ಸಮಗ್ರ ಸುದ್ದಿ

ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಹೈಕೋರ್ಟ್‌ ರದ್ದು: ಕಳವಳಕಾರಿ ವಿಚಾರ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Share

ಬೆಂಗಳೂರು:ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಪ್ರವೇಶಾತಿ ಹಾಗೂ ಸರ್ಕಾರಿ ಉದ್ಯೋಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿರುವುದನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿರುವುದು ಕಳವಳಕಾರಿ ವಿಚಾರವಾಗಿದೆ. ಈ ತೀರ್ಪು ಮುಂಬರುವ ದಿನಗಳಲ್ಲಿ ರಾಜ್ಯದ ಸಾಮಾಜಿಕ ನ್ಯಾಯ, ಶಿಕ್ಷಣದ ಅವಕಾಶಗಳು ಮತ್ತು ಸರ್ಕಾರಿ ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚಿದೆ.

ನಾವು ನ್ಯಾಯಾಂಗದ ಬಗ್ಗೆ ಗೌರವ ಹೊಂದಿದ್ದೇವೆ. ನ್ಯಾಯಾಂಗವು ಕಾರ್ಯನಿರ್ವಹಿಸುವ ಸಾಂವಿಧಾನಿಕ ವ್ಯವಸ್ಥೆಯ ಬಗ್ಗೆಯೂ ನಮಗೆ ಸಂಪೂರ್ಣ ಗೌರವವಿದೆ. ಆದರೆ, ಈ ತೀರ್ಪು ಹಿಂದಿನ ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರಂತರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.

ಹಿಂದಿನ ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಸೂಕ್ತ ಸಾಂವಿಧಾನಿಕ ತಳಹದಿಯನ್ನು ಹಾಕದೆ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಏಕಾಏಕಿ ಜಾರಿಗೊಳಿಸಿದ್ದೇಕೆ? ಎಂಬ ಪ್ರಶ್ನೆ ಉದ್ಭವಿಸಿದೆ.

2022ರ ಅಕ್ಟೋಬರ್‌ನಲ್ಲಿಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದಿಂದ ಕರ್ನಾಟಕದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗಲಿದ್ದು, ಅದು ಆಗಿನ ಶೇ. 50ರ ಮಿತಿಯನ್ನು ಮೀರುತ್ತದೆ ಎಂಬ ಅರಿವು ಅಂದಿನ ಬಿಜೆಪಿ ಸರ್ಕಾರಕ್ಕಿತ್ತು. ಈ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸಲು ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಅಗತ್ಯವಿದೆ ಎಂಬುದನ್ನು ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು. ಆದರೆ, ಅಗತ್ಯವಾದ ಸಾಂವಿಧಾನಿಕ ಚೌಕಟ್ಟನ್ನು ಒದಗಿಸದೆ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

ಚುನಾವಣೆಗೆ ಮುನ್ನ ಮೀಸಲಾತಿ ಹೆಚ್ಚಳವನ್ನು ಘೋಷಿಸುವುದಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಆದ್ಯತೆ ಸಾಂವಿಧಾನಿಕ ತಳಹದಿ ರೂಪಿಸುವಲ್ಲಿ ಏಕೆ ಇರಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಲಕ್ಷಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಆಶಯಗಳನ್ನು ಚುನಾವಣಾ ರಾಜಕೀಯದ ಅನುಕೂಲಕ್ಕೆ ತಕ್ಕಂತೆ ಪರಿಗಣಿಸಲು ಸಾಧ್ಯವಿಲ್ಲ. ಮೀಸಲಾತಿ ಎಂಬುದು ಯಾವುದೇ ಸರ್ಕಾರ ನೀಡುವ ರಾಜಕೀಯ ಕೊಡುಗೆಯಲ್ಲ. ತಲೆಮಾರುಗಳಿಂದ ಈ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಅವಕಾಶಗಳ ನಿರಾಕರಣೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ನಿವಾರಿಸಿ, ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಂವಿಧಾನಿಕ ನ್ಯಾಯದ ಸಾಧನವಾಗಿದೆ.

ಕಾಂಗ್ರೆಸ್ ಪಕ್ಷವು ಮೀಸಲಾತಿ ಹೆಚ್ಚಳಕ್ಕೆ ಶಾಶ್ವತವಾದ ಸಾಂವಿಧಾನಿಕ ಪರಿಹಾರ ಕಲ್ಪಿಸುವ ನಿಲುವನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ. ಕರ್ನಾಟಕದ ಹೆಚ್ಚುವರಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವುದು ಹಾಗೂ ಜನಸಂಖ್ಯೆ, ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಸೂಕ್ತ ಪ್ರಾತಿನಿಧ್ಯದ ಕೊರತೆಯನ್ನು ಆಧರಿಸಿದ ಮೀಸಲಾತಿ ನೀತಿಗಳಿಗೆ ಅವಕಾಶ ಕಲ್ಪಿಸಲು ಶೇ. 50ರ ಮಿತಿಯನ್ನು ಮರುಪರಿಶೀಲಿಸುವುದು ಈ ನಿಟ್ಟಿನಲ್ಲಿ ಅತ್ಯಂತ ಅಗತ್ಯವಾಗಿದೆ.

ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣಕ್ಕೆ ಮುಂದೂಡಲಾಗಿದೆ ಎಂಬುದನ್ನು 2026ರ ಜುಲೈ 25ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ನೀಡಿದ ಉತ್ತರವೇ ಸಾರಿ ಹೇಳಿದೆ.

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಸಾಂವಿಧಾನಿಕ ಚೌಕಟ್ಟನ್ನು ರೂಪಿಸುವಾಗ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟ ಕಾಲದವರೆಗೆ ಮುಂದೂಡುವುದು ಸರಿಯಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತನ್ನ ನಿಲುವೇನು ಎಂಬುದನ್ನು ಬಹಿರಂಗಪಡಿಸಬೇಕು. ತನ್ನದೇ ಸರ್ಕಾರ ಕರ್ನಾಟಕದಲ್ಲಿ ಜಾರಿ ಮಾಡಿರುವ ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಅದು ಮುಂದುವರಿಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಆದ್ದರಿಂದ, ಮೀಸಲಾತಿಯ ಶೇ. 50ರ ಮಿತಿಯನ್ನು ಸಮಗ್ರವಾಗಿ ಮರುಪರಿಶೀಲಿಸಲು, ಸೂಕ್ತ ಸಾಂವಿಧಾನಿಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಹಾಗೂ ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ತುರ್ತಾಗಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದೇನೆ.


ಪ್ರಚಾರದ ದೃಷ್ಟಿಯಿಂದ ಮೀಸಲಾತಿ ಒದಗಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕಾನೂನಿನ ದೃಷ್ಟಿಯಿಂದ ಸುಸ್ಥಿರವಾದ, ಸಾಮಾಜಿಕವಾಗಿ ಅರ್ಥಪೂರ್ಣವಾದ ಮತ್ತು ಪರಿಣಾಮಕಾರಿಯಾದ ಚೌಕಟ್ಟು ಇರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.

ಕರ್ನಾಟಕ ಸರ್ಕಾರವು ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಿದೆ. ಇದೇ ಸಂದರ್ಭದಲ್ಲಿ, ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳು ಮತ್ತು ಶೈಕ್ಷಣಿಕ ಅವಕಾಶಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಒದಗಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಶಿಕ್ಷಣ, ಪ್ರಾತಿನಿಧ್ಯ ಮತ್ತು ಸಮಾನ ಅವಕಾಶಗಳು ಸಾಮಾಜಿಕ ಪ್ರಗತಿಯ ಮೂಲಾಧಾರಗಳೆಂದು ನಾನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದೇನೆ. ಮೀಸಲಾತಿಯ ಉದ್ದೇಶ ಕೇವಲ ಕೆಲವು ಸ್ಥಾನಗಳು ಅಥವಾ ಉದ್ಯೋಗಗಳನ್ನು ಹಂಚಿಕೆ ಮಾಡುವುದಕ್ಕೆ ಸೀಮಿತವಾಗಿಲ್ಲ. ಐತಿಹಾಸಿಕವಾಗಿ ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ದೇಶದ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಮಾಡುವುದು ಅದರ ನಿಜವಾದ ಆಶಯವಾಗಿದೆ.

ಮುಂದಿನ ತಲೆಮಾರಿನ ದಲಿತ ಮತ್ತು ಆದಿವಾಸಿ ಮಕ್ಕಳು ತಮ್ಮ ಹಕ್ಕುಗಳಿಗಾಗಿ, ಮೀಸಲಾತಿಗಾಗಿ ನಿರಂತರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತ ಅನಿಶ್ಚಿತತೆಯಲ್ಲಿ ಬದುಕುವಂತಾಗಬಾರದು. ಬದಲಿಗೆ, ಅವರು ಹಿಂದಿನ ಪೀಳಿಗೆಗಿಂತ ಹೆಚ್ಚಿನ ಅವಕಾಶಗಳು ಮತ್ತು ಉತ್ತಮ ಭವಿಷ್ಯವನ್ನು ಹೊಂದುವಂತಾಗಬೇಕು.

ಮೀಸಲಾತಿಯ ಉದ್ದೇಶವಾದ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಉಳಿಸಿಕೊಂಡು, ಇಂದಿನ ಸಾಮಾಜಿಕ ಪರಿಸ್ಥಿತಿಗಳು, ಹಿಂದುಳಿದ ಸಮುದಾಯಗಳ ಅಗತ್ಯಗಳು ಮತ್ತು ವಾಸ್ತವಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನೀತಿಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಮುಕ್ತ ಹಾಗೂ ಗಂಭೀರ ಚರ್ಚೆ ನಡೆಯಬೇಕಿದೆ. ಅದಕ್ಕೆ ಇದು ಸೂಕ್ತ ಸಮಯವಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ಮತ್ತು ಅವಕಾಶವಂಚಿತ ಸಮುದಾಯಗಳ ಹಕ್ಕುಗಳು ಹಾಗೂ ಆಶಯಗಳನ್ನು ರಕ್ಷಿಸುವುದರ ಜೊತೆಗೆ, ಮೀಸಲಾತಿ ಹೆಚ್ಚಳವನ್ನು ಸಾಂವಿಧಾನಿಕವಾಗಿ ಸುಸ್ಥಿರವಾದ ರೀತಿಯಲ್ಲಿ ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

ಸಾಮಾಜಿಕ ನ್ಯಾಯವು ಕಾಯ್ದೆಯ ಘೋಷಣೆಯೊಂದಿಗೆ ಅಂತ್ಯಗೊಳ್ಳಬಾರದು. ಅದಕ್ಕೆ ಸಾಂವಿಧಾನಿಕ ರಕ್ಷಣೆ ದೊರೆಯಬೇಕು, ಸಾರ್ವಜನಿಕ ನೀತಿಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಮತ್ತು ಜನರ ಬದುಕಿನಲ್ಲಿ ನೈಜ ಅವಕಾಶಗಳ ರೂಪದಲ್ಲಿ ಕಾಣಿಸಿಕೊಳ್ಳಬೇಕು.ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.


Share

You cannot copy content of this page