ಸಮಗ್ರ ಸುದ್ದಿ

ಕಲೆ ಮನರಂಜನೆಯಲ್ಲ; ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಸಚಿವ ಶಿವರಾಜ್ ತಂಗಡಗಿ

Share

ಮೈಸೂರು: ಕಲೆ ಎನ್ನುವುದು ಕೇವಲ ಮನರಂಜನೆಯ ಸಾಧನವಲ್ಲ. ಅದು ನಮ್ಮ ಭಾವನೆಗಳ ಅಭಿವ್ಯಕ್ತಿ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ಮತ್ತು ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಬಲ ಮಾಧ್ಯಮ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅಭಿಪ್ರಾಯಪಟ್ಟರು.

ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಚಿತ್ರ ಸಾವಿರ ಮಾತುಗಳನ್ನು ಹೇಳಬಲ್ಲದು. ಒಂದು ಶಿಲ್ಪ ನಮ್ಮ ಇತಿಹಾಸವನ್ನು ಕಣ್ಣಮುಂದೆ ತರಬಲ್ಲದು. ಒಬ್ಬ ಕರಕುಶಲ ಕಲಾವಿದ ತನ್ನ ಕೈಚಳಕದಿಂದ ಸಾಮಾನ್ಯ ವಸ್ತುವೊಂದನ್ನು ಸುಂದರ ಕಲಾಕೃತಿಯನ್ನಾಗಿ ರೂಪಿಸಬಲ್ಲನು. ಇದೇ ಕಲೆಯ ಶಕ್ತಿ. ಕಲೆ ಮತ್ತು ಸಂಸ್ಕೃತಿ ನಮ್ಮ ಹೆಮ್ಮೆ.

ನಮ್ಮ ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಮತ್ತು ಕರಕುಶಲ ಪರಂಪರೆಯಲ್ಲಿ ಶ್ರೀಮಂತವಾದ ನಾಡು. ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಹಂಪಿಯ ಶಿಲ್ಪಕಲೆಗಳು ನಮ್ಮ ಪೂರ್ವಜರ ಸೃಜನಶೀಲತೆಗೆ ಸಾಕ್ಷಿಯಾಗಿವೆ. ಮೈಸೂರು ಚಿತ್ರಕಲೆ, ಚನ್ನಪಟ್ಟಣದ ಗೊಂಬೆಗಳು, ಬೀದರ್‌ನ ಬಿದ್ರಿ ಕಲೆ, ಕಿನ್ನಾಳದ ಕಲಾಕೃತಿಗಳು ಸೇರಿದಂತೆ ನಮ್ಮ ನಾಡಿನ ವಿವಿಧ ಭಾಗಗಳಲ್ಲಿರುವ ವಿಶಿಷ್ಟ ಕಲೆಗಳು ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಕೇವಲ ಕಲಾಕೃತಿಗಳಲ್ಲ;

ಈ ಕಲೆಗಳು ಕೇವಲ ಕಲಾಕೃತಿಗಳಲ್ಲ; ಅವುಗಳ ಹಿಂದೆ ತಲೆಮಾರುಗಳಿಂದ ಹರಿದುಬಂದ ಜ್ಞಾನ, ಅನುಭವ, ಪರಿಶ್ರಮ ಮತ್ತು ಬದುಕಿನ ಪರಂಪರೆಯಿದೆ. ಒಬ್ಬ ಕಲಾವಿದ ರೂಪಿಸುವ ಪ್ರತಿಯೊಂದು ಕಲಾಕೃತಿಯ ಹಿಂದೆ ಅಪಾರ ತಾಳ್ಮೆ, ಶ್ರದ್ಧೆ ಮತ್ತು ಸೃಜನಶೀಲತೆ ಅಡಗಿರುತ್ತದೆ. ಆದ್ದರಿಂದ ಕಲೆಯನ್ನು ಉಳಿಸುವುದು ಎಂದರೆ ಕೇವಲ ಒಂದು ಕಲಾಪ್ರಕಾರವನ್ನು ಉಳಿಸುವುದಲ್ಲ; ನಮ್ಮ ನಾಡಿನ ಪರಂಪರೆ, ಅಸ್ಮಿತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿದಂತೆ. ನಮ್ಮ ಕಲೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ; ನಮ್ಮ ಸಂಸ್ಕೃತಿ ಉಳಿದರೆ ನಮ್ಮ ಅಸ್ಮಿತೆ ಮುಂದಿನ ಪೀಳಿಗೆಗೂ ತಲುಪುತ್ತದೆ ಎಂದರು.

ಶೀಘ್ರ ಹುದ್ದೆ ಭರ್ತಿ:

ಕಾವಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಮೀಸಲಾತಿ ವಿಳಂಬದಿಂದಾಗಿ ಹುದ್ದೆಗೆ ಅರ್ಜಿ ಕರೆಯುವುದು ತಡವಾಗಿದೆ. ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡುವ ಸಂಬಂಧ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.‌ ಇನ್ನು ಕಾವಾ ಅಭಿವೃದ್ಧಿಗೆ ಇಲಾಖೆ ವತಿಯಿಂದ ಈಗಾಗಲೇ ಎರಡು ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ವಸುಂಧರಾ, ಕಾವಾ ಡೀನ್ ದೇವರಾಜು, ಜಯಶಂಕರ್, ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share

You cannot copy content of this page