ಬೆಂಗಳೂರು: ಕರ್ನಾಟಕ ಸರ್ಕಾರದ ಡಿಜಿಟಲ್ ಆಡಳಿತ ಮತ್ತು ನಾಗರಿಕ ಸೇವೆಗಳನ್ನು ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆಯಲ್ಲೇ ತಲುಪಿಸುವ ನಿಟ್ಟಿನಲ್ಲಿ ‘ಭಾಷಿಣಿ’ (Bhashini) ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆ ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ‘ಭಾಷಿಣಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಭಾರತದಂತಹ ವೈವಿಧ್ಯಮಯ ದೇಶದಲ್ಲಿ 22ಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಆಧಾರಿತ ಮತ್ತು ಭಾಷಾಂತರ ತಂತ್ರಜ್ಞಾನಗಳನ್ನು ತಂದಿರುವ ‘ಭಾಷಿಣಿ’ ತಂಡದ ಸಾಧನೆಯನ್ನು ಶ್ಲಾಘಿಸಿದರು.
ಸ್ಥಳೀಯ ಭಾಷೆ ಮತ್ತು ಉಪಭಾಷೆಗಳ ಸವಾಲು ಪರಿಹಾರ:
ಕರ್ನಾಟಕವು “ಒಂದು ರಾಜ್ಯ, ಹಲವು ಜಗತ್ತು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ 150 ಕಿಲೋಮೀಟರ್‌ಗೆ ಭಾಷಾ ವೈವಿಧ್ಯತೆ, ಉಪಭಾಷೆಗಳು ಮತ್ತು ಸಂಸ್ಕೃತಿ ಬದಲಾಗುತ್ತದೆ. ಕಲ್ಯಾಣ ಕರ್ನಾಟಕ, ಕರಾವಳಿ, ಮಲೆನಾಡು, ಮೈಸೂರು ಹಾಗೂ ಬಯಲು ಸೀಮೆ ಭಾಗಗಳಲ್ಲಿ ಕನ್ನಡದ ಜೊತೆಗೆ ತಮಿಳು, ತೆಲುಗು, ಮರಾಠಿ, ಉರ್ದು, ತುಳು, ಬ್ಯಾರಿ ಮುಂತಾದ ಭಾಷೆಗಳ ಪ್ರಭಾವವಿದೆ. ಈ ಎಲ್ಲಾ ಭಾಗಗಳ ಜನರಿಗೆ ಅವರದ್ದೇ ಭಾಷೆ-ಉಪಭಾಷೆಯಲ್ಲಿ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
‘ಪ್ರಜಾ ಸೇವೆ’ ಮತ್ತು ‘ಇ-ಆಡಳಿತ’ದಲ್ಲಿ AI ಬಳಕೆಗೆ ಸೂಚನೆ:
ಇಂದಿನ ದಿನಗಳಲ್ಲಿ ಸಾರ್ವಜನಿಕರು ವೆಬ್ ಫಾರ್ಮ್‌ಗಳನ್ನು ಭರ್ತಿ ಮಾಡುವುದಕ್ಕಿಂತ ಧ್ವನಿ (Voice), ವಾಟ್ಸಾಪ್ (WhatsApp), ಚಾಟ್‌ಬಾಟ್ ಮುಂತಾದ ಸರಳ ಮಾಧ್ಯಮಗಳನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ‘ಪ್ರಜಾ ಸೇವೆ’ ಮತ್ತು ‘ಇ-ಆಡಳಿತ’ ವಿಭಾಗಗಳ ಮೂಲಕ ಭಾಷಿಣಿ AI ತಂತ್ರಜ್ಞಾನ ಬಳಸಿ ಇನ್ನಷ್ಟು ಸರಳಗೊಳಿಸಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ನವೋದ್ಯಮಗಳಿಗೆ ಪ್ರೋತ್ಸಾಹ – ‘ಗವರ್ನ್‌ಮೆಂಟ್ ಫಸ್ಟ್ ಪಾಲಿಸಿ’:
ರಾಜ್ಯದಲ್ಲಿ ಈಗಾಗಲೇ 18,000ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿದ್ದು, 1,500ಕ್ಕೂ ಹೆಚ್ಚು ನವೋದ್ಯಮಗಳಿಗೆ ಸರ್ಕಾರ ಧನಸಹಾಯ ನೀಡಿದೆ. ಇತ್ತೀಚೆಗೆ ಜಾರಿಗೆ ತರಲಾದ ‘ಗವರ್ನ್‌ಮೆಂಟ್ ಫಸ್ಟ್ ಪಾಲಿಸಿ’ (Government First Policy) ಮೂಲಕ ನವೋದ್ಯಮಿಗಳಿಗೆ ಸರ್ಕಾರವೇ ಮೊದಲ ಗ್ರಾಹಕನಾಗಿ ಬೆಂಬಲ ನೀಡಲಿದೆ. ಅಲ್ಲದೆ, ಡೀಪ್ ಟೆಕ್ ಹಾಗೂ AI ನಾವೀನ್ಯತೆಗಳಿಗೆ ಒಂದು ಕೋಟಿ ರೂ.ಗಳವರೆಗೆ ಅನುದಾನ ಒದಗಿಸಲಾಗುತ್ತಿದೆ ಎಂದೂ ಈ ಸಂದರ್ಭದಲ್ಲಿ ಸಚಿವರು ಹೇಳಿದರು.
ಬೆಂಗಳೂರು ಟೆಕ್ ಸಮಿಟ್‌ಗೆ ಆಹ್ವಾನ:
ನವೆಂಬರ್ 17ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ (Bangalore Tech Summit) ‘ಭಾಷಿಣಿ’ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ (G2C) ಇದನ್ನು ವಿಸ್ತರಿಸಲು ಭಾಷಿಣಿ ತಂಡಕ್ಕೆ ಸಚಿವರು ಮುಕ್ತ ಆಹ್ವಾನ ನೀಡಿದರು.
ಪ್ರಜಾಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಪ್ರಾಸ್ತಾವಿಕ ಭಾಷಣ ಮಾಡಿದರು.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ನಾಗ್ ʼಭಾಷಿಣಿʼ ಬಗ್ಗೆ ವಿವರಗಳನ್ನು ನೀಡಿದರು. ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ನಿರ್ದೇಶಕ ಭೋಯರ್ ಹರ್ಷಲ್ ನಾರಾಯಣರಾವ್ ಹಾಗೂ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.
