ಸಮಗ್ರ ಸುದ್ದಿ

ಮೈಸೂರು ದಸರಾ ಕ್ರೀಡಾಕೂಟ ಸಿಎಂ ಕಪ್–2026ಕ್ಕೆ ಡಾ. ಜಿ. ಪರಮೇಶ್ವರ ಚಾಲನೆ| ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ

Share

ಮೈಸೂರು:ದಸರಾ ಕ್ರೀಡಾಕೂಟವು ಕೇವಲ ಕ್ರೀಡಾ ಸ್ಪರ್ಧೆಯಲ್ಲ, ಕ್ರೀಡಾಪಟುಗಳ ಪ್ರತಿಭೆ ಮತ್ತು ಸಾಧನೆಗೆ ವೇದಿಕೆಯಾಗಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉದ್ಯೋಗ ಮೀಸಲಾತಿ, ಬಹುಮಾನ ಮೊತ್ತ ಹೆಚ್ಚಳ ಹಾಗೂ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಹೇಳಿದರು.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್–2026ಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿ, ದಸರಾ ಕ್ರೀಡಾಕೂಟವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿರುವ ಎಲ್ಲಾ ಸಂಘಟಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದ್ದು, ಅದರ ಪರಂಪರೆಯ ಭಾಗವಾಗಿ ನಡೆಯುತ್ತಿರುವ ಕ್ರೀಡಾಕೂಟ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಮೈಸೂರು ದಸರಾ ಕ್ರೀಡಾಕೂಟಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿತ್ತು. ಕುಸ್ತಿ, ಕತ್ತಿವರಸೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇದೇ ಪರಂಪರೆಯನ್ನು ಮೈಸೂರು ಅರಸರು ಮುಂದುವರಿಸಿಕೊಂಡು ಬಂದರು. ಕಾಲ ಬದಲಾದಂತೆ ದಸರಾ ಕ್ರೀಡಾಕೂಟವೂ ಆಧುನಿಕ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿಸಿದರು.

ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ 26 ಕ್ರೀಡಾ ವಿಭಾಗಗಳನ್ನು ಆಯೋಜಿಸಿರುವುದು ಸಂತಸದ ಸಂಗತಿ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು, ಮೈಸೂರು ದಸರಾ ಇತಿಹಾಸದಲ್ಲಿ 2026ರ ಕ್ರೀಡಾಕೂಟವೂ ಸ್ಮರಣೀಯವಾಗಿ ಉಳಿಯಲಿದೆ ಎಂದರು.

ದಸರಾ ಕ್ರೀಡಾಕೂಟ ನನ್ನ ಕ್ರೀಡಾ ಬದುಕಿಗೆ ಪ್ರೇರಣೆ:

ನಾನು ಕೂಡ ಮೈಸೂರು ದಸರಾ ಕ್ರೀಡಾಕೂಟದ ಮೂಲಕ ರೂಪುಗೊಂಡ ಕ್ರೀಡಾಪಟು. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳಲ್ಲಿ ಸ್ಪರ್ಧಿಸಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುವ ಅವಕಾಶ ನನಗೂ ದೊರಕಿತ್ತು ಎಂಬುದನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕ್ರೀಡೆಯು ಮನುಷ್ಯನ ಜೀವನದಲ್ಲಿ ಮಹತ್ವದ ಬದಲಾವಣೆ ತರುವ ಶಕ್ತಿಯನ್ನು ಹೊಂದಿದೆ. ಸೋಲು ಮತ್ತು ಗೆಲುವು ಕ್ರೀಡೆಯ ಸಹಜ ಭಾಗಗಳು. ಪ್ರತಿಬಾರಿಯೂ ಗೆಲುವು ಸಾಧ್ಯವಾಗುವುದಿಲ್ಲ. ಆದರೆ ಸೋಲಿನಿಂದ ಪಾಠ ಕಲಿತು, ಮುಂದಿನ ಬಾರಿ ಗೆಲ್ಲಬೇಕೆಂಬ ಸಂಕಲ್ಪವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿಯೂ ಎದುರಾಗುವ ಸೋಲುಗಳು ಭವಿಷ್ಯದಲ್ಲಿ ಸಾಧನೆ ಮಾಡಲು ಶಕ್ತಿ, ಸವಾಲು ಹಾಗೂ ಹೊಸ ಅವಕಾಶಗಳನ್ನು ನೀಡುತ್ತವೆ ಎಂದು ಹೇಳಿದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಯುತ್ತದೆ. ಕ್ರೀಡಾಪಟುಗಳು ತಮ್ಮ ಕ್ರೀಡಾ ಬದುಕಿನ ಜೊತೆಗೆ ವೈಯಕ್ತಿಕ ಜೀವನದಲ್ಲಿಯೂ ಯಶಸ್ಸು ಸಾಧಿಸಲಿ ಎಂದು ಆಶಿಸಿದರು.

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಉದ್ಯೋಗ ಮೀಸಲಾತಿ

ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಸಲಹೆ ಹಾಗೂ ಪ್ರಯತ್ನಗಳು ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ತಿಳಿಸಿದರು.

ಆರಂಭದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗಿತ್ತು ಎಂದು ಸ್ಮರಿಸಿದರು.

ಇದೀಗ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿಯೂ ಕ್ರೀಡಾಪಟುಗಳಿಗೆ ಶೇ. 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತು ಇತ್ತೀಚೆಗೆ ಆದೇಶ ಹೊರಡಿಸಿದ್ದೇವೆ. ಈ ಕ್ರಮವು ಕ್ರೀಡಾಪಟುಗಳಿಗೆ ಭದ್ರವಾದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರು ಉದ್ಯೋಗಕ್ಕಾಗಿ ಪರದಾಡುವ ಪರಿಸ್ಥಿತಿ ತಪ್ಪಿಸಿ, ಕ್ರೀಡೆಯನ್ನೇ ವೃತ್ತಿಜೀವನದ ಭಾಗವಾಗಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಬಹುಮಾನ ಮೊತ್ತ ಹೆಚ್ಚಳ: ಚಿನ್ನಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ, ಕಂಚಿಗೆ ₹50 ಲಕ್ಷ

ಕ್ರೀಡಾಪಟುಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕ್ರೀಡೆಗಾಗಿ ಮೀಸಲಿಟ್ಟು, ದೇಶಕ್ಕೆ ಪದಕ ಹಾಗೂ ಗೌರವ ತಂದುಕೊಡಲು ಅಪಾರ ಪರಿಶ್ರಮ ಪಡುತ್ತಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಆದರೂ ಅವರ ಸಾಧನೆಗೆ ಸರ್ಕಾರದಿಂದ ಗರಿಷ್ಠ ಪ್ರೋತ್ಸಾಹ ದೊರೆಯಬೇಕು ಎಂಬ ಉದ್ದೇಶದಿಂದ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಡಾ. ಜಿ. ಪರಮೇಶ್ವರ ತಿಳಿಸಿದರು.

ಹಿಂದೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಚಿನ್ನದ ಪದಕಕ್ಕೆ ₹35 ಲಕ್ಷ, ಬೆಳ್ಳಿ ಪದಕಕ್ಕೆ ₹25 ಲಕ್ಷ ಹಾಗೂ ಕಂಚಿನ ಪದಕಕ್ಕೆ ₹15 ಲಕ್ಷ ಬಹುಮಾನ ನೀಡಲಾಗುತ್ತಿತ್ತು. ಕ್ರೀಡಾಪಟುವಾಗಿ ಕ್ರೀಡಾಪಟುಗಳ ಪರಿಶ್ರಮ ಮತ್ತು ತ್ಯಾಗದ ಮೌಲ್ಯವನ್ನು ಅರಿತಿರುವ ನಾನು, ಕ್ರೀಡಾ ಸಚಿವನಾಗಿ ಈ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ನಿರ್ಧರಿಸಿದೆ ಎಂದರು.

ಅದರಂತೆ ಚಿನ್ನದ ಪದಕ ವಿಜೇತರಿಗೆ ನೀಡುವ ಬಹುಮಾನವನ್ನು ₹1 ಕೋಟಿಗೆ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷಕ್ಕೆ ಹಾಗೂ ಕಂಚಿನ ಪದಕ ವಿಜೇತರಿಗೆ ₹50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೆ ನೀಡುವ ಪ್ರೋತ್ಸಾಹಧನದ ಮಾದರಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೂ ಸೂಕ್ತ ಪ್ರೋತ್ಸಾಹ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಕ್ರೀಡಾಪಟು ಶಿಲ್ಪ ಅವರು ಬಹುಮಾನ ಮೊತ್ತದ ಕುರಿತು ಪ್ರಸ್ತಾಪಿಸಿದ್ದು, ಅವರಿಗೆ ಕೂಡ ಸೂಕ್ತ ಪ್ರೋತ್ಸಾಹ ನೀಡುವ ಭರವಸೆಯನ್ನು ನೀಡಲಾಗಿದೆ ಎಂದರು.

ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ

ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಸಲು ಅಗತ್ಯವಿರುವ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಾಗ, ವಿದೇಶಗಳಿಗೆ ತೆರಳುವ ಮುನ್ನವೇ ರಾಜ್ಯದಲ್ಲಿಯೇ ಗುಣಮಟ್ಟದ ತರಬೇತಿ ಪಡೆಯುವಂತಾಗಬೇಕು. ಇದಕ್ಕಾಗಿ ಅಗತ್ಯವಿರುವ ಕ್ರೀಡಾ ಸೌಲಭ್ಯಗಳು, ಮೂಲಸೌಕರ್ಯ ಮತ್ತು ತರಬೇತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕ್ರೀಡಾ ಪ್ರತಿಭೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ರಾಜ್ಯವನ್ನು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಮುಂಚೂಣಿಗೆ ತರಲು ಸರ್ಕಾರ ಶ್ರಮಿಸಲಿದೆ ಎಂದರು.

ಕಲಬುರಗಿ, ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು. ಕ್ರೀಡಾಪಟುಗಳ ಪ್ರತಿಭೆ ಮತ್ತು ಸಾಧನೆಯನ್ನು ಉತ್ತೇಜಿಸಲು ಬಹುಮಾನ ಮೊತ್ತವನ್ನು ಹೆಚ್ಚಿಸುವಂತಹ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಪದಕ ಗೆಲ್ಲುವುದಷ್ಟೇ ಅಲ್ಲ, ಕ್ರೀಡಾಕೂಟದಲ್ಲಿ ಭಾಗವಹಿಸುವುದೂ ಹೆಮ್ಮೆಯ ಸಂಗತಿ:

ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲರೂ ಪದಕ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಹೆಮ್ಮೆಯ ಸಂಗತಿ. ನಾನೂ ಕೂಡ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ ಎಂಬ ನೆನಪು ಜೀವನಪೂರ್ತಿ ಉಳಿಯುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅನುಭವವು ಕ್ರೀಡಾಪಟುಗಳಿಗೆ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಗುತ್ತದೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ದೂರದ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಸಾಧ್ಯವಾದಷ್ಟು ಉತ್ತಮ ಸಾಧನೆ ಮಾಡಬೇಕು. ಎಲ್ಲರೂ ಗೆಲ್ಲಬೇಕೆಂಬ ಉತ್ಸಾಹ ಮತ್ತು ಆತ್ಮವಿಶ್ವಾಸದೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು ಎದುರಾದರೂ ಅದರಿಂದ ನಿರಾಶರಾಗದೆ, ಮುಂದಿನ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು ಎಂದು ಕರೆ ನೀಡಿದರು.

ಮೈಸೂರು ದಸರಾ ಕ್ರೀಡಾಕೂಟದ ಇತಿಹಾಸದಲ್ಲಿ 2026ರ ಆವೃತ್ತಿಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ವಿಶೇಷ ಸ್ಥಾನವಿದೆ. ಎಲ್ಲ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಿರಲಿ, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ, ಏಷ್ಯಾನ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಗಾಲ್ಫ್ ಕ್ರೀಡಾಪಟು ಪ್ರಣವಿ ಅರಸ್, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಾದ ಶಿಲ್ಪಾ ಕೆ.ಎಸ್ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವರಾದ ಸಿ. ಪುಟ್ಟರಂಗ ಶೆಟ್ಟಿ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷರಾದ ಅನಿಲ್ ಕುಮಾರ್ ಸಿ, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.‌ ಕೆ.ಗೋವಿಂದರಾಜು,‌ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್ ಉಪಸ್ಥಿತರಿದ್ದರು.


Share

You cannot copy content of this page