ಸಮಗ್ರ ಸುದ್ದಿ

ಅಮೆಜಾನ್ ಸರಕು ಸಾಗಣೆಗೆ ಅಮೆಜಾನ್ 3000 ಎಲೆಕ್ಟ್ರಿಕ್ ಟ್ರಕ್ ನಿಯೋಜನೆ |ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ದೊಡ್ಡ ಬೂಸ್ಟರ್ : ಸಚಿವ ಹೆಚ್.ಡಿ.ಕುಮಾರಸ್ವಾಮಿ

Share

ನವದೆಹಲಿ:ಸರಕು ಸಾಗಣಿ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನಿಯೋಜನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಅನೇಕ ಉದ್ಯಮಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕೇಂದ್ರ ಸಚಿವ ಹೆಚ್‍.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ಟಾಟಾ ಮೋಟಾರ್ಸ್ ತಯಾರಿಸಿರುವ 3000 ಎಲೆಕ್ಟ್ರಿಕ್ ಟ್ರಕ್ ಗಳನ್ನು ಅಮೆಜಾನ್ ಸರಕು ಸಾಗಾಣಿಕೆಗೆ ನಿಯೋಜಿಸುವ ಉಪಕ್ರಮಕ್ಕೆ ಹಸಿರು ನಿಶಾನೆ ತೋರಿದ ನಂತರ ಕೇಂದ್ರ ಸಚಿವರು ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಾಕು ಸಾಗಣೆ ವಲಯದಲ್ಲಿ ಇದೊಂದು ಸ್ವಾಗತರ್ಹ ಹೆಜ್ಜೆಯಾಗಿದ್ದು, ಭಾರತದಲ್ಲಿ ಜಾಗತಿಕ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಸರಕು ಸಾಗಣೆ ಜಾಲಕ್ಕೆ ಟಾಟಾ ಮೋಟಾರ್ಸ್ ಕಂಪನಿಯ 3,000 ಎಲೆಕ್ಟ್ರಿಕ್ ಟ್ರಕ್‌ಗಳನ್ನು ನಿಯೋಜಿಸುವ ಬೃಹತ್ ಸ್ವಚ್ಛ ಸಾರಿಗೆ ಉಪಕ್ರಮಕ್ಕೆ ಹಸಿರು ನಿಶಾನೆ ತೋರುವ ಅವಕಾಶ ನನಗೆ ಸಿಕ್ಕಿರುವುದು ಸಂತಸ ಉಂಟುಮಾಡಿದೆ ಎಂದು ಸಚಿವರು ಹೇಳಿದರು.

ಸರಕು ಸಾಗಣೆ ವಲಯದಲ್ಲಿ ಇದೊಂದು ಪರಿವರ್ತನಾತ್ಮಕ ಹೆಜ್ಜೆ ಎಂದು ಬಣ್ಣಿಸಿದ ಸಚಿವ ಕುಮಾರಸ್ವಾಮಿ ಅವರು, ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಮಹತ್ವದ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತವು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಅತ್ಯಂತ ವೇಗವಾಗಿ ತೆರೆದುಕೊಳ್ಳುತ್ತಿರುವ ರಾಷ್ಟ್ರವಾಗಿದ್ದು, ಇದರ ಪಾಲುದಾರರಾದ ಅಮೆಜಾನ್ ಮತ್ತು ಟಾಟಾ ಮೋಟರ್ಸ್ ಕಂಪನಿಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

ಸಾಮೂಹಿಕ ಸಾರಿಗೆ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನಿಯೋಜನೆಯನ್ನು ಮತ್ತಷ್ಟು ಉತ್ತೇಜಿಸಲು ಕೇಂದ್ರ ಸರಕಾರ ಎಲ್ಲಾ ರೀತಿಯಲ್ಲಿಯೂ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಎಲೆಕ್ಟ್ರಿಕ್ ಟ್ರಕ್ ಗಳ ಬಳಕೆ ಅತ್ಯಂತ ಪರಿಣಾಮಕಾರಿ ಎಂದು ಸಚಿವರು ಪ್ರತಿಪಾದಿಸಿದರಲ್ಲವೇ, ಪ್ರಧಾನಿಗಳ ಅತ್ಯಂತ ಮಹತ್ವಾಕಾಂಕ್ಷೆಯ ವಿಕಸಿತ ಭಾರತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯು ದೊಡ್ಡ ಕೊಡುಗೆ ನೀಡಬಲ್ಲದು ಎಂದು ಹೇಳಿದರು.

ಬದಲಾಗುತ್ತಿರುವ ಜಾಗತಿಕ ಅಗತ್ಯಗಳಿಗೆ ಮತ್ತು ದೇಶೀಯ ಬೇಡಿಕೆಗಳಿಗೆ ತಕ್ಕಂತೆ ಕೇಂದ್ರ ಸರ್ಕಾರವು ನೀತಿಗಳನ್ನು ರೂಪಿಸುತ್ತಾ ಸದಾ ಕಾಲ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದೆ. ಈ ನಿಟ್ಟಿನಲ್ಲಿ ಪಿಎಂ ಇ ಡ್ರೈವ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ಬಲಪಡಿಸಲಾಗಿದೆ ಎಂದು ಸಚಿವರು ಒತ್ತಿ ಹೇಳಿದರು.

ಅಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನವು ನಡೆಯುತ್ತಿದೆ. ಯುವಜನರ ಬೇಡಿಕೆಗಳಿಗೆ ಅನುಗುಣವಾಗಿ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಶಕ್ತಿ ತುಂಬುವುದು ರಾಷ್ಟ್ರೀಯ ದೃಷ್ಟಿಕೋನವಾಗಿದೆ ಎಂದು ಪ್ರತಿಪಾದಿಸಿದ ಬೃಹತ್ ಕೈಗಾರಿಕೆ ಸಚಿವರು; ಎಲೆಕ್ಟ್ರಿಕ್ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದರೂ, ವಾಣಿಜ್ಯ ಸಾರಿಗೆಯನ್ನು ಈ ಮಗ್ಗುಲಿನತ್ತ ಹೊರಳಿಸುವುದು ಅಷ್ಟೇ ಮುಖ್ಯವಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಅರಿತಿದೆ ಎಂದರು.

ಭಾರತದ ಬೆಳೆಯುತ್ತಿರುವ ಆರ್ಥಿಕತೆಗೆ ತಕ್ಕಂತೆ ಸರಕು ಸಾಕಣೆ ಕ್ಷೇತ್ರವನ್ನು ಎಲೆಕ್ಟ್ರಿಕ್ ವಾಹನ ಕ್ಷೇತ್ರದೊಂದಿಗೆ ಅನುಸಂಧಾನ ಮಾಡುವುದರಿಂದ ಸಾಗಣೆಯು ಸುಲಭವಾಗುತ್ತದೆ. ಇಂಧನ ಕ್ಷಮತೆಯಿಂದ ಆರ್ಥಿಕ ಬೆಳವಣಿಗೆಯ ವೇಗವು ಹೆಚ್ಚಾಗುತ್ತದೆ. ಪರಿಸರ ಸಂರಕ್ಷಣೆಯ ಜೊತೆಗೆ ನಾವಿನ್ಯತೆ ಮತ್ತು ತಂತ್ರಜ್ಞಾನ ಉನ್ನತೀಕರಣಕ್ಕೆ ಹೆಚ್ಚು ಅವಕಾಶಗಳು ಒದಗಿ ಬರಲಿವೆ ಎಂದು ಅವರು ಹೇಳಿದರು.

ಎರಡು ಸಂಸ್ಥೆಗಳ ಪ್ರಮುಖರಾದ ಸುಶಾಂತ್ ನಾಯಕ್, ರಾಜೇಶ್ ಕೌಲ್, ಅಭಿನವ್ ಸಿಂಗ್, ಕಿಶೋರ್ ಲಂಕಾ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share

You cannot copy content of this page