ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾತಿಯಾಗಿರುವ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 73 ರಲ್ಲಿ ಅಂದಾಜು 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನಿನಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಉಂಟಾಗಿದ್ದ ಒತ್ತುವರಿಯನ್ನು ತೆರವುಗೊಳಿಸಿ ಪಾಲಿಕೆಯ ಸುಪರ್ದಿಗೆ ಪಡೆಯಲಾಗಿದೆ ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿ ನಿರ್ಮಾಣಕ್ಕೆ ಜಾಗ ಮಂಜೂರು
ಸಾರಕ್ಕಿ ಗ್ರಾಮದ ಸರ್ವೇ ನಂಬರ್ 73ರಲ್ಲಿನ ಜಮೀನನ್ನು ಈ ಹಿಂದೆ ಸರ್ಕಾರವು ಕರ್ನಾಟಕ ಕೃಷಿ ಮಾರುಕಟ್ಟೆ ಇಲಾಖೆಗೆ (ಹಣ್ಣು ಮತ್ತು ತರಕಾರಿಗಳ ವಿಭಾಗ – ಎಪಿಎಂಸಿ) ನೀಡಿದ್ದು, ಮಂಜೂರಾತಿ ಉದ್ದೇಶಕ್ಕೆ ಇದುವರೆಗೂ ಬಳಕೆಯಾಗದ ಹಿನ್ನೆಲೆಯಲ್ಲಿ ಸರ್ಕಾರವು ಈ ಮಂಜೂರಾತಿಯನ್ನು ರದ್ದುಪಡಿಸಿ, ದಿನಾಂಕ 03-09-2026 ರಂದು ಈ ಜಮೀನನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಬೆಂಗಳೂರು ನಗರ ಪಾಲಿಕೆಯ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಮಂಜೂರು ಮಾಡಿರುತ್ತದೆ.
ಸ್ಥಳ ಪರಿಶೀಲನೆ ಹಾಗೂ ಒತ್ತುವರಿ ತೆರವು
ಸರ್ಕಾರದಿಂದ ಜಮೀನು ಮಂಜೂರಾತಿಯಾದ ಹಿನ್ನೆಲೆಯಲ್ಲಿ ಇಂದು ಪಾಲಿಕೆಯ ಆಯುಕ್ತರ ನಿರ್ದೇಶನದ ಮೇರೆಗೆ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಮಹಾಂತೇಶ್ ರವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ಪಾಲಿಕೆ ಜಾಗದಲ್ಲಿ ಉಂಟಾಗಿದ್ದ ಅನಧಿಕೃತ ಶೆಡ್ ಹಾಗೂ ಅಕ್ರಮ ಒತ್ತುವರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಮುಂದುವರೆದು ಇದೆ ಸರ್ವೇ ನಂಬರ್ ನ ಮತ್ತೊಂದು ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿಕೊಂಡಿದಂತಹ ವ್ಯಕ್ತಿಗಳಿಗೆ ಪಾಲಿಕೆಗೆ ಸೇರಿದ ಜಾಗವನ್ನು ತುರ್ತಾಗಿ ಖಾಲಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಕಾರ್ಯಾಚರಣೆ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿದ ಅಂದಾಜು 100 ಕೋಟಿ ರೂ. ಮೌಲ್ಯದ 3 ಎಕರೆ 13 ಗುಂಟೆ ಜಮೀನನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದ್ದು ಇನ್ನುಮುಂದೆ ಈ ಸ್ಥಳವನ್ನು ಒತ್ತುವರಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
