆಗಬಾರದು ಎಂಬುದನ್ನು ಮುಖ್ಯವಾಗಿಟ್ಟುಕೊಂಡಿದ್ದೇವೆ. ನಮ್ಮ ಭರವಸೆಗಳಲ್ಲಿ 250 ಭರವಸೆಗಳನ್ನು ಈಡೇರಿಸಿದ್ದೇವೆ. ಕೆಲವು ಭರವಸೆಗಳನ್ನು ಈಡೇರಿಸಲಾಗುತ್ತಿದೆ ಎಂದು ತಿಳಿಸಿದರು.
