ಸಮಗ್ರ ಸುದ್ದಿ

ಧರ್ಮ- ಸಂಸ್ಕೃತಿ ಜಾಗೃತಿಯಲ್ಲಿ ರಂಭಾಪುರಿ ಪೀಠ ಕೊಡುಗೆ ಅನನ್ಯ:ಸಚಿವ ಪ್ರಲ್ಹಾದ ಜೋಶಿ

Share

ಬಾಗಲಕೋಟೆ: ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಿಂದ ಈ ಬಾರಿ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ಧ ಶ್ರೀಮದ್ ರಂಭಾಪುರಿ ಜಗದ್ಗುರುಗಳ “ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ”ಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
‎
‎ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯದಲ್ಲಿ ಸಚಿವರು ಧರ್ಮ ಸಮ್ಮೇಳನ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು, ‎ನಮ್ಮ ಭಾರತೀಯ ಸನಾತನ ಧರ್ಮ, ಸಾಹಿತ್ಯ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಸಂರಕ್ಷಿಸಿ, ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿ ಶ್ರೀ ರಂಭಾಪುರಿ ಪೀಠದ ಕೊಡುಗೆ ಅನನ್ಯ ಮತ್ತು ಅಪಾರವಾಗಿದೆ ಎಂದು ಬಣ್ಣಿಸಿದರು.

ಶ್ರೀಮದ್ ರಂಭಾಪುರಿ ಪೀಠದ ಪರಂಪರೆಯಂತೆ ಪ್ರತಿ ವರ್ಷ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಕಲೆ, ಸಾಹಿತ್ಯ, ಸಂಗೀತ, ಧರ್ಮ ಹಾಗೂ ಸಂಸ್ಕೃತಿಯ ವೈವಿಧ್ಯಮಗಳು ಮೇಳೈಸಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

‎11 ದಿನಗಳ ಕಾಲ ನಡೆಯಲಿರುವ ಈ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪ್ರವಚನ, ಪೂಜಾ ಕೈಂಕರ್ಯಗಳು ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಆಚರಣೆಗಳು ಹಾಗೂ ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿದೆ ಈ ಧರ್ಮ ಸಮ್ಮೇಳನ ಎಂದು ಹೇಳಿದರು.

ಬಾಳೆಹೊನ್ನೂರು ರಂಭಾಪುರಿ ಪೀಠ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಮ್ಮುಖದಲ್ಲಿ ಯಾವತ್ತೂ ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಕಲೆಯನ್ನು ಪಸರಿಸುತ್ತ ಬಂದಿದೆ. ಎಲ್ಲಾ ಸಮುದಾಯದಲ್ಲೂ ಭಕ್ತಿ-ಭಾವವನ್ನು ತುಂಬಿದೆ ಎಂದು ಪ್ರತಿಪಾದಿಸಿದರು.
‎
ಸಮಾರಂಭದಲ್ಲಿ ಜಮಖಂಡಿ ಕಲ್ಯಾಣಮಠದ ಶ್ರೀ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿ, ಮರೇಗುದ್ದಿ ಆಡವಿ ಸಿದ್ಧೇಶ್ವರಮಠದ ಶ್ರೀ. ಡಾ.ನಿರುಪಾಧೀಶ ಸ್ವಾಮಿಜಿ, ಬಾಳೆಹೊನ್ನೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ, ದೇವರಹಿಪ್ಪರಗಿ ಜಡಿಮಠದ ಶ್ರೀ.ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿ ಹಿರೆಮಠದ ಶ್ರೀ ಶರಣಬಸವ ಶಿವಾಚಾರ್ಯ ಸ್ವಾ ಮೀಜಿ , ಜಮಖಂಡಿ ರುದ್ರಾವಧೂತಮಠದ ಶ್ರೀ ವೇದಾಚಾರ್ಯ ಸಹಜಾನಂದ ಅವಧೂತರು, ಶೂರ್ಪಾಲಿ ಸಾರಂಗಮಠದ ಮಾತೋಶ್ರೀ ಸುನಂದಮ್ಮತಾಯಿ, ಜಮಖಂಡಿ ಕ್ಷೇತ್ರದ ಶಾಸಕರಾದ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ, ಸೇರಿದಂತೆ ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.


Share

You cannot copy content of this page