ಸಮಗ್ರ ಸುದ್ದಿ

₹2 ಕೋಟಿ ಅನುದಾನಲ್ಲಿ ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ

Share

ಸೊರಬ : ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಇಂದು ಸುಮಾರು ₹2 ಕೋಟಿ ಅನುದಾನದಲ್ಲಿ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಮತ್ತು ವಿವಿಧ ಕಾಮಗಾರಿಗಳಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರೂ ಆದ ಮಧು ಬಂಗಾರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು.

ತಾಳಗುಪ್ಪ ಹೋಬಳಿಯ ಶಿರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಪುರ ಗ್ರಾಮದ ಸಮುದಾಯ ಭವನದ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ ₹35 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಅದೇ ರೀತಿ ಶಿರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದೇವರಕೊಪ್ಪ ಗ್ರಾಮದ ಹೆದ್ದಾರಿ-69ರಿಂದ ಗುರಲಗುಂಜಿ ಮಾರ್ಗವಾಗಿ ನವುಲೆಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹35 ಲಕ್ಷ ವೆಚ್ಚದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಗುದ್ದಲಿಪೂಜೆ ನೆರವೇರಿಸಿದರು.

ಕಾನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡೇಮನೆ ಗ್ರಾಮದ ಮೇಲಿಕೇರಿ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಹಾಗೂ ಕೆಲುವೆ ಗ್ರಾಮದ ಗುಡ್ಡೆಕೇರಿ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈದೂರು ಪ್ರಾಥಮಿಕ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ ವೆಚ್ಚದಲ್ಲಿ ಸಚಿವ ಮಾಡು ಬಂಗಾರಪ್ಪ ಅವರು ಭೂಮಿಪೂಜೆ ನೆರವೇರಿಸಿದರು.

ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ

ಸುಂಕದೇವರಕೊಪ್ಪ ಗ್ರಾಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ನನ್ನ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಬಳಸುತ್ತಿದ್ದೇನೆ. ಇತ್ತೀಚೆಗೆ ಸುರಿದ ಮಳೆಯಿಂದ ಹಲವು ಕಡೆ ರಸ್ತೆಗಳು ಹಾಳಾಗಿವೆ. ತಾಳಗುಪ್ಪ ಭಾಗದ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ” ಎಂದು ಹೇಳಿದರು.

ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ₹4,500 ಕೋಟಿ

ತಮ್ಮ ಶಿಕ್ಷಣ ಇಲಾಖೆಯ ಕಾರ್ಯಗಳ ಕುರಿತು ಮಾತನಾಡಿದ ಸಚಿವರು, “ನಿಮ್ಮ ಒಂದು ಮತ ನನಗೆ 1 ಕೋಟಿ 14 ಲಕ್ಷ ಮಕ್ಕಳ ಸೇವೆ ಮಾಡುವ ಭಾಗ್ಯ ಕಲ್ಪಿಸಿದೆ. ರಾಜ್ಯದಲ್ಲಿ 44 ಸಾವಿರ ಸರ್ಕಾರಿ ಶಾಲೆಗಳಿವೆ. ಮುಂದಿನ ದಿನಗಳಲ್ಲಿ 2,500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 1,000 ಕೆಪಿಎಸ್ ಶಾಲೆಗಳು ನಿರ್ಮಾಣವಾಗಲಿವೆ” ಎಂದು ಹೇಳಿದರು.

“ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ₹4,500 ಕೋಟಿ ಅನುದಾನ ಮೀಸಲಿಡಲಾಗಿದೆ. ಕೆಪಿಎಸ್ ಶಾಲೆಗಳು ರಾಜ್ಯದ ಮಾದರಿ ಶಾಲೆಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ಅವರೂ ಕೆಪಿಎಸ್ ಶಾಲೆಗಳ ಪರಿಕಲ್ಪನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದರು.

ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ಹಂತದವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು. ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೆಪಿಎಸ್ ಶಾಲೆಗಳಲ್ಲಿ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಕೆಪಿಎಸ್ ಶಾಲೆಗಳಿಗೆ ಉಚಿತ ಶಾಲಾ ವಾಹನ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾರಿಗೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ನಾನು ಎಲ್ಲಿಗೆ ಹೋದರೂ ಸರ್ಕಾರಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯ ಸಮಸ್ಯೆ ಗಮನಕ್ಕೆ ಬರುತ್ತಿದೆ. ಇನ್ನು ಮುಂದೆ ಈ ಸಮಸ್ಯೆ ಇರಬಾರದು ಎಂಬ ಉದ್ದೇಶದಿಂದ ಮುಂದಿನ ವರ್ಷದಿಂದ ಕೆಪಿಎಸ್ ಶಾಲೆಗಳಿಗೆ ವಿಶೇಷ ಶಾಲಾ ವಾಹನಗಳ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲು ತೀರ್ಮಾನಿಸಿದ್ದೇವೆ” ಎಂದು ಘೋಷಿಸಿದರು.

31 ಸಾವಿರ ಶಿಕ್ಷಕರ ನೇಮಕಾತಿ

ಶಿಕ್ಷಕರ ನೇಮಕಾತಿ ಕುರಿತು ಮಾತನಾಡಿದ ಸಚಿವರು, “ನಾನು ಶಿಕ್ಷಣ ಸಚಿವನಾದ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿದ್ದೇನೆ. ಇದೀಗ 17,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನನ್ನ ಅವಧಿಯಲ್ಲಿ ಒಟ್ಟು 31 ಸಾವಿರ ಶಿಕ್ಷಕರ ನೇಮಕಾತಿ ಮಾಡಿದಂತಾಗಲಿದೆ” ಎಂದು ತಿಳಿಸಿದರು.

ಸಾಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಮನವಿ

ಇದೇ ವೇಳೆ ಸಾಗರ ತಾಲ್ಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಸ್ಥಳೀಯರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಚಿವರು, “ಸೋಮವಾರ ಸಾಗರದಲ್ಲಿ ಪ್ರಜಾಸೇವೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ನಿಮ್ಮ ಸಾಗರ ಶಾಸಕರೂ ಇರಲಿದ್ದಾರೆ. ನಿಮ್ಮ ಮನವಿಯನ್ನು ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.


Share

You cannot copy content of this page