ನವದೆಹಲಿ: ಕರ್ನಾಟಕದ ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ, ಸೋಮವಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ರೈತರ ಹಿತರಕ್ಷಣೆಗಾಗಿ ವಾರದೊಳಗೆ ಉನ್ನತ ಮಟ್ಟದ ಸಮಿತಿ ರಚನೆಯಂತಹ ತ್ವರಿತ ಕ್ರಮಕ್ಕೆ ಮುಂದಾಗಿದೆ.
ನವದೆಹಲಿಯಲ್ಲಿ ಸೋಮವಾರ ಸಂಜೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಮತ್ತು ಪ್ರಮುಖ ರೈತ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳನ್ನೆಲ್ಲ ಆಲಿಸಿದ ಸಚಿವದ್ವಯರು, ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಸಮಸ್ಯೆಗಳ ಪರಿಹಾರಕ್ಕೆ ಒಂದು ವಾರದೊಳಗೆ ರೈತರು ಮತ್ತು ವಿಜ್ಞಾನಿಗಳನ್ನೂ ಒಳಗೊಂಡ ಜಂಟಿ ಸಮಿತಿ ರಚಿಸುವುದಾಗಿ ಪ್ರಕಟಿಸಿದರು.
ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಸಕ್ಕರೆ ಇಳುವರಿ (ರಿಕವರಿ), ತೂಕ ಮತ್ತು ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಜಂಟಿ ಸಮಿತಿ ರಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದರಲ್ಲಿ ರೈತರು ಹಾಗೂ ಕೃಷಿ ವಿಜ್ಞಾನಿಗಳನ್ನೂ ಸೇರ್ಪಡೆ ಮಾಡಲಾಗುತ್ತದೆ ಎಂದು ಸ್ಪಷ್ಟ ಭರವಸೆ ನೀಡಿದರು.
ಜಂಟಿ ಸಮಿತಿ ಶಿಫಾರಸ್ಸು ಮೇರೆಗೆ ಅಗತ್ಯ ಕ್ರಮ:
ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಸಚಿವದ್ವಯರು, ʼರೈತರ ಸೇವೆ ನಮಗೆ ದೇವರ ಪೂಜೆಗೆ ಸಮಾನʼ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತಮ್ಮ ಸರ್ಕಾರ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದೆ. ಅಂತೆಯೇ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೂ ಪಾರದರ್ಶಕ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ, ರಾಜ್ಯಗಳು, ರೈತರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಿ ಅದರ ವರದಿ ಅನ್ವಯ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೋದಿ ಸರ್ಕಾರಕ್ಕೆ ರೈತರೇ ಪ್ರಥಮಾದ್ಯತೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರೇ ಪ್ರಥಮಾದ್ಯತೆಯಾಗಿದ್ದು, ಸಕ್ಕರೆ ಇಳುವರಿ ಅಂಕಿ-ಅಂಶಗಳ ತಿರುಚುವಿಕೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ದೃಢ ನಿಲುವು ಹೊಂದಿದೆ ಎಂದು ಸ್ಪಷ್ಟಪಡಿಸಿದ ಕೃಷಿ ಸಚಿವ ಶಿವರಾಜಸಿಂಗ್ ಚೌಹಾಣ್, ಅಗತ್ಯ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿಯೇ ಅಧಿಕಾರಿಗಳಿಗೆ ಸೂಚನೆ ಸಹ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ರೈತರ ಸರ್ವತೋಮುಖ ಅಭಿವೃದ್ಧಿ, ಕೃಷಿ ಉತ್ಪನ್ನಗಳ ಪಾರದರ್ಶಕ ಮೌಲ್ಯಮಾಪನ ಮತ್ತು ಕೃಷಿಕರ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ದೃಢವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರಿಬ್ಬರೂ ರೈತರ ಅಹವಾಲುಗಳನ್ನು ಗಂಭೀರವಾಗಿ ಮತ್ತು ಅತ್ಯಂತ ಸಹಾನುಭೂತಿಯಿಂದ ಆಲಿಸಿದರು. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಶೋಷಣೆಯನ್ನು ಸಹಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಸಕ್ಕರೆ ಇಳುವರಿ ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, ತೂಕ ಕಡಿತ ಮತ್ತು ಸಕ್ಕರೆ ಕಾರ್ಖಾನೆಗಳು ನೈಜ ಇಳುವರಿಯನ್ನು ಮರೆಮಾಚುವ ಆರೋಪ ಸೇರಿದಂತೆ ರೈತರು ಪ್ರಸ್ತಾಪಿಸಿದ ವಿಷಯಗಳು ಕುರಿತಂತೆ ಗಂಭೀರ ಚರ್ಚೆ ನಡೆಸಲಾಯಿತು. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಾತ್ಕಾಲಿಕ ಅಥವಾ ಅಪೂರ್ಣ ಪರಿಹಾರ ಹುಡುಕುವ ಬದಲು ಭವಿಷ್ಯದಲ್ಲಿಯೂ ಯಾವುದೇ ಕಾರ್ಖಾನೆಗಳು ರೈತರನ್ನು ವಂಚಿಸದಂತೆ ತಡೆಯಲು ಪಾರದರ್ಶಕ ಮತ್ತು ವೈಜ್ಞಾನಿಕ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಸ್ಪಷ್ಟ ಭರವಸೆ ನೀಡಿದರು.
ಕೇಂದ್ರದಿಂದ ತ್ವರಿತ ಸ್ಪಂದನೆ:
ಕರ್ನಾಟಕ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದ್ದು, ರೈತರಿಗೆ ಪರಿಣಾಮಕಾರಿ ಪರಿಹಾರ ಒದಗಿಸುವ ಉದ್ದೇಶದಿಂದ ಒಂದು ವಾರದೊಳಗೆ ವಿಶೇಷ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.
ಈ ಜಂಟಿ ಸಮಿತಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳಾದ ಕರ್ನಾಟಕ, ಮಹಾರಾಷ್ಟ್ರದ ಪ್ರತಿನಿಧಿಗಳು, ರೈತ ಸಂಘಟನೆಗಳ ಅಧಿಕೃತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ವಿಷಯ ತಜ್ಞರು (ವೈಜ್ಞಾನಿಕ ತಜ್ಞರು) ಇರಲಿದ್ದಾರೆ ಎಂದು ಹೇಳಿದರು.
ಈ ಸಮಿತಿ ಕಬ್ಬು ಕಟಾವಿನ ಸಮಯ, ಸಕ್ಕರೆ ಇಳುವರಿ ಅಳೆಯುವ ವೈಜ್ಞಾನಿಕ ಮಾನದಂಡಗಳು, ಆಧುನಿಕ ಪ್ರಯೋಗಾಲಯ ಪರೀಕ್ಷಾ ವ್ಯವಸ್ಥೆ ಮತ್ತು ತೂಕದ ನಿಖರತೆ ಸೇರಿದಂತೆ ಪ್ರತಿಯೊಂದು ತಾಂತ್ರಿಕ ಅಂಶವನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದು, ನಿಗದಿತ ಸಮಯದೊಳಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಗಳ ಸಹಕಾರವೂ ಅಗತ್ಯ:
ರೈತರ ಕಲ್ಯಾಣಕ್ಕಾಗಿ ಕೇಂದ್ರ ಅಗತ್ಯ ಕ್ರಮ ಕೈಗೊಳ್ಳಲಿದೆ. ತ್ವರಿತ ಕ್ರಮ ಕೈಗೊಳ್ಳುವಲ್ಲಿ ಆಯಾ ರಾಜ್ಯ ಸರ್ಕಾರಗಳ ಸಹಕಾರವೂ ಅಗತ್ಯವಾಗಿದೆ ಎಂದು ಕೋರಿದ ಸಚಿವರು, ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳು, ಸಕ್ಕರೆ ಕಾರ್ಖಾನೆಗಳು ವರದಿ ಮಾಡುವ ಸಕ್ಕರೆ ಇಳುವರಿ ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, ತೂಕ, ತ್ಯಾಜ್ಯ ನಿರ್ವಹಣೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದರು.
ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ತಕ್ಷಣದ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವ ಜತೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ನೀತಿ-ನಿಯಮ ಮತ್ತು ತಾಂತ್ರಿಕ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ಅಗತ್ಯ ಕಾರ್ಯವಿಧಾನಗಳನ್ನು ರೂಪಿಸಲು ಮಹತ್ತರ ಸಮಾಲೋಚನೆ ನಡೆಸಲಾಯಿತು.
FRP-SAP, ಎಥೆನಾಲ್ ವಿಸ್ತೃತ ಚರ್ಚೆ:
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರು, ಕಬ್ಬಿನ FRP ನಿರ್ಣಯ, ವೈಜ್ಞಾನಿಕ ಪ್ರಕ್ರಿಯೆ ಹಾಗೂ ವೆಚ್ಚದ ಮೌಲ್ಯಮಾಪನಕ್ಕೆ ಬಳಸುವ ವಿಧಾನಗಳ ಬಗ್ಗೆ ವಿವರಿಸಿದರು. ಸಕ್ಕರೆ ವಲಯದಲ್ಲಿ ಪ್ರತಿ ಹಂತದಲ್ಲೂ ಪಾರದರ್ಶಕತೆ ಹೆಜ್ಜೆಯಿರಿಸಿದ ಕೇಂದ್ರ ಸರ್ಕಾರ, ರೈತರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದರು. ಕಬ್ಬು ಬೆಳೆಗಾರರೊಂದಿಗೆ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರಲ್ಲದೆ, MSP ಮತ್ತು FRP ಗಿರುವ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟರು ಮತ್ತು SAP (ಕನಿಷ್ಠ ಮಾರಾಟ ದರ), ಎಥೆನಾಲ್ ಉತ್ಪಾದನೆ ಬಗ್ಗೆಯೂ ರೈತರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವಾಲಯ, ಆಹಾರ ಇಲಾಖೆ ಅಧಿಕಾರಿಗಳು, ರಾಜ್ಯ ಸಹಕಾರ ಸಚಿವ ಲಕ್ಷಣ ಸವದಿ, ಕೃಷಿ ಸಚಿವ ನರೇಂದ್ರ ಸ್ವಾಮಿ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ರೈತ ಮುಖಂಡರು ಮತ್ತು ಮಾಜಿ ಸಂಸದರಾದ ರಾಜು ಶೆಟ್ಟಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಪಾಲ್ಗೊಂಡಿದ್ದರು.
