ಸಮಗ್ರ ಸುದ್ದಿ

ವರ್ತಮಾನದ ಜೀವಂತಿಕೆ ಸಮಾಜಕ್ಕೆ ಅತಿ ಮುಖ್ಯ:ಈಶ್ವರ ಖಂಡ್ರೆ

Share

ಬೆಂಗಳೂರು: ಯಾವುದೇ ಸಮಾಜಕ್ಕೆ ಐತಿಹಾಸಿಕ ಶ್ರೀಮಂತಿಕೆ ಇದ್ದರಷ್ಟೇ ಸಾಲದು ಅದಕ್ಕೆ ವರ್ತಮಾನದ ಜೀವಂತಿಕೆಯೂ ಅಷ್ಟೇ ಮುಖ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ವೀರಶೈವ ಲಿಂಗಾಯತ ಮಹಾಸಭಾದಲ್ಲಿಂದು ನಡೆದ ಮಹಿಳಾ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಶ್ರೇಷ್ಠರಾಗಿದ್ದರು, ಹೀಗಾಗಿ ನಾವೂ ಶ್ರೇಷ್ಠ ಎಂದು ಕೂರದೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ವಯಂ ಪರಿಶ್ರಮದಿಂದ ನಾವು ಮೇಲೆ ಬರಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಇಂದು ರಾಜ್ಯ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುವಲ್ಲಿ ವೀರಶೈವ, ಲಿಂಗಾಯತ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಅನಕ್ಷರತೆ ತಾಂಡವವಾಡುತ್ತಿದ್ದ ಕಾಲದಲ್ಲಿ, ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ನ, ಆಶ್ರಯ, ಅಕ್ಷರ ನೀಡಿ ವಿದ್ಯಾವಂತರನ್ನಾಗಿ ಮಾಡಿ, ಮೌಢ್ಯತೆಯನ್ನು ದೂರ ಮಾಡಿದ ಕೀರ್ತಿ ನಮ್ಮ ಮಠಗಳಿಗೆ ಸಲ್ಲುತ್ತದೆ ಎಂದರು.

ಹಾನಗಲ್ಲ ಕುಮಾರೇಶ್ವರರು 122 ವರ್ಷಗಳ ಹಿಂದೆ ಸ್ಥಾಪಿಸಿದ ಮಹಾಸಭಾ, ಎಲ್ಲ ಉಪ ಪಂಗಡಗಳನ್ನೂ ಒಗ್ಗೂಡಿಸಿ, ಸಮಾಜದ ಕ್ಷೇಮಾಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಮಹಿಳಾ ಘಟಕದವರು ಮಹಿಳೆಯರಲ್ಲಿ ಧರ್ಮಜಾಗೃತಿ ಮೂಡಿಸಬೇಕು. ಮಾತೆಯರು ತಮ್ಮ ಮಕ್ಕಳಿಗೆ ವಚನಗಳನ್ನು ಕಲಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಬದುಕಿನ ಬಂಡಿ ಮುಂದೆ ಸಾಗಲು ಪುರುಷರು ಮತ್ತು ಮಹಿಳೆಯರು ಸರಿಸಮಾನವಾಗಿ ಹೋಗಬೇಕಾಗುತ್ತದೆ. ಮಹಿಳೆಯಿಲ್ಲದೆ ಸೃಷ್ಟಿಯೇ ಇಲ್ಲ. ನಮ್ಮ ಸಮಾಜ ಮೊದಲಿನಿಂದಲೂ ಮಹಿಳೆಗೆ ಉನ್ನತ ಸ್ಥಾನ ನೀಡಿದೆ. ಸಮಾನತೆ ನೀಡಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಮುಕ್ತವಾಗಿ ಚರ್ಚಿಸಲು, ತಮ್ಮ ವಿಚಾರ ಮಂಡಿಸಲು ಅವಕಾಶ ನೀಡಿದ್ದರು ಎಂದರು.

ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಮಹಿಳೆಯರು ಸಾಬೀತು ಮಾಡಿದ್ದಾರೆ. ವಿಜ್ಞಾನ,ತಂತ್ರಜ್ಞಾನ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾರೆ. ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ಸಮಾಜದ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page