ಸಮಗ್ರ ಸುದ್ದಿ

ಮಂಗಳೂರು ಐಟಿ ಪಾರ್ಕ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನ;ಅಗತ್ಯಬಿದ್ದರೆ ಚರ್ಚಿಸಿ ಮಾರ್ಗಸೂಚಿ ಬದಲಾವಣೆ –  ಸಚಿವ ಪ್ರಿಯಾಂಕ್ ಖರ್ಗೆ

Share

ಬೆಳಗಾವಿ:ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಮಂಗಳೂರಿನಲ್ಲಿ ಐಟಿ ಪಾರ್ಕ್ ವಾಣಿಜ್ಯ ಕಛೇರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಡಿ.15 ರಂದು ಟೆಂಡರ್ ಬಿಡ್ ತರೆಯಲಾಗುತ್ತದೆ. ನಂತರ ಅಗತ್ಯಬಿದ್ದರೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಸರ್ಕಾರ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು, ಉಡುಪಿ ಹಾಗೂ ಮಣಿಪಾಲ್ ನಗರಗಳನ್ನು ಕೇಂದ್ರವಾಗಿಸಿಕೊಂಡು ಸ್ಥಳೀಯವಾಗಿ ಐಟಿ ಹಾಗೂ ಬಿಟಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಸರ್ಕಾರ ಮುಂದಡಿ ಇಟ್ಟಿದೆ.

ಈ ಹಿನ್ನಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಐಟಿ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು, ಕ್ರೆಡಾಯ್ (ಕರ್ನಾಟಕ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್) ಸೇರಿದಂತೆ ಎಲ್ಲಾ ಭಾಗಿದಾರರೊಂದಿಗೆ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರ ಅನುಸಾರ ವಾಣಿಜ್ಯ ಕಛೇರಿ ಟೆಕ್‍ ಪಾರ್ಕ್ ನಿರ್ಮಿಸುವ ಟೆಂಡರ್‍ ದಾರರಿಗೆ ವಿನ್ಯಾಸ ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆಗೆ 30 ವರ್ಷಗಳ ಅವಧಿಗೆ ಸರ್ಕಾರ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತದೆ. ಈ ಗುತ್ತಿಗೆ ಅವಧಿಯ ನಂತರ ಮುಂದಿನ 30 ವರ್ಷಗಳಿಗೆ ವಿಸ್ತರಿಸಲು ಅವಕಾಶವಿದೆ ಎಂದರು.

ಮಂಗಳೂರಿನ ಇತರೆ ಖಾಸಗಿ ಟೆಕ್ ಕಂಪನಿಗಳು ಸಹ ಕಚೇರಿಗಳನ್ನು ನಿರ್ಮಾಣ ಮಾಡುತ್ತಿವೆ. ಇಲ್ಲಿ ಟೆಕ್ ಕಂಪನಿಗಳಿಗೆ ಸರ್ಕಾರಿ ದರಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಬಾಡಿಗೆ ವಿಧಿಸುತ್ತಿವೆ ಎನ್ನುವ ಮಾಹಿತಿಯಿದೆ. ಆದರೆ ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್‍ಗಳಲ್ಲಿ ಜಾಗ ಪಡೆಯುವ ಕಂಪನಿಗಳಿಗೆ ಕೌಶಲ್ಯ ತರಬೇತಿ, ನೋಂದಣಿ ಹಾಗೂ ಟೆಕ್ ಸಮಾವೇಶಗಳಲ್ಲಿ ವೇದಿಕೆ ಕಲ್ಪಿಸುವ ಮೂಲಕ ಜಾಗತಿಕ ಮನ್ನಣೆ ದೊರಕಿಸಲು ಸರ್ಕಾರ ಸಹಾಯ ಮಾಡಲಿದೆ. ಆದ್ದರಿಂದ ಖಾಸಗಿ ಕಂಪನಿಗಳು ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್‍ನಲ್ಲಿ ಕಾರ್ಯಾರಂಭ ಮಾಡುವ ವಿಶ್ವಾಸವಿದೆ ಎಂದರು.

ಹಸಿರು ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೆನ್ಮಾರ್ಕ್ ದೇಶದ ಗಲ್ಫ್ ರಿಸರ್ಚ್ ಕಂಪನಿ ಮಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಮಂಗಳೂರು ಸಹ ಐಟಿ ಬಿಟಿ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಬೆಳೆಯಲಿದೆ. ಇದೇ ಮಾದರಿಯಲ್ಲಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರಗಿ ನಗರಗಳಲ್ಲಿಯೂ ಖಾಸಗಿ ಸಹಭಾಗಿತ್ವದಲ್ಲಿ ಐಟಿ ಬಿಟಿ ಟೆಕ್ ಪಾರ್ಕ್ ಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.


Share

You cannot copy content of this page