ಸಮಗ್ರ ಸುದ್ದಿ

ಪೋಲಂಡ್ ಪ್ರಧಾನಮಂತ್ರಿ ಡೊನಾಲ್ಡ್ ಟಸ್ಕ್ ಅವರ ಬೆಂಗಳೂರು ಭೇಟಿ, ನಿಯೋಗದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಚರ್ಚೆ

Share

ಬೆಂಗಳೂರು: ಅಕ್ಟೋಬರ್‌ನಲ್ಲಿ ಪೋಲಂಡ್ ಪ್ರಧಾನಮಂತ್ರಿ ಗೌರವಾನ್ವಿತ ಡೊನಾಲ್ಡ್ ಟಸ್ಕ್ ಅವರು ಬೆಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ, ಪೋಲಂಡ್ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸೆಲರ್ ಹಾಗೂ ರಾಜಕೀಯ ಮತ್ತು ಆರ್ಥಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲಾರಾ ಟ್ರೆಬೆಲ್-ಗ್ನಿಯಾಡೋವ್ಸ್ಕಾ ಅವರ ನೇತೃತ್ವದ ನಿಯೋಗವನ್ನು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ಮಾಡಿ, ಕರ್ನಾಟಕ–ಪೋಲಂಡ್ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದರು.

ಕರ್ನಾಟಕ ಮತ್ತು ಪೋಲಂಡ್ ನಡುವೆ ತಂತ್ರಜ್ಞಾನ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ಈಗಾಗಲೇ ಉತ್ತಮ ಸಹಭಾಗಿತ್ವದ ಅಡಿಪಾಯ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಪೋಲಂಡ್ ಪ್ರಧಾನಮಂತ್ರಿಯವರ ಬೆಂಗಳೂರು ಭೇಟಿಯನ್ನು ರಾಜ್ಯ ಮತ್ತು ಪೋಲಂಡ್ ನಡುವಿನ ತಂತ್ರಜ್ಞಾನ, ನವೋದ್ಯಮ ಹಾಗೂ ಸಂಶೋಧನಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಪ್ರಮುಖ ಅವಕಾಶವಾಗಿ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಯಿತು.

ಪೋಲಂಡ್ ಈಗಾಗಲೇ ಕರ್ನಾಟಕದ ಗ್ಲೋಬಲ್ ಇನ್ನೋವೇಷನ್ ಅಲೈಯನ್ಸ್ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ ಮೂಲಕ ರಾಜ್ಯದ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಸಹಭಾಗಿತ್ವವನ್ನು ಕೇವಲ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ವರ್ಷಪೂರ್ತಿ ಮುಂದುವರಿಯುವ ಸದೃಢ ಹಾಗೂ ಫಲಪ್ರದ ಪಾಲುದಾರಿಕೆಯಾಗಿ ರೂಪಿಸುವ ಉದ್ದೇಶವನ್ನು ಸಚಿವರು ವ್ಯಕ್ತಪಡಿಸಿದರು.

ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆ, ತಂತ್ರಜ್ಞಾನ ಸಾಮರ್ಥ್ಯ ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಪೋಲಂಡ್‌ನ ಉದ್ಯಮಗಳು ಮತ್ತು ಸಂಸ್ಥೆಗಳ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿಶೇಷವಾಗಿ ಉದ್ಯಮ–ಉದ್ಯಮ, ನವೋದ್ಯಮ–ನವೋದ್ಯಮ ಹಾಗೂ ಸಂಶೋಧನಾ ಸಂಸ್ಥೆಗಳ ನಡುವಿನ ನೇರ ಸಂಪರ್ಕ ಹೆಚ್ಚಿಸುವ ಮೂಲಕ ಜಂಟಿ ಯೋಜನೆಗಳು, ತಂತ್ರಜ್ಞಾನ ಸಹಕಾರ, ಹೂಡಿಕೆ ಮತ್ತು ಜ್ಞಾನ ವಿನಿಮಯಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕುರಿತು ಗಮನಸೆಳೆದರು.

ಕರ್ನಾಟಕವು ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮ ತಾಣವಾಗಿ ಹೊಂದಿರುವ ಸಾಮರ್ಥ್ಯವನ್ನು ಪೋಲಂಡ್‌ನ ತಂತ್ರಜ್ಞಾನ ಹಾಗೂ ಕೈಗಾರಿಕಾ ಸಾಮರ್ಥ್ಯದೊಂದಿಗೆ ಜೋಡಿಸುವ ಮೂಲಕ ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಿತ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಹೆಚ್ಚಿನ ಚರ್ಚೆಗಳನ್ನು ನಡೆಸಿ, ಸ್ಪಷ್ಟವಾದ ಸಹಕಾರದ ಅವಕಾಶಗಳನ್ನು ಗುರುತಿಸುವ ಕುರಿತು ಸಚಿವರು ಒತ್ತು ನೀಡಿದರು.

ಪೋಲಂಡ್ ಪ್ರಧಾನಮಂತ್ರಿಯವರ ಪ್ರಸ್ತಾವಿತ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ರಾಜ್ಯದ ತಂತ್ರಜ್ಞಾನ, ನವೋದ್ಯಮ ಮತ್ತು ಸಂಶೋಧನಾ ಕ್ಷೇತ್ರಗಳ ಸಾಮರ್ಥ್ಯವನ್ನು ಪರಿಚಯಿಸುವುದರ ಜೊತೆಗೆ, ಕರ್ನಾಟಕ–ಪೋಲಂಡ್ ನಡುವಿನ ದೀರ್ಘಕಾಲೀನ ಸಹಭಾಗಿತ್ವಕ್ಕೆ ಮತ್ತಷ್ಟು ಬಲ ನೀಡುವ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶ ಹೊಂದಲಾಗಿದೆ.

ಭಾರತ–ಪೋಲಂಡ್ ನಡುವಿನ ಸಂಬಂಧಗಳು 2024ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಯ ಹಂತಕ್ಕೆ ಏರಿಕೆಯಾಗಿದ್ದು, ಆರ್ಥಿಕ ಮತ್ತು ತಂತ್ರಜ್ಞಾನ ಸಹಕಾರವು ಎರಡೂ ದೇಶಗಳ ಸಂಬಂಧದ ಪ್ರಮುಖ ಕ್ಷೇತ್ರಗಳಾಗಿವೆ. ಈ ಸಂದರ್ಭದಲ್ಲಿ ಕರ್ನಾಟಕವು ತನ್ನ ಬಲಿಷ್ಠ ತಂತ್ರಜ್ಞಾನ, ನವೋದ್ಯಮ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯ ಮೂಲಕ ಪೋಲಂಡ್‌ನೊಂದಿಗೆ ಹೊಸ ಸಹಕಾರದ ಅವಕಾಶಗಳನ್ನು ರೂಪಿಸಿಕೊಳ್ಳಲು ಸಿದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


Share

You cannot copy content of this page