ಸಮಗ್ರ ಸುದ್ದಿ

ಜಾಗತಿಕ ತಂತ್ರಜ್ಞಾನ ಸಹಭಾಗಿತ್ವಕ್ಕೆ ಕರ್ನಾಟಕದಹೊಸ ಹೆಜ್ಜೆ: ನವೆಂಬರ್‌ 17ರಿಂದ 19ರವರೆಗೆ ಬೆಂಗಳೂರು ಟೆಕ್‌ ಸಮಿಟ್‌ -ಸಚಿವ ಪ್ರಿಯಾಂಕ್‌ ಖರ್ಗೆ

Share

ಬೆಂಗಳೂರು: ʼಜಾಗತಿಕ ನಾವೀನ್ಯತಾ ಒಕ್ಕೂಟದ (ಜಿಐಎ 2.0) ಎರಡನೆ ಹಂತದ ಉಪಕ್ರಮಗಳ ಮೂಲಕ ಕರ್ನಾಟಕವು ಹೂಡಿಕೆ ಆಕರ್ಷಿಸುವ ರಾಜ್ಯವಷ್ಟೇ ಅಲ್ಲದೆ, ಜಾಗತಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆ ಸಹಭಾಗಿತ್ವ ಸೃಷ್ಟಿಸುವ ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆʼ ಎಂದು ಗೃಹ, ಐಟಿ ಮತ್ತು ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿದ್ಯುನ್ಮಾನ, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ತನ್ನ ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ) ಉಪಕ್ರಮದಡಿ, ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಪಾಲುದಾರ ದೇಶಗಳು ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ನಿಯೋಗಗಳ ಪ್ರತಿನಿಧಿಗಳಿಗಾಗಿ ಇಂದು ಇಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ʼಕರ್ನಾಟಕವು ಬಂಡವಾಳ ಹೂಡಿಕೆಗೆ ಸೂಕ್ತ ತಾಣವಾಗಿರುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಅಭಿವೃದ್ಧಿ, ನವೋದ್ಯಮ ಮತ್ತು ದೀರ್ಘಕಾಲೀನ ಸಹಭಾಗಿತ್ವಕ್ಕೆ ಪ್ರಮುಖ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ. 40ಕ್ಕೂ ಹೆಚ್ಚು ದೇಶಗಳ ಜೊತೆಗೆ ಅಧಿಕೃತ ಪಾಲುದಾರಿಕೆ ಹೊಂದಿರುವ ಜಾಗತಿಕ ನಾವೀನ್ಯತಾ ಒಕ್ಕೂಟವು ಈಗ ರಾಜತಾಂತ್ರಿಕ ವೇದಿಕೆ ಮೀರಿ, ಜಾಗತಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳನ್ನು ಪರಸ್ಪರ ಸಂಪರ್ಕಿಸುವ ಪ್ರಮುಖ ವೇದಿಕೆಯಾಗಿದೆʼ ಎಂದರು.

ʼಕರ್ನಾಟಕವು ಬೆಂಗಳೂರಿನ ಸಾಂಪ್ರದಾಯಿಕ ತಂತ್ರಜ್ಞಾನ ಸಾಮರ್ಥ್ಯವನ್ನು ಮೀರಿ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌, ಕ್ವಾಂಟಂ ತಂತ್ರಜ್ಞಾನ, ಬಯೋಟೆಕ್‌, ಹವಾಮಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಭವಿಷ್ಯದ ತಲೆಮಾರಿನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ. ಜಾಗತಿಕ ಪಾಲುದಾರಿಕೆ ಎಂದರೆ ಕೇವಲ ಹೂಡಿಕೆ ಅಥವಾ ಒಪ್ಪಂದವಲ್ಲ. ಪರಸ್ಪರ ವ್ಯವಸ್ಥೆಗಳ ಜೊತೆಗೆ ಸಂಪರ್ಕ ಬೆಳೆಸಿ, ಜ್ಞಾನ, ತಂತ್ರಜ್ಞಾನ, ಪ್ರತಿಭೆ ಮತ್ತು ಹೊಸ ಅವಕಾಶಗಳನ್ನು ಹಂಚಿಕೊಳ್ಳುವ ದೀರ್ಘಕಾಲಿಕ ಸಹಭಾಗಿತ್ವ” ಎಂಬುದು ʼಜಿಐಎʼ 2.0ರ ಪ್ರಮುಖ ಆಶಯವಾಗಿದೆʼ ಎಂದರು.

ʼಸದ್ಯಕ್ಕೆ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕತೆಯ ಸ್ವರೂಪ ಬದಲಾಗಿದ್ದು, ಯಾವುದೇ ರಾಜ್ಯ, ದೇಶ ಹಾಗೂ ನಾವೀನ್ಯತೆಯು ಏಕಾಂಗಿಯಾಗಿ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ, ಕ್ವಾಂಟಂ ತಂತ್ರಜ್ಞಾನಕ್ಕೆ ಗಡಿಯ ಮಿತಿಗಳಿಲ್ಲ. ಸೆಮಿಕಂಡಕ್ಟರ್‌, ಜೈವಿಕ, ಹವಾಮಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳನ್ನು ವಿಶ್ವವಿದ್ಯಾಲಯ, ನವೋದ್ಯಮ, ಸಂಶೋಧಕರು, ಹೂಡಿಕೆದಾರರು, ಕಾರ್ಪೊರೇಟ್‌ಗಳು ಮತ್ತು ಸರ್ಕಾರಗಳ ಜಾಗತಿಕ ಸಂಪರ್ಕ ಜಾಲದ ಮೂಲಕ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಜಾಗತಿಕ ನಾವೀನ್ಯತಾ ಒಕ್ಕೂಟದ ಎರಡನೆ ಹಂತವು ಗಮನಾರ್ಹ ಕೊಡುಗೆ ನೀಡಲಿದೆʼಎಂದರು.

ಎರಡು ಹೊಸ ಉಪಕ್ರಮಗಳು

ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ (ಬಿಟಿಎಸ್‌ 2026) ಜಾಗತಿಕ ಪಾಲುದಾರಿಕೆ ಮತ್ತು ಭಾಗವಹಿಸುವಿಕೆ ಉತ್ತೇಜಿಸಲು ಮತ್ತು ಸಮಾವೇಶ ಯಶಸ್ವಿಗೊಳಿಸಲು ರಾಜ್ಯ ಸರ್ಕಾರವು, ʼಜಿಐಎ ಸಹಭಾಗಿತ್ವ ಚೌಕಟ್ಟುʼ ಹಾಗೂ ಜಾಗತಿಕ ನಾವೀನ್ಯತೆ ಮತ್ತು ಬೆಳವಣಿಗೆ ಮೈತ್ರಿಕೂಟ (ಜಿಐಜಿಎ) ಅಭಿವೃದ್ಧಿಪಡಿಸುವ ಎರಡು ಹೊಸ ಉಪಕ್ರಮಗಳನ್ನು ಪ್ರಕಟಿಸಿದೆ. ಈ ಉಪಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಗಳನ್ನು ಹಂಚಿಕೊಳ್ಳಲಾಯಿತು.

ಪಾಲುದಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಪಾಲುದಾರ ದೇಶಗಳಿಗಾಗಿ ಹೊಸ ʼಜಿಐಎ ಸಹಭಾಗಿತ್ವ ಚೌಕಟ್ಟುʼ ಪರಿಚಯಿಸುತ್ತಿದೆ. ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚು ವ್ಯವಸ್ಥಿತ, ಪರಸ್ಪರ ಸಹಭಾಗಿತ್ವದ ಮತ್ತು ಫಲಿತಾಂಶ ಆಧಾರಿತವಾಗಿಸುವುದು ಇದರ ಉದ್ದೇಶವಾಗಿದೆ.

ಇದರ ಮುಂದಿನ ಹಂತದ ಭಾಗವಾಗಿ ರಾಜ್ಯ ಸರ್ಕಾರವು ಜಾಗತಿಕ ನಾವೀನ್ಯತೆ ಮತ್ತು ಬೆಳವಣಿಗೆ ಮೈತ್ರಿಕೂಟವನ್ನೂ (ಜಿಐಜಿಎ) ಅಭಿವೃದ್ಧಿಪಡಿಸುತ್ತಿದೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ನವೋದ್ಯಮ ಸಹಭಾಗಿತ್ವಕ್ಕೆ ಮೀಸಲಾದ ಶಾಶ್ವತ ಭೌತಿಕ ಮೂಲಸೌಕರ್ಯವಾಗಿ ಈ ಒಕ್ಕೂಟವು ರೂಪುಗೊಳ್ಳಲಿದೆ. ಪಾಲುದಾರ ದೇಶಗಳ ನವೋದ್ಯಮಗಳು, ನಾವೀನ್ಯತಾ ಸಂಸ್ಥೆಗಳು, ನಿಯೋಗಗಳು ಮತ್ತು ವಿವಿಧ ಸಂಸ್ಥೆಗಳಿಗೆ ಕಚೇರಿ ಸ್ಥಳ, ಸಭೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಸೌಲಭ್ಯಗಳನ್ನು ʼಜಿಐಜಿಎʼ ಒದಗಿಸಲಿದೆ.

ಸಭೆಯಲ್ಲಿ ವಿದ್ಯುನ್ಮಾನ, ಐಟಿ, ಬಿಟಿ ಮತ್ತು ಎಸ್‌ ಆ್ಯಂಡ್‌ ಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್, ಕೆಐಟಿಎಸ್‌ ಮತ್ತು ಕಿಯೊನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌, ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಇ.ವಿ. ರಮಣ ರೆಡ್ಡಿ, ಹಾಗೂ ಬಿಟಿಎಸ್‌ 2026ರ ಕಾರ್ಯಕ್ರಮ ಸಂಯೋಜಕ ಜಗದೀಶ್‌ ಪಾಟಣ್ಕರ್‌ ಅವರು ಉಪಸ್ಥಿತರಿದ್ದರು.


Share

You cannot copy content of this page