ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದುಕಿನ ರಾಜಕಾರಣದ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಿ ಕೂಡಲೇ ಒಳ ಮೀಸಲಾತಿ ಆದೇಶವನ್ನು ಜಾರಿಗೆ ತರಬೇಕು. ಸಮಾಜದಲ್ಲಿ ಸಮಾನತೆ ಹಾಗೂ ಒಳ ಮೀಸಲಾತಿ ಜಾರಿಗೆ ಬರುವವರೆಗೂ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ 25 ವರ್ಷಗಳ ಆಡಳಿತ ಸೇವಾ ಸಂಕಲ್ಪ ಅಭಿಯಾನ ಆಯೋಜನಾ ಸಮಿತಿ, ಚಿತ್ರದುರ್ಗ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಮಾದಿಗ ಕಾರ್ಯಕರ್ತರ ಜಿಲ್ಲಾ ಸಮಾವೇಶ-2026 ಹಾಗೂ ಮಾದಿಗ ಮುನ್ನಡೆ -II ಒಳಮೀಸಲಾತಿ ಕಗ್ಗಂಟು ಬಿಡಿಸಿದ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶ್ರೀಮಂತಿಕೆ: ರಾಜ್ಯದ ಜನತೆ ಬಡತನ ಹಾಗೂ ಬರದ ಬೇಗೆಯಲ್ಲಿ ಸಿಲುಕಿಕೊಂಡಿದ್ದರೆ, ಕೆಲವೇ ಕೆಲವು ವ್ಯಕ್ತಿಗಳು ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದುವ ಮೂಲಕ ಶ್ರೀಮಂತ ಜೀವನ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಸಂಪತ್ತು ಕೆಲವೇ ಕೆಲವು ಕುಟುಂಬಗಳ ಖಜಾನೆಗೆ ಸೇರುತ್ತಿರುವುದು ಸರಿಯಲ್ಲ ಎಂದು ಹೇಳಿದರು.
35 ವರ್ಷಗಳ ಬೇಡಿಕೆ
ಸಮಾಜದ ವಂಚಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಿರಂತರವಾಗಿ ಬೇಡಿಕೆ ಇಡುತ್ತ ಬಂದಿವೆ. ಜನಸಂಖ್ಯೆಯ ಅನುಪಾತದಲ್ಲಿ ಪ್ರತಿಯೊಬ್ಬರಿಗೂ ಅವರ ಹಕ್ಕನ್ನು ನೀಡಬೇಕು ಹಾಗೂ ಸಾಂವಿಧಾನಿಕವಾಗಿ ನ್ಯಾಯ ದೊರಕಿಸಿಕೊಡಬೇಕು. ಈ ದೇಶದ ಮಾಲಿಕರು ನೀವು. ಈ ದೇಶವನ್ನು ಕಟ್ಟುವಂತ ಮಾಲಿಕರು ನೀವು. ಈ ದೇಶದ ಮೇಲೆ ಈ ದೇಶದ ಸಂಪತ್ತಿನ ಮೇಲೆ ಈ ದೇಶದ ಭವಿಷ್ಯದ ಮೇಲೆ ನಿಮಗೆ ಎಲ್ಲರಂತೆ ಸಂಪೂರ್ಣವಾದ ಹಕ್ಕಿದೆ. ನಿಮ್ಮ ಹಕ್ಕಿದು. ನೀವ್ಯಾರೂ ಶೋಷಿತರಲ್ಲ. ನೀವು ಸ್ವಾಭಿಮಾನಿಗಳು ನಾವು ಸ್ವಾಭಿಮಾನಿಗಳು ನಮಗೂ ಹಕ್ಕಿದೆ ಒಂದು ರೋಟಿಯಲ್ಲಿ ನಾಲ್ಕು ಮಕ್ಕಳಿದ್ದರೆ ನಾಲ್ಕು ಪಾಲು ಇದ್ದರೆ, ಅದರಲ್ಲಿ ನಮಗೂ ಕೂಡ ಪಾಲಿದೆ ನಮ್ಮ ಪಾಲು ಇಟ್ಟುಕೊಂಡು ಕೊಡದೆ ನೀವೇ ತಿಂದುಕೊಂಡು ಬಂದಿದ್ದೀರಿ ಜಾಗ ಖಾಲಿ ಮಾಡಿ ನಮ್ಮ ಪಾಲಿನ ರೋಟಿಯನ್ನು ನಾವೇ ಇಟ್ಟುಕೊಳ್ಳುತ್ತೇವೆ ಮತ್ತೊಬ್ಬರಿಗೆ ಕೊಡುವಂತಹ ಅವಶ್ಯಕತೆ ಇಲ್ಲ ಎಂದರು.
ಒಳ ಮೀಸಲಾತಿ ಜಾರಿ ಮಾಡುವುದರಲ್ಲಿ ನಾನು ನಿಮಿತ್ತ ಮಾತ್ರ. ಇದರ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ಮೊದಲನೇ ಶಕ್ತಿ ನೀವು. ನಿಮ್ಮನ್ನ ಬಹಳ ಹತ್ತಿರದಿಂದ ನಾವೆಲ್ಲರೂ ನೋಡಿದ್ದೇವೆ. ನಿಮ್ಮ ಪರಿಸ್ಥಿತಿಯನ್ನು ನೋಡಿದ್ದೇವೆ. ನಿಮ್ಮ ಬಡತನವನ್ನು ನೋಡಿದ್ದೇವೆ ನಿಮ್ಮ ನೋವನ್ನು ನೋಡಿದ್ದೇವೆ. ನಿಮಗಿಂತ ನಿಮ್ಮ ತಾಯಂದಿರ ಕಣ್ಣೀರನ್ನು ನೋಡಿದ್ದೇವೆ. ಆ ತಾಯಿ ಬೆಳಗಿನಿಂದ ಸಂಜೆ ವರೆಗೂ ದುಡಿದು ಹೊಟ್ಟಿ ಹೊರೆದು ನಿಮಗೆ ಕೊಡಬೇಕಾದಾಗ ಕಣ್ಣೀರು ಕಪಾಲಕ್ಕೆ ಬರುತ್ತದೆ. ದುಃಖವನ್ನು ಹೇಳುವಂತಹ ಸಮಯ ಇಲ್ಲದೆ ಇರುವಂತಹ ದುಡಿಯುವ ತಾಯಿ ಈ ಸಮುದಾಯಕ್ಕೆ ಸೇರಿದ್ದು. ಅತ್ಯಂತ ಕಠಿಣ ಪರಿಸ್ಥಿತಿ ಇದೆ ನಾನು ನೋಡಿದ್ದೇನೆ. ಅಂತಹ ತಾಯಿಗೆ ಏನಾದರೂ ಆಸೆ ಸಿಗಬೇಕಾದರೆ ಗುರುಗಳು ವಿದ್ಯಾವಂತರಾಗಿ ಒಳ್ಳೆ ಕೆಲಸದಲ್ಲಿ ಆ ತಾಯಿಯನ್ನು ಹುಡುಕುವಂತಹ ದಿನಗಳು ಬಂದರೆ 34 ವರ್ಷದ ಅವಳ ತ್ಯಾಗಕ್ಕೆ ಒಂದು ಫಲ ಸಿಗುತ್ತದೆ ಎಂದರು.
ಸ್ವಾಮೀಜಿ ಪಾತ್ರ
ಮೀಸಲಾತಿ ಹೆಚ್ಚು ಮಾಡುವ ಸಲುವಾಗಿ ಒಳ ಮೀಸಲಾತಿ ಸಲುವಾಗಿ ಚಿತ್ರದುರ್ಗ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ನಾರಾಯಣ ಸ್ವಾಮಿ ಅವರು ಇಲ್ಲಿ ಸಂಚಾಲಕ ಸದಸ್ಯರಾದರು. ಅದಾದಮೇಲೆ ಎಲ್ಲಾ ಬೆಳವಣಿಗೆ ಪ್ರಾರಂಭವಾಯಿತು. ಕೇವಲ ಮಾದಿಗರ ಸಮಾಜ ಅಲ್ಲ ಎಲ್ಲಾ ಶೋಷಿತ ಸಮಾಜದ ಗುರುಗಳನ್ನೆಲ್ಲ ಭೇಟಿಯಾಗಿ ಏನು ಮಾಡಬೇಕು ಅಂತ ತಿಳ್ಕೊಂಡು ಎಲ್ಲ ಗುರುಗಳ ಬಳಿ ಹೋಗಿ ಮಾರ್ಗದರ್ಶನವನ್ನು ಕೊಟ್ಟ ಸಂದರ್ಭದಲ್ಲಿ ಅದರ ಒಟ್ಟು ಪರಿಣಾಮ ಕೇಂದ್ರ ಸರ್ಕಾರದ ಮೇಲೆ ಆ ಕೇಂದ್ರ ಸರ್ಕಾರದ ಒಟ್ಟು ನಿರ್ಣಯವು ಪ್ರಧಾನ ಮಂತ್ರಿಗಳ ಮುಖಾಂತರ ಆಂಧ್ರದಲ್ಲಿ ಮಾದಿಗರ ಕೃಷ್ಣ ಅವರ ನೇತೃತ್ವದಲ್ಲಿ ನಡೆದಂತಹ ಸಮಾವೇಶದಲ್ಲಿ ಅಭಿವ್ಯಕ್ತಿಯಾಗಿ ಮುಂದೆ ಅದು ಸುಪ್ರೀಂಕೋರ್ಟ್ನಲ್ಲಿ ರಾಜ್ಯಗಳಿಗೆ ಸಂಪೂರ್ಣವಾಗಿ ಒಳ ಮೀಸಲಾತಿ ನೀಡುವ ಅಧಿಕಾರ ಇದೆ ಅಂತ ಆದೇಶ ಸುಪ್ರೀಂಕೋರ್ಟ್ ನಲ್ಲಿ ಬಂತು.
ಅದಕ್ಕಿಂತ ಪೂರ್ವದಲ್ಲಿ ನಾನು ಒಳ ಮೀಸಲಾತಿ ಜಾರಿ ಮಾಡಿದೆ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ನಿಮ್ಮ ಬದುಕು ಹಸನಾಗಬೇಕು ಅಂದ್ರೆ ನಿಮ್ಮ ಹಕ್ಕನ್ನು ನೀವು ಪಡೆದುಕೊಳ್ಳಬೇಕು ಅದರ ಅರ್ಥ ಇನ್ನೊಬ್ಬರ ಹಕ್ಕನ್ನು ಕಿತ್ತುಕೊಬೇಕು ಅಂತ ಅಲ್ಲ. ನಾವು ಮಾಡಿರುವಂತಹ ಒಳ ಮೀಸಲಾತಿ ಎಲ್ಲ ವರ್ಗದ 101 ಜಾತಿಗಳಿಗೆ ಸಮಾನವಾಗಿತ್ತು ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಿರಲಿಲ್ಲ. ಒಂದು ಪಿಟಿಷನ್ ಸುಪ್ರೀಂಕೋರ್ಟ್ ನಲ್ಲಿ ಇತ್ತು ಅದಕ್ಕೆ ಕರ್ನಾಟಕ ಹೈಕೋರ್ಟ್ ಗೆ ಕೊಡಬೇಕಾಗಿತ್ತು ಬಂಜಾರಾ ಮತ್ತು ಬೋವಿ ಸಮಾಜವನ್ನ ಎಸ್.ಸಿ. ಪಟ್ಟಿಯಿಂದ ಬಿಡಬೇಕು ಅಂತ ಇತ್ತು. ನಾವು ಇವು ಕೂಡ ಮೊದಲಿಂದ ಇದ್ದಂತಹ ಸಮುದಾಯಗಳು. ಆದ್ದರಿಂದ ಇವುಗಳನ್ನು ಎಸ್.ಸಿ. ಲಿಸ್ಟ್ ನಲ್ಲಿ ಸೂರ್ಯ ಚಂದ್ರ ಇರುವವರೆಗೂ ಇರಬೇಕು ಅಂತ ಹೇಳಿ ನಾವು ಬರೆದು ಕೊಟ್ಟೆವು. ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಲಿಲ್ಲ. ಎಲ್ಲರಿಗೂ ನ್ಯಾಯ ಸಮ್ಮತವಾಗಿ ಕೊಟ್ಟಿದ್ದೇವೆ. ಅದಕ್ಕಾಗಿ ಒಳ ಮೀಸಲಾತಿ ಬೇಕು. ಕೆಲವರು ರಿಸರ್ವೇಷನ್ ಯಾಕೆ ಬೇಕು ಅಂತಾರೆ. ಯಾರು ರಿಸರ್ವೇಷನ್ ಯಾಕೆ ಬೇಕು ಅಂತ ಕೇಳ್ತಾರೆ. ನಾನು ಅವರಿಗೆ ಇಷ್ಟೇ ಹೇಳ್ತೀನಿ. ನೀವು ನಿಮ್ಮ ಆಸ್ತಿ ಎಲ್ಲವನ್ನ ಬಿಟ್ಟು ನಮ್ಮ ದಲಿತ ಕೇರಿಗೆ ಬಂದು ಜೀವನ ಮಾಡ್ರಿ. ಆಮೇಲೆ ಹೇಳ್ರಿ ರಿಸರ್ವೇಷನ್ ಬೇಕು ಬೇಡ. ಅಲ್ಲಿ ಇರುವಂತಹ ಪರಿಸ್ಥಿತಿ ಏನಿದೆ ಅನ್ನುವಂತ ಮನಸ್ಥಿತಿ ಏನಿದೆ ಅದನ್ನ ನೀವು ಅರ್ಥ ಮಾಡ್ಕೋಬೇಕು.
ಕೀಳರಿಮೆಯ ಪ್ರಾರಂಭ ಆಗುತ್ತದೆ ಹುಟ್ಟಿದಾಗಲೇ. ಆ ಕೀಳರಿಮೆಗೆ ಹೋಗೋಕೆ ಅವಕಾಶಗಳೇ ಕೊಡ್ತಾ ಇಲ್ಲ.
ಒಂದು ಮಾನವೀಯತೆಯ ದೃಷ್ಟಿಯಿಂದ ಈ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಇಂಟರ್ನಲ್ ರಿಸರ್ವೇಷನ್ ಅಂತ ಯಾರು ಕೊಟ್ಟರು ಅವರನ್ನು ಮರೆತು ಯಾರು ಅನ್ಯಾಯ ಮಾಡಿದ್ದಾರೆ ಅವರಿಗೆ ಸನ್ಮಾನವನ್ನು ಮಾಡುತ್ತೀರಾ, ಆ ಸನ್ಮಾನ ಮಾಡಿದವರಿಗೆ ಇವತ್ತು ಆತ್ಮಸಾಕ್ಷಿ ಏನಿದೆ ಆತ್ಮಸಾಕ್ಷಿ ಇರುವವರಿಗೆ ಇವತ್ತು ಏನು ಹೇಳುತ್ತಾರೆ ಮೀಸಲಾತಿಯನ್ನು %15 ರಿಂದ 17% ಕ್ಕೆ ಹೆಚ್ಚಿಗೆ ಮಾಡೋಕೆ ಆದೇಶ ಮಾಡಿದ್ದೇವೆ.
ಮುಖ್ಯಮಂತ್ರಿ ಗಳು ಬದುಕಿನ ರಾಜಕಾರಣವನ್ನ ಮಾಡುತ್ತೇವೆ ಅಂತ ಹೇಳುತ್ತಾರೆ. ನೀವೇನಾದರೂ ಸಾರ್ಥಕತೆಯಿಂದ ತೋರಿಸಬೇಕಾಗಿದ್ದರೆ ಈ ಒಳ ಮೀಸಲಾತಿಯನ್ನು ಸರಿಪಡಿಸಿ ಆದೇಶವನ್ನ ಮಾಡಿ.
ಅದರಲ್ಲೂ ಬದುಕಿನ ರಾಜಕಾರಣವನ್ನ ಮಾಡೋಣ. ಇಲ್ಲಿಲ್ಲದಿದ್ದರೆ ನೀವು ಭಾವನೆ ಜೊತೆಗೆ ರಾಜಕಾರಣ ಮಾಡ್ತಾ ಇದ್ದೀರಿ, ಹೆಸರು ಮಾತ್ರ ಬದುಕಿನ ಬಗ್ಗೆ ಹೇಳುತ್ತಿದ್ದೀರಿ. ರಾಜ್ಯದಲ್ಲಿ ಮತ್ತೊಮ್ಮೆ ಜನ ರಾಜ್ಯ ಸಶಕ್ತ ಆಗುವಂತಹ ಹೃದಯ ಶ್ರೀಮಂತಿಕೆಯ ರಾಜಕಾರಣ ಆಗಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸೇವೆ ಮುಂದುವರಿಬೇಕು ಅಂದರೆ ರಾಜ್ಯದಲ್ಲಿಯೂ ಕೂಡ ಅವರ ನೇತೃತ್ವದಲ್ಲಿ ಸರ್ಕಾರ ಖಂಡಿತವಾಗಿ ಬರುತ್ತದೆ ಎಂದು ಹೇಳಿದರು.
ಮುಂದಿನ ಹೋರಾಟದ ಎಚ್ಚರಿಕೆ: ಕರ್ನಾಟಕದಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಒಳ ಮೀಸಲಾತಿ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೇವಲ ರಾಜಕೀಯ ಭಾಷಣಗಳಲ್ಲದೆ, ಬದುಕಿನ ರಾಜಕಾರಣದ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಿ ಕೂಡಲೇ ಒಳ ಮೀಸಲಾತಿ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಡಾ. ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವರಾದ ಎ ನಾರಾಯಣಸ್ವಾಮಿ, ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
