ಸಮಗ್ರ ಸುದ್ದಿ

​ಫಾರ್ಮಸಿ ಕ್ಷೇತ್ರದ ಹಿರಿಯ ಶಿಕ್ಷಣ ತಜ್ಞರಿಗೆ ಅಕ್ಟೋಬರ್ 27ರಂದು ‘ಫಾರ್ಮಾ ರತ್ನ ಸಮ್ಮಾನ್’ ಪ್ರದಾನ

Share

​ಬೆಂಗಳೂರು:ಫಾರ್ಮಸಿ ಶಿಕ್ಷಣದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ದೀರ್ಘಕಾಲ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಣ ತಜ್ಞರನ್ನು ಗೌರವಿಸುವ ಉದ್ದೇಶದಿಂದ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (PCI) ಮಹತ್ವದ ರಾಷ್ಟ್ರೀಯ ಉಪಕ್ರಮವನ್ನು ಘೋಷಿಸಿದೆ. ಫಾರ್ಮಸಿ ವೃತ್ತಿಯಲ್ಲಿ ಕನಿಷ್ಠ 25 ವರ್ಷಗಳ ಅನುಕರಣೀಯ ಸೇವೆ ಸಲ್ಲಿಸಿರುವ ಆಯ್ದ ಶಿಕ್ಷಕರಿಗೆ 2026ರ ಅಕ್ಟೋಬರ್ 27ರಂದು ಪ್ರತಿಷ್ಠಿತ ‘ಫಾರ್ಮಾ ರತ್ನ ಸಮ್ಮಾನ್’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಫಾರ್ಮಸಿ ಕೌನ್ಸಿಲ್ ಆಫ್‌ ಇಂಡಿಯಾದ ಅಧ್ಯಕ್ಷರು ತಿಳಿಸಿದ್ದಾರೆ

“ಈ ಹಿರಿಯ ಶಿಕ್ಷಣ ತಜ್ಞರು ಫಾರ್ಮಸಿಸ್ಟ್‌ಗಳ ಹಲವು ತಲೆಮಾರುಗಳನ್ನು ರೂಪಿಸುವ ಮೂಲಕ ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯ ಅಡಿಪಾಯವನ್ನು ಬಲಪಡಿಸಿದ್ದಾರೆ. ಅವರ 25 ವರ್ಷಗಳಿಗೂ ಹೆಚ್ಚಿನ ನಿರಂತರ ಸೇವೆಯನ್ನು ಗೌರವಿಸುವುದು ಎಂದರೆ, ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಭವಿಷ್ಯಕ್ಕಾಗಿ ಅವರು ನಿರ್ಮಿಸಿರುವ ಶ್ರೀಮಂತ ಪರಂಪರೆಗೆ ಗೌರವ ಸಲ್ಲಿಸಿದಂತಾಗಿದೆ,” ಎಂದು ಅವರು ತಿಳಿಸಿದ್ದಾರೆ.

​ಪ್ರಸ್ತುತ ಈ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದ್ದು, ಸಮಾರಂಭವು ನವದೆಹಲಿಯ ನೌರೋಜಿ ನಗರದಲ್ಲಿರುವ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಲ್ಲಿನ ಮೂರನೇ ಮಹಡಿ, ಟವರ್-1, ವರ್ಲ್ಡ್ ಟ್ರೇಡ್ ಸೆಂಟರ್, ನೌರೋಜಿ ನಗರ, ನವದೆಹಲಿ-110029 ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸುಮಾರು 100 ಹಿರಿಯ ಫಾರ್ಮಸಿ ಶಿಕ್ಷಕರನ್ನು ಈ ರಾಷ್ಟ್ರೀಯ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಕರ್ನಾಟಕ ರಾಜ್ಯದಿಂದ ಪ್ರಮುಖ ದಿಗ್ಗಜರುಗಳಾದ ಡಾ. ವಿ.ಬಿ. ದೇಸಾಯಿ (ಕರ್ನಾಟಕದ ಮಾಜಿ ಡ್ರಗ್ಸ್ ಕಂಟ್ರೋಲರ್), ಡಾ. ಎಫ್. ವಿ. ಮಾನವಿ (ಮಾಜಿ ಪಿಸಿಐ ಸದಸ್ಯರು ಮತ್ತು ಬೆಳಗಾವಿಯ ಕೆಎಲ್‌ಇ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರು), ಡಾ. ಎಂ.ಡಿ. ಕರ್ವಾಕರ್ (ಕೃಪಾನಿಧಿ ಫಾರ್ಮಸಿ ಕಾಲೇಜಿನ ನಿರ್ದೇಶಕರು ಮತ್ತು ಸಲಹೆಗಾರರು), ಡಾ. ಎನ್. ಉಡುಪ (ಮಾಜಿ ಪ್ರಾಂಶುಪಾಲರು ಮತ್ತು ಸಂಶೋಧನಾ ನಿರ್ದೇಶಕರು, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ, ಮಣಿಪಾಲ), ಹಾಗೂ ಡಾ. ಅನಂತ್ ನಾಗಪ್ಪ ನಾಯಕ್ (ಮಾಜಿ ವಿಭಾಗದ ಮುಖ್ಯಸ್ಥರು, ಫಾರ್ಮಸಿ ಪ್ರಾಕ್ಟಿಸ್) ಅವರುಗಳು ಆಯ್ಕೆಯಾಗಿದ್ದಾರೆ.

ದೇಶದ ವಿವಿಧ ಭಾಗಗಳ ಹಿರಿಯ ಫಾರ್ಮಸಿ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸುವುದು ಮತ್ತು ಮುಂದಿನ ಪೀಳಿಗೆಯ ಫಾರ್ಮಸಿ ಶಿಕ್ಷಕರಿಗೆ ಸ್ಫೂರ್ತಿ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಸಮಾರಂಭದಲ್ಲಿ ಪಿಸಿಐನ ಕೇಂದ್ರ ಮಂಡಳಿಯ ಸದಸ್ಯರು, ಔಷಧ ಉದ್ಯಮದ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ನೀತಿ ನಿರೂಪಕರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.


Share

You cannot copy content of this page