ಸಮಗ್ರ ಸುದ್ದಿ

ಸೇನೆಗೆ 1.25 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಮೀಸಲು|ಭಾರತೀಯ ಯೋಧರಿಗೆ ಗುಣಮಟ್ಟದ ʼಭಾರತ್‌ ರೈಸ್‌ʼ

Share

ನವದೆಹಲಿ: ಭಾರತೀಯ ಸೇನೆಗಾಗಿ ಆಹಾರ ಇಲಾಖೆ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿರಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದೆಹಲಿಯಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರ ಸಮ್ಮುಖದಲ್ಲಿ ಭಾರತೀಯ ಸೇನೆಗಾಗಿ ಉತ್ತಮ ಗುಣಮಟ್ಟದ ʼಭಾರತ್‌ ರೈಸ್‌ʼ ಪೂರೈಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಾಫೆಡ್ (NAFED) ಜತೆಗಿನ ಸಾಂಸ್ಥಿಕ ವ್ಯವಸ್ಥೆ ಮೂಲಕ ಭಾರತೀಯ ಸೇನೆಗೆ ಗುಣಮಟ್ಟದ ಆಹಾರ ಪೂರೈಸಲು ಆಹಾರ ಇಲಾಖೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.

ನಮ್ಮ ಯೋಧರಿಗಾಗಿಯೇ ಆಹಾರ ಇಲಾಖೆಯಿಂದ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿಟ್ಟಿದೆ. ಮುಖ್ಯವಾಗಿ ಗುಣಮಟ್ಟದ ಅಕ್ಕಿ ಪೂರೈಕೆಗೆ ಆದ್ಯತೆ ನೀಡಲಾಗಿದೆ. ʼಭಾರತ್ ರೈಸ್’ ಮಾನದಂಡಗಳಿಗೆ ಅನುಗುಣವಾಗಿ ಗರಿಷ್ಠ ಶೇ.5ರಷ್ಟು ಮಾತ್ರ ಒಡೆದ ಅಕ್ಕಿಯಿರುವ, ನಿಗದಿತ ಗುಣಮಟ್ಟದ ಆಹಾರ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಒಪ್ಪಂದಕ್ಕೆ ಸಹಿ: ಕಾರ್ಯಾಚರಣೆಗಳ ತುರ್ತು ಸಂದರ್ಭಗಳಲ್ಲಿ ನಮ್ಮ ಸೈನಿಕರಿಗೆ ಆಹಾರ ಪೂರೈಕೆಯನ್ನು ಖಾತ್ರಿಪಡಿಸಲು ಭಾರತೀಯ ಸೇನೆ ಹಾಗೂ ಭಾರತೀಯ ಆಹಾರ ನಿಗಮ FCI ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹ ಇದೇ ಸಂದರ್ಭದಲ್ಲಿ, ಸಚಿವದ್ವಯರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.


Share

You cannot copy content of this page