ಸಮಗ್ರ ಸುದ್ದಿ

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ: ಸಿಎಂ ಡಿ.ಕೆ. ಶಿವಕುಮಾರ್ | ತಾರತಮ್ಯವಿಲ್ಲದೆ ಎಲ್ಲಾ ಕ್ಷೇತ್ರಗಳಿಗೆ ಅನುದಾನ

Share

ಬೆಂಗಳೂರು: ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು 40 ಕಿ.ಮೀ ಉದ್ದದ ದ್ವಿಪಥ ಸುರಂಗ ಮಾರ್ಗ, 120 ಕಿ.ಮೀ ಉದ್ದದ ಎತ್ತರಿಸಿದ ಕಾರಿಡಾರ್, 1500 ಕಿ.ಮೀ ಆರ್ಟಿಲರಿ ಮತ್ತು ಸಬ್ ಆರ್ಟಿಲರಿ ರಸ್ತೆಗಳ ಉನ್ನತೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಅವರು ಮಂಗಳವಾರ ಅಧಿಕೃತ ನಿವಾಸ ಕೃಷ್ಣಾದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿದರು.

ದೇಶದ ಬೇರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಜನಸಂಖ್ಯಾ ದರ ಮತ್ತು ವಾಹನಗಳ ಹೆಚ್ಚಳ ದರ ಹೆಚ್ಚಿದೆ. ಆದರೆ ರಸ್ತೆಗಳ ಸಾಮರ್ಥ್ಯ ಬೇರೆ ನಗರಗಳಿಗಿಂತ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ.

ಸಂಚಾರ ವ್ಯವಸ್ಥೆ ಸುಗಮಗೊಳಿಸಲು 40 ಕಿ.ಮೀ ದ್ವಿಪಥ ಸುರಂಗ ನಿರ್ಮಾಣ, ಹೆಬ್ಬಾಳದಲ್ಲಿ 2ಕಿಮೀ ಅಲ್ಪದೂರದ ಸುರಂಗ ಕಾಮಗಾರಿ ಕೈಗೊಂಡಿದ್ದೇವೆ. ಇದರಲ್ಲಿ 16 .5 ಕಿಮೀ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣಕ್ಕೆ 17,780 ಕೋಟಿ ರೂ. ವೆಚ್ಚವಾಗಲಿದ್ದು, ಸರ್ಕಾರ ಇದರಲ್ಲಿ 7ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಲಿದೆ. 21 ಕಿ.ಮೀ ಉದ್ದದ ಪೂರ್ವ- ಪಶ್ಚಿಮ ಕಾರಿಡಾರ್ನಲ್ಲಿ ಎರಡು ಆಗಮನ ದ್ವಾರ ಇರಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ 23,165 ಕೋಟಿ ಬಂಡವಾಳ ವೆಚ್ಚದಲ್ಲಿ120 ಕಿಮೀ ಎತ್ತರಿಸಿದ ಕಾರಿಡಾರ್ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದರಲ್ಲಿ ನಾಲ್ಕು ಕೆಟಗರಿ ಮಾಡಲಾಗಿದ್ದು, 10 ಕಿಮೀ ಕಡಿಮೆ ಇರುವ ಕಾರಿಡಾರ್ಗಳಲ್ಲಿ ಟೋಲ್ ಇರುವುದಿಲ್ಲ ಎಂದರು.

500 ಕಿ.ಮೀ ಹೊಸ ರಸ್ತೆ ಸಂಪರ್ಕ ನಿರ್ಮಾಣ:

ಬೆಂಗಳೂರು ನಗರದಲ್ಲಿ ಸುಮಾರು 500 ಕಿ.ಮೀ ಹೊಸ ರಸ್ತೆ ಸಂಪರ್ಕ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಚಾನೆಲ್ ಬದಿಯಲ್ಲಿ 300ಕಿಮೀ ಬಫರ್ ರಸ್ತೆ ನಿರ್ಮಾಣ, 68 ಕಿಮೀ ಬುಸಿನೆಸ್ ಕಾರಿಡಾರ್ ನಿರ್ಮಾಣ ಸೇರಿದೆ ಎಂದರು.

17 ಕಿಮೀ ಹೊರವರ್ತುಲ ರಸ್ತೆಯ ಮರು ಅಭಿವೃದ್ಧಿ, 1500 ಕಿಮೀ ಆರ್ಟಿಲರಿ ಮತ್ತು ಸಬ್ ಆರ್ಟಿಲರಿ ರಸ್ತೆಗಳ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸಧ್ಯದಲ್ಲಿಯೇ ಹೊಸದಾಗಿ ನಗರದ ಹೊರ ವಲಯದಲ್ಲಿ 18 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗುವುದು.

ರಾಜ್ಯ ಸರ್ಕಾರ ಹೊರ ವರ್ತುಲ ರಸ್ತೆ ವ್ಯಾಪ್ತಿಯಲ್ಲಿ 37 ಕಿಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಕೇವಲ 11ಕಿಮೀ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯವಿಲ್ಲ

ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಅಗತ್ಯ ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಬಿಡಬ್ಲುಎಸ್ಎಸ್ಬಿ ಮೂಲಕ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಕಾರ್ಯ ಕೈಗೊಂಡಿದ್ದೇವೆ ಎಂದರು.

ಮುಂದಿನ 10 ವರ್ಷಗಳ ಯೋಜನೆ:

ಬೆಂಗಳೂರು ನಗರ ನಿರ್ಮಾಣವಾಗಿ 2027ರಲ್ಲಿ 500 ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲಾಗಿದೆ.

ಹೊಸ ಯೋಜನೆಗಳಿಗೆ ಸುಮಾರು 1 ಲಕ್ಷ ಕೋಟಿ ಬೇಕು. ಬೆಂಗಳೂರು ನಗರದ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶ. ಆದ್ಯತೆ ಮೇರೆಗೆ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ರಸ್ತೆ ನಿರ್ಮಾಣ ಮಾತ್ರ ಪರಿಹಾರವಲ್ಲ. ಸಾರ್ವಜನಿಕ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ. ಬಿಎಂಟಿಸಿ, ಮೆಟ್ರೋ, ಸಬ್ ಅರ್ಬನ್ ರೈಲ್ವೇ ಸಂಪರ್ಕ ಹೆಚ್ಚಿಸಲು ಆದ್ಯತೆ ನೀಡಿದ್ದೇವೆ ಎಂದರು.

ಪ್ರಸ್ತುತ 96 ಕಿಮೀ ಮೆಟ್ರೋ ಸಂಪರ್ಕ ಇದ್ದು, 2027ರ ಅವಧಿಗೆ ಇದನ್ನು 170 ಕಿಮೀ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಪ್ರಸ್ತುತ 7000 ಬಸ್ಗಳಿದ್ದು, ಇದಕ್ಕೆ ಇನ್ನೂ 4500 ಹೊಸ ಬಸ್ ಸೇರ್ಪಡೆಗೊಳಿಸಲಿದ್ದೇವೆ. ಸಬ್ ಅರ್ಬನ್ ರೈಲು ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು, 2030ರ ವೇಳೆಗೆ 150 ಕಿಮೀ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದೇವೆ.

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಪೂರೈಸಲು ಕಾವೇರಿ 6 ನೇ ಹಂತ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಬಿಎ ಹೊರಗಡೆ 65ಗ್ರಾಮ ಪಂಚಾಯತ್ ಈಗಾಗಲೇ ನಗರೀಕರಣವಾಗಿದೆ. ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಅವುಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಹಂತ ಹಂತವಾಗಿ ಈ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಯೋಜನೆ ರೂಪಿಸಿದ್ದೇವೆ. ಹಾಗೂ ರಸ್ತೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.

ಕಸ ವಿಲೇವಾರಿ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಬೆಂಗಳೂರು ನಗರದ ಕಸ ನಿರ್ವಹಣೆ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು 27 ಕ್ಷೇತ್ರಗಳಲ್ಲಿ ಕಸ ನಿರ್ವಹಣೆಗೆ 33ಪ್ಯಾಕೇಜ್ ಮಾಡಲಾಗಿತ್ತು. ಈಗ 21 ಪ್ಯಾಕೇಜ್ಗೆ ಟೆಂಡರ್ ತೆರೆಯಲಾಗಿದೆ. ಎಲ್ಲಾ ಅರ್ಹ ಟೆಂಡರ್ದಾರರಿಗೆ ಸಧ್ಯದಲ್ಲಿಯೇ ಕಾರ್ಯಾದೇಶ ನೀಡಲಾಗುವುದು.

ಹೊಸ ಟೆಂಡರ್ ನಲ್ಲಿ ವಾಹನ ಸಾಮರ್ಥ್ಯದ ಆಧಾರದಲ್ಲಿ 9ಸಾವಿರ ಟನ್ ವರೆಗೆ ಕಸ ಸಂಗ್ರಹಿಸಲು ಸಾಧ್ಯವಾಗಲಿದೆ. ಎಲ್ಲಾ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಹೊಸ ವಾಹನವನ್ನು ಬಳಸಬೇಕಾಗಿದ್ದು, ಹಳೆಯ ವಾಹನ ಬಳಸುವಂತಿಲ್ಲ. ಕಸ ನಿರ್ವಹಣೆಯಲ್ಲಿ ನಿರ್ಲಕ್ಷ ತೋರುವ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


Share

You cannot copy content of this page