ಬೆಂಗಳೂರು:ಪೊಲೀಸ್ ಇಲಾಖೆಯ ಪ್ರಸ್ತುತ ಕಾರ್ಯಭಾರ, ಬದಲಾಗುತ್ತಿರುವ ಕರ್ತವ್ಯಗಳು ಹಾಗೂ ಭವಿಷ್ಯದಲ್ಲಿ ಎದುರಾಗಲಿರುವ ಅಗತ್ಯಗಳಿಗೆ ಅನುಗುಣವಾಗಿ ಇಲಾಖೆಯ ವೃಂದ ರಚನೆ, ಹುದ್ದೆಗಳ ವರ್ಗೀಕರಣ, ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಶಿಫಾರಸುಗಳನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಕರ್ತವ್ಯಗಳ ಸ್ವರೂಪದಲ್ಲಿ ನಿರಂತರ ಬದಲಾವಣೆಗಳಾಗುತ್ತಿದ್ದು, ಹೊಸ ಸವಾಲುಗಳು ಮತ್ತು ಹೆಚ್ಚುತ್ತಿರುವ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವೃಂದ ರಚನೆ ಹಾಗೂ ಹುದ್ದೆಗಳ ಮಂಜೂರಾತಿ ಬಲವನ್ನು ಸಮಗ್ರವಾಗಿ ಪರಿಶೀಲಿಸುವುದರ ಜೊತೆಗೆ, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಇಲಾಖೆಯ ಮಾನವ ಸಂಪನ್ಮೂಲ ಯೋಜನೆಯನ್ನು ರೂಪಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆ ಮತ್ತಷ್ಟು ಪರಿಣಾಮಕಾರಿ
ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಪುನರ್‌ನಿಗದಿಪಡಿಸುವುದು, ತರಬೇತಿ ಮತ್ತು ಸಾಮರ್ಥ್ಯವೃದ್ಧಿ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ಪೊಲೀಸ್ ಸಿಬ್ಬಂದಿಯ ವೃತ್ತಿಪರ ಬೆಳವಣಿಗೆಗೆ ಅಗತ್ಯ ಕ್ರಮಗಳ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ. ಕೆಪಿಎ, ಮೈಸೂರು ಹಾಗೂ ಇತರೆ ತರಬೇತಿ ಘಟಕಗಳ ಬಲವರ್ಧನೆಯ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಲಿದೆ. ವಿವಿಧ ಹಂತದ ಹುದ್ದೆಗಳಲ್ಲಿ ಬಡ್ತಿ ಅವಕಾಶ, ವೃತ್ತಿಜೀವನದ ಪ್ರಗತಿ ಹಾಗೂ ಹುದ್ದೆಗಳ ಚಲನಶೀಲತೆಯನ್ನು ಪರಿಶೀಲಿಸುವುದರ ಜೊತೆಗೆ, ಹೊಸ ಹುದ್ದೆಗಳ ಸೃಜನೆ ಮತ್ತು ಅಸ್ತಿತ್ವದಲ್ಲಿರುವ ಹುದ್ದೆಗಳ ಪುನರ್‌ವರ್ಗೀಕರಣದ ಅಗತ್ಯವಿದೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಮೀಸಲಾತಿ ಮತ್ತು ಮಾನವ ಸಂಪನ್ಮೂಲ ಯೋಜನೆಗೂ ಒತ್ತು
ಮೀಸಲಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಹುದ್ದೆಗಳ ವಿನ್ಯಾಸವನ್ನು ಪರಿಶೀಲಿಸುವುದು, ಮುಂದಿನ ವರ್ಷಗಳ ಮಾನವ ಸಂಪನ್ಮೂಲ ಅಗತ್ಯಕ್ಕೆ ಅನುಗುಣವಾಗಿ ನೇಮಕಾತಿ ಯೋಜನೆ ರೂಪಿಸುವುದು ಹಾಗೂ ನೇರ ನೇಮಕಾತಿ ಮತ್ತು ಮುಂಬಡ್ತಿಯ ಹುದ್ದೆಗಳ ನಡುವಿನ ಸೂಕ್ತ ಅನುಪಾತವನ್ನು ಪರಿಶೀಲಿಸುವುದೂ ಸಮಿತಿಯ ಜವಾಬ್ದಾರಿಯಾಗಿದೆ. ಇದರ ಜೊತೆಗೆ, ಪೊಲೀಸ್ ಇಲಾಖೆಯ ಅಧೀನದಲ್ಲಿರುವ ವಾಹನ ಚಾಲಕರು ಹಾಗೂ ಸಣ್ಣಪುಟ್ಟ ವರ್ಗದ ನೌಕರರಿಗೆ ಸೃಜಿಸಲಾಗಿರುವ ಹುದ್ದೆಗಳ ಕುರಿತೂ ಪರಿಶೀಲನೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಕಮಲ್ ಪಂತ್ ನೇತೃತ್ವದಲ್ಲಿ ಸಮಿತಿ
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್,ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ, ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಚೇತನ್ ಸಿಂಗ್ ರಾಠೋಡ್ ಹಾಗೂ ಬೆಂಗಳೂರು ನಗರ ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಸದಸ್ಯರಾಗಿದ್ದಾರೆ.
ಸರ್ಕಾರದ ಆದೇಶದಂತೆ ಸಮಿತಿಗೆ ಎರಡು ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದ್ದು, ಪೊಲೀಸ್ ಇಲಾಖೆಯ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅಗತ್ಯ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
“ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಅಂದಾಜಿಸಿ, ಸರಿಯಾದ ಹುದ್ದೆ ವಿನ್ಯಾಸ, ಪರಿಣಾಮಕಾರಿ ನೇಮಕಾತಿ ವ್ಯವಸ್ಥೆ, ಸಮರ್ಪಕ ತರಬೇತಿ ಹಾಗೂ ಸಿಬ್ಬಂದಿಯ ವೃತ್ತಿಪರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಮೂಲಕ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.”
