ಬೆಂಗಳೂರು: ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಪೂರ್ಣಗೊಂಡ ನಂತರ ಸಂಬಂಧಪಟ್ಟ ನಗರ ಪಾಲಿಕೆಗಳ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸಚಿವ ಕೃಷ್ಣ ಬೈರೇಗೌಡ ಅವರು ಕಳೆದ ಮೂರು ತಿಂಗಳಿಂದ ಸಂಬಂಧಿತ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿದ್ದರು. ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಹೆಚ್.ವಿ. ರಮೇಶ್ ಅವರನ್ನ ಅಮಾನತುಗೊಳಿಸಿದ್ದರು.
ಅಲ್ಲದೆ, ಸೆಪ್ಟೆಂಬರ್ 18 ರ ರಾತ್ರಿ ಖುದ್ದು ಫೀಲ್ಡಿಗಿಳಿದು ಜೆಪಿ ನಗರದಿಂದ ಬನ್ನೇರುಘಟ್ಟ ನೈಸ್ ರಸ್ತೆಯ ವರೆಗೆ ಪರಿಶೀಲನೆ ನಡೆಸಿ ಅಧಿಕ ಸಂಖ್ಯೆಯಲ್ಲಿ ಬೀದಿ ದೀಪಗಳು ಕೆಲಸ ಮಾಡದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬೀದಿ ದೀಪಗಳ ಕಾರ್ಯ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುವ ಸಚಿವರು, ಈ ಕುರಿತು ಶುಕ್ರವಾರವೂ ಸಹ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ, ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಎಲ್ಇಡಿ ಬೀದಿ ದೀಪಗಳ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಮೂಲಕ ಖಚಿತಪಡಿಸಿಕೊಳ್ಳಬೇಕು. ದೀಪಗಳನ್ನು ಸಮರ್ಪಕವಾಗಿ ಅಳವಡಿಸದಿದ್ದಲ್ಲಿ ಅಥವಾ ಅವು ಕಾರ್ಯನಿರ್ವಹಿಸದಿದ್ದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.
ಎಲ್ಇಡಿ ದೀಪಗಳ ಅಳವಡಿಕೆ:
ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ಹಳೆಯ ದೀಪಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ. ಕಳೆದ ತಿಂಗಳ ಪರಿಶೀಲನೆ ಹಾಗೂ ಸತತ ಸಭೆಗಳ ನಂತರ ಬೀದಿ ದೀಪಗಳ ಅಳವಡಿಕೆ ಕಾರ್ಯ ಈಗಾಗಲೇ ಹಲವು ಪ್ರದೇಶಗಳಲ್ಲಿ ಪೂರ್ಣಗೊಂಡಿದೆ. ಬೀದಿ ದೀಪಗಳ ಕಾರ್ಯಕ್ಷಮತೆಯೂ ಉತ್ತಮವಾಗಿರುವುದು ಸಂತೋಷದ ವಿಚಾರ.
ಆದರೆ, ಈ ಪ್ರಗತಿ ಸಾಲದು. ಬಾಕಿ ಉಳಿದಿರುವ ಪ್ರದೇಶಗಳಲ್ಲೂ ಅಕ್ಟೋಬರ್ 31ರೊಳಗೆ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಡಿಯಂ ಲೈಟುಗಳನ್ನು ಎಲ್ಇಡಿ ಲೈಟುಗಳನ್ನಾಗಿ ಮಾರ್ಪಡಿಸಲು ಕ್ರಮವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪೂರ್ಣಗೊಳಿಸುವ ವೇಳಾಪಟ್ಟಿ ಸಲ್ಲಿಸಲು ಸೂಚನೆ:
ನಗರದಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಸ್ವಯಂಚಾಲಿತವಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯಾದ ಸಿಸಿಎಂಎಸ್(Centralized Control and Monitoring System) ಅಳವಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯ ವಿವರಗಳೊಂದಿಗೆ ವೇಳಾಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ನಾಲ್ಕು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿರುವ ನಿಯಂತ್ರಣ ಕೊಠಡಿಗಳ ಕಾಮಗಾರಿಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ದೂರುಗಳ ಸಂಖ್ಯೆಯಲ್ಲಿ ಇಳಿಕೆ:
ಬೀದಿ ದೀಪಗಳ ನಿರ್ವಹಣೆಯ ಕುರಿತು ನಿರಂತರ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಸುಧಾರಣೆ ಕಂಡುಬರುತ್ತಿದೆ. ಸಹಾಯ 2.0 ತಂತ್ರಾಂಶದಲ್ಲಿ ಬೀದಿ ದೀಪಗಳಿಗೆ ಸಂಬಂಧಿಸಿದಂತೆ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯೂ ಕ್ರಮೇಣ ಇಳಿಕೆಯಾಗುತ್ತಿದೆ.
ಜೂನ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 293 ದೂರುಗಳು ದಾಖಲಾಗುತ್ತಿದ್ದರೆ, ಅಕ್ಟೋಬರ್ ತಿಂಗಳಲ್ಲಿ ಈ ಸಂಖ್ಯೆ 235ಕ್ಕೆ ಇಳಿಕೆಯಾಗಿದೆ. ಸಹಾಯ 2.0 ತಂತ್ರಾಂಶದ ಮೂಲಕ ಸ್ವೀಕರಿಸಲಾಗುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ.
ಕಳೆದ ಸೆಪ್ಟೆಂಬರ್ನಿಂದ ಅಕ್ಟೋಬರ್ 15ರವರೆಗೆ ಒಟ್ಟು 8,186 ದೂರುಗಳು ದಾಖಲಾಗಿದ್ದು, ಈ ಪೈಕಿ ಈಗಾಗಲೇ 6,765 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಬೀದಿ ದೀಪಗಳ ನಿರ್ವಹಣೆಯಲ್ಲಿ ವಿಫಲವಾದ ಗುತ್ತಿಗೆದಾರರಿಗೆ ರೂ. 93.67 ಲಕ್ಷ ದಂಡ:
ಬೀದಿ ದೀಪಗಳನ್ನು ಅಳವಡಿಸಲು ವಿಫಲವಾದಲ್ಲಿ ಹಾಗೂ ಅಳವಡಿಸಿರುವ ದೀಪಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸದಿದ್ದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಅಲ್ಲದೆ, ಸಹಾಯ 2.0 ತಂತ್ರಾಂಶದಲ್ಲಿ ದಾಖಲಾಗುವ ದೂರುಗಳ ಆಧಾರದ ಮೇಲೆಯೂ ದಂಡ ವಿಧಿಸಲಾಗುತ್ತಿದೆ. ಅದರಂತೆ, ಈವರೆಗೆ ಬೀದಿ ದೀಪಗಳ ನಿರ್ವಹಣೆಯಲ್ಲಿ ವಿಫಲವಾದ ಕಾರಣಕ್ಕೆ ಗುತ್ತಿಗೆದಾರರಿಗೆ ಒಟ್ಟು ರೂ. 93,67,384 ದಂಡ ವಿಧಿಸಲಾಗಿದೆ.
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಆಯಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳು ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಮತ್ತು ನಿರ್ವಹಣೆಯ ಕುರಿತು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಅದರಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ, ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸದ ಗುತ್ತಿಗೆದಾರರಿಗೆ ದಂಡ ವಿಧಿಸುತ್ತಿದ್ದಾರೆ. ನಿರಂತರ ಮೇಲ್ವಿಚಾರಣೆಯಿಂದ ಬೀದಿ ದೀಪಗಳ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಗರ ಪಾಲಿಕೆಗಳ ಅಪರ ಆಯುಕ್ತರಾದ ಲತಾ ಆರ್., ಕವಿತಾ ರಾಜಾರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ನವೀನ್ ಕುಮಾರ್ ರಾಜು, ವೆಂಕಟ ಚಲಪತಿ, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
