ಸಮಗ್ರ ಸುದ್ದಿ

ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ; ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ ನಿರೀಕ್ಷೆ

Share

ಬೆಂಗಳೂರು:ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿಯಲ್ಲಿ ಪರಿಶೀಲನೆ ನಡೆಸಿದ ತಜ್ಞರ ತಂಡ, ಸ್ಮಾರಕಗಳ ಒಟ್ಟಾರೆ ಸಂರಕ್ಷಣಾ ಸ್ಥಿತಿ ಹಾಗೂ ರಾಜ್ಯ ಸರ್ಕಾರ, ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಇತರೆ ಸಂಸ್ಥೆಗಳ ನಡುವಿನ ಸಮನ್ವಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ತಂಡದ ಅಂತಿಮ ಮಿಷನ್ ವರದಿ ಡಿಸೆಂಬರ್ ಮಧ್ಯಭಾಗದಲ್ಲಿ ಸಲ್ಲಿಸಲಿದೆ.

ಕ್ಷೇತ್ರ ಪರಿಶೀಲನೆಯ ಬಳಿಕ ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ಯುನೆಸ್ಕೋ ತಜ್ಞರು ತಮ್ಮ ಪ್ರಾಥಮಿಕ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡರು.

ಹಂಪಿಯ ಸಂರಕ್ಷಣಾ ಕ್ರಮಗಳನ್ನು ಶ್ಲಾಘಿಸಿದ ತಂಡ, ಪ್ರಾಥಮಿಕವಾಗಿ ಸ್ಥಳೀಯ ಸಮುದಾಯದ ಹೆಚ್ಚಿನ ಭಾಗವಹಿಸುವಿಕೆ, HWHAMAಗೆ ತಜ್ಞ ಮಾನವ ಸಂಪನ್ಮೂಲ ಮತ್ತು ಹಣಕಾಸಿನ ಬಲ, ಪರಂಪರೆ ನಿರ್ವಹಣೆಯಲ್ಲಿ ಆಡಳಿತಾತ್ಮಕ ನಿರಂತರತೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅಗತ್ಯವಿದೆ ಎಂದು ಸೂಚಿಸಿದೆ.

ಕೀನ್ಯಾದ ಯುನೆಸ್ಕೋ ತಜ್ಞ ಪ್ರೊ. ಜಾರ್ಜ್ ಅಬುಂಗು ಹಂಪಿಯನ್ನು ಜಾಗತಿಕ ಮಹತ್ವದ ಅಪೂರ್ವ ಪರಂಪರೆ ತಾಣವೆಂದು ಬಣ್ಣಿಸಿ, ಸ್ಮಾರಕಗಳ ಸ್ಥಿತಿ ಮತ್ತು ನಡೆಯುತ್ತಿರುವ ಸಂರಕ್ಷಣಾ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ತಾವು ತನಿಖಾಧಿಕಾರಿಗಳಾಗಿ ಅಲ್ಲ, “ಸ್ನೇಹಿತರು ಮತ್ತು ಸ್ಮಾರಕದ ಅಭಿವೃದ್ದಿಯ ಪಾಲುದಾರರು” ಆಗಿ ಭೇಟಿ ಮಾಡಿದ್ದೇವೆ ಎಂದ ಅವರು, ಹಂಪಿಯ ಭವಿಷ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯವೇ ಕೇಂದ್ರದಲ್ಲಿರಬೇಕು ಎಂದು ಒತ್ತಿ ಹೇಳಿದರು.

“ನನ್ನನ್ನು ಹೊರತುಪಡಿಸಿ ನನಗಾಗಿ ಏನನ್ನಾದರೂ ಮಾಡಿದರೆ, ಅದು ನನ್ನ ವಿರುದ್ಧ ಮಾಡಿದಂತೆಯೇ,” ಎಂದ ಅವರು, ಸ್ಥಳೀಯರ ಭಾಗವಹಿಸುವಿಕೆ ಇಲ್ಲದೆ ಸುಸ್ಥಿರ ಪರಂಪರೆ ಸಂರಕ್ಷಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಪಾನ್‌ನ ಯುನೆಸ್ಕೋ ತಜ್ಞ ಪ್ರೊ. ಇಚಿತಾ ಶಿಮೋಡಾ ಹಂಪಿಯನ್ನು ಕೇವಲ ಸ್ಮಾರಕಗಳ ಸಮೂಹವಾಗಿ ಅಲ್ಲ, *ಜೀವಂತ ಸಾಂಸ್ಕೃತಿಕ ವಿಶ್ವ ಪ್ರವಾಸಿ ತಾಣವಾಗಿ ನೋಡಬೇಕು ಎಂದರು. ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಸ್ಥಳೀಯರ ದೈನಂದಿನ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ಎಂದು ಹೇಳಿದರು.

ಅಭಿವೃದ್ಧಿ ಆಯುಕ್ತೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, “ಹಂಪಿಯ Outstanding Universal Value ಅನ್ನು ಯಾವುದೇ ರಾಜಿಯಿಲ್ಲದೆ ಕಾಪಾಡುವುದು ಸರ್ಕಾರದ ಬದ್ಧತೆ. ಸಂರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ, ತಜ್ಞರ ಮಾರ್ಗದರ್ಶನ ಮತ್ತು ಬಲವಾದ ಸಂಸ್ಥಾತ್ಮಕ ವ್ಯವಸ್ಥೆ ಅಗತ್ಯ,” ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿ ಪರಂಪರೆ ಅಥವಾ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆ ಮಾಡುವ ಮೂಲಕ ಆಗಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು. ಮುಂದಿನ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅವಿಭಾಜ್ಯ ಅಂಗವಾಗಲಿದೆ,” ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ASI ವಿಶ್ವ ಪರಂಪರೆ ತಾಣಗಳ ಹೆಚ್ಚುವರಿ ಮಹಾನಿರ್ದೇಶಕಿ ಜಾಹ್ನವಿ ಶರ್ಮಾ, ವಿಜಯನಗರ ಜಿಲ್ಲಾಧಿಕಾರಿ ಹಾಗೂ HWHAMA ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ ಮತ್ತು ಪ್ರವಾಸೋದ್ಯಮ ಆಯುಕ್ತ ಶಿವಪ್ರಸಾದ್ ಉಪಸ್ಥಿತರಿದ್ದರು. ASI, ಕೊಪ್ಪಳ ಜಿಲ್ಲಾಡಳಿತ, HWHAMA ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳೂ ಭಾಗವಹಿಸಿದ್ದರು.


Share

You cannot copy content of this page