ಸಮಗ್ರ ಸುದ್ದಿ

ವಿಧಾನ ಪರಿಷತ್ ಚುನಾವಣೆ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೆ. ಎಂ. ಸುರೇಶ ಗೆಲುವು

Share

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಕೆ .ಎಂ. ಸುರೇಶ ಅವರು ಚುನಾಯಿತರಾಗಿದ್ದಾರೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದ್ದಾರೆ.

ಚುನಾಯಿತ ಅಭ್ಯರ್ಥಿಗೆ ಪ್ರಮಾಣ ಪತ್ರವನ್ನು ವಿತರಿಸಿದ ಅವರು, ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಅ 27 ಅಂದರೆ ನೆನ್ನೆ ಪ್ರಾರಂಭವಾದ ಒಟ್ಟು 10 ಸುತ್ತುಗಳ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಪೂರ್ಣಗೊಂಡಿತು ಎಂದು ತಿಳಿಸಿದರು. ಮತ ಎಣಿಕೆ ಅಂತ್ಯದಲ್ಲಿ ಕೆ ಎಂ ಸುರೇಶ ಅವರು 66,020 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶಶಿಹುಲಿಕುಂಟೆಮಠ ಅವರಿಂದ 23,098 ಅಂತರದ ಮುನ್ನಡೆಯನ್ನು ಪಡೆದು ಚುನಾಯಿತರಾಗಿದ್ದಾರೆ ಎಂದವರು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶಶಿ ಹುಲಿಕುಂಟೆ ಅವರು 42,922 ಮತಗಳನ್ನು ಪಡೆದರೆ, ಸರ್ವ ಜನತಾ ಪಾರ್ಟಿ ಅಭ್ಯರ್ಥಿಯಾದ ಸಿ.ಜಿ. ಪಾಟೀಲ್ 162 ಮತಗಳನ್ನು ಪಡೆದಿದ್ದಾರೆ ಎಂದ ಅವರು, ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ 156, ಚಿಕ್ಕರಾಜು ಎಸ್. ವೈ ಯಾದವ್ 377, ಲಕ್ಷ್ಮಯ್ಯ. ಆರ್ 387, ಲಕ್ಷ್ಮಿಕಾಂತ ಎಸ್. ಯಾದವ್ 369, ಶಶಿ ಹುಲಿಕಟ್ಟಿ 449, ಸೈಯದ್ ಅಫಕ್ ಅಹ್ಮದ್ 113 ಹಾಗೂ ಅಡ್ವಕೇಟ್ ಬಾರಿದ್ ಅವರು 1,107 ಮತಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 1,12,062 ಮತಗಳು ಮಾನ್ಯವಾಗಿದ್ದು, 20,076 ಮತಗಳು ಅಮಾನ್ಯ ಎಂದು ತಿರಸ್ಕೃತಗೊಂಡಿದೆ. ಅಕ್ಟೋಬರ್ 23 ರಂದು ನಡೆದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 1,83,888 ಮತದಾರರ ಪೈಕಿ 1,35,321 ಮಂದಿ ಮತ ಚಲಾಯಿಸಿದ್ದು, ಶೇ.73.58 ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 78,070 ಪುರುಷರು ಹಾಗೂ 57,251 ಮಹಿಳೆಯರು ಇದ್ದರು ಎಂದು ಬಿಸ್ವಾಸ್ ಅವರು ತಿಳಿಸಿದ್ದಾರೆ.


Share

You cannot copy content of this page