ಸಮಗ್ರ ಸುದ್ದಿ

ಬೆಂಗಳೂರು–ಹೊಸೂರು ರೈಲು ಮಾರ್ಗ ದ್ವಿಪಥಿಕರಣ ಕಾಮಗಾರಿಯಲ್ಲಿ ಕೆ-ರೈಡ್ ಮಹತ್ವದ ಸಾಧನೆ | ರಾಷ್ಟ್ರೀಯ ಹೆದ್ದಾರಿ–44ರ ಸಂಚಾರ ಸುಗಮಗೊಳಿಸಲು ಮಹತ್ವದ ಹೆಜ್ಜೆ

Share

ಬೆಂಗಳೂರು: ಬೆಂಗಳೂರು–ಹೊಸೂರು ನಡುವಿನ 48 ಕಿ.ಮೀ. ರೈಲು ಮಾರ್ಗ ದ್ವಿಪಥಿಕರಣ ಕಾಮಗಾರಿಯಲ್ಲಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮಹತ್ವದ ಸಾಧನೆ ಮಾಡಿದೆ. ಚಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–44ರ ಮೇಲಿನ ರೈಲ್ವೆ ಸೇತುವೆಗೆ ತಲಾ 61 ಮೀಟರ್ ಉದ್ದದ ಎರಡು ಬೃಹತ್ ಉಕ್ಕಿನ ಗರ್ಡರ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ತಲಾ 245 ಮೆಟ್ರಿಕ್ ಟನ್ ತೂಕದ ಈ ಗರ್ಡರ್‌ಗಳಲ್ಲಿ ಮೊದಲನೆಯದನ್ನು ಅಕ್ಟೋಬರ್ 10ರಂದು ಹಾಗೂ ಎರಡನೆಯದನ್ನು ಅಕ್ಟೋಬರ್ 28ರಂದು ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ರೈಲು ಮಾರ್ಗ ದ್ವಿಪಥಿಕರಣ ಯೋಜನೆಗಾಗಿ ಕೆ-ರೈಡ್ ಅಳವಡಿಸಿರುವ ಅತ್ಯಂತ ಉದ್ದದ ಗರ್ಡರ್‌ಗಳು ಇವಾಗಿವೆ.

ವಿಶೇಷ ವಿಂಚ್ ತಂತ್ರಜ್ಞಾನ ಬಳಸಿ, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಹೆದ್ದಾರಿ ಸಂಚಾರಕ್ಕೆ ಕನಿಷ್ಠ ಅಡಚಣೆಯಾಗುವಂತೆ ಈ ಸಂಕೀರ್ಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಹೆದ್ದಾರಿ ಸಂಚಾರಕ್ಕೆ ಅನುಕೂಲ

ಹೊಸ ಸೇತುವೆಯ ವಿಶೇಷತೆಯೆಂದರೆ, ಹೆದ್ದಾರಿಯ ಮಧ್ಯಭಾಗದಲ್ಲಿ ಹೆಚ್ಚುವರಿ ಆಧಾರಸ್ತಂಭದ ಅಗತ್ಯವಿಲ್ಲ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ.

ಉಳಿದ ರೈಲ್ವೆ ಕಾಮಗಾರಿಗಳು ಹಾಗೂ ಹೆದ್ದಾರಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ, ರಾಷ್ಟ್ರೀಯ ಹೆದ್ದಾರಿ–44ರ ಉದ್ದೇಶಿತ 12 ಪಥಗಳ ವಿಸ್ತರಣೆಗೆ ಈ ಸೇತುವೆ ಪೂರಕವಾಗಲಿದೆ. ಇದರಿಂದ ಬೆಂಗಳೂರು–ಹೊಸೂರು ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ, ಪ್ರಯಾಣಿಕರು ಹಾಗೂ ಸರಕು ಸಾಗಣೆ ವಾಹನಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಕೆ-ರೈಡ್/ಬಿ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಮಾತನಾಡಿ, “ಎರಡು ಬೃಹತ್ ಗರ್ಡರ್‌ಗಳ ಯಶಸ್ವಿ ಅಳವಡಿಕೆ ಬೆಂಗಳೂರು–ಹೊಸೂರು ರೈಲು ಮಾರ್ಗ ದ್ವಿಪಥ ಯೋಜನೆಯ ಮಹತ್ವದ ಮೈಲಿಗಲ್ಲಾಗಿದೆ. ಈ ಸೇತುವೆಯಿಂದ ಹೆದ್ದಾರಿ ಸಂಚಾರ ಸುಗಮವಾಗುವುದರ ಜೊತೆಗೆ ರೈಲು ಸಂಚಾರದ ಸಾಮರ್ಥ್ಯವೂ ಹೆಚ್ಚಲಿದೆ. ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಗೆ ಕೆ-ರೈಡ್ ಬದ್ಧವಾಗಿದೆ,” ಎಂದು ತಿಳಿಸಿದರು.

ಸಂಬಂಧಿತ ರೈಲ್ವೆ ಹಾಗೂ ಇತರೆ ಕಾಮಗಾರಿಗಳನ್ನು ಜನವರಿ 2027ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.


Share

You cannot copy content of this page