ಸಮಗ್ರ ಸುದ್ದಿ

ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ಚಾಲನೆ

Share

ಹಾಸನ : ವರ್ಷಕ್ಕೆ ಒಮ್ಮೆ ದರ್ಶನ ಕರುಣಿಸುವ ಹಾಸನದ ಹದಿ ದೇವತೆ ಶ್ರೀ ಹಾಸನಾಂಬ ಉತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ.

ನ.11 ರವರೆಗೆ ನಡೆಯಲಿರುವ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ನಿನ್ನೆ ಚಾಲನೆ ದೊರೆತಿದ್ದು ಮಧ್ಯಾಹ್ನ 12 : 30 ಗಂಟೆಗೆ ಸರಿಯಾಗಿ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಯಿತು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ, ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್, ಸಂಸದ ಶ್ರೇಯಸ್‌ಪಟೇಲ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಡಿಸಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ, ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಇಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ:

ಇಂದು ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.

ಹಾಸನ ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನೋತ್ಸವದ ಮೊದಲ ದಿನವೇ ಭಕ್ತರ ಮಹಾಪೂರವೇ ಹರಿದುಬಂದಿದ್ದು, ದೇವಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಹಾಸನದತ್ತ ಧಾವಿಸಿದ್ದಾರೆ.

ಇಂದು ದೇವಿಯ ವಿಶೇಷ ಅಲಂಕಾರದ ದರ್ಶನ ಪಡೆಯುವುದು ಶುಭ ಎಂಬ ನಂಬಿಕೆಯಿಂದ ಮುಂಜಾನೆ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 6 ಗಂಟೆಗೆ ಸಾರ್ವಜನಿಕ ದರ್ಶನ ಆರಂಭವಾಗುತ್ತಿದ್ದಂತೆಯೇ ದೇವಾಲಯದ ಸುತ್ತಮುತ್ತ ಭಕ್ತರಿಂದ ಕಿಕ್ಕಿರಿದು ತುಂಬಿತ್ತು.

ಹಾಸನಾಂಬ ದೇವಿಯ ಇತಿಹಾಸದಲ್ಲಿಯೇ ಮೊದಲ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ಇದೇ ಮೊದಲು ಎನ್ನಲಾಗಿದ್ದು, ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದ ಹಿನ್ನೆಲೆಯಲ್ಲಿ ಧರ್ಮ ದರ್ಶನದ ಸಾಲು ನಿಧಾನವಾಗಿ ಸಾಗಿತು. ಗಂಟೆಗಟ್ಟಲೆ ಕಾದು ನಿಂತರೂ ತಾಯಿಯ ದರ್ಶನ ಪಡೆಯುವ ಭಕ್ತರ ಉತ್ತಾಹ ಮಾತ್ರ ಕುಂದಿರಲಿಲ್ಲ. ಮಕ್ಕಳು ಸೇರಿದಂತೆ ಕುಟುಂಬ ಸಮೇತ ಆಗಮಿಸಿದ್ದ ಭಕ್ತರು ದರ್ಶನ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಕಾಯುವಂತೆ ಆಯಿತು.

ಧರ್ಮ ದರ್ಶನದ ಸಾಲು ಸಂಪೂರ್ಣ ಭರ್ತಿಯಾಗಿದ್ದರೆ, 1,000 ರೂ. ವಿಶೇಷ ದರ್ಶನದ ಸಾಲು ಕೂಡ ಭಕ್ತರಿಂದ ತುಂಬಿತ್ತು. 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಮೊದಲ ದಿನವೇ ನಾಲ್ಕೈದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿರುವ ಅಂದಾಜನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ವ್ಯಕ್ತಪಡಿಸಿದರು.

ದೇವಾಲಯದ ಸುತ್ತಮುತ್ತ ಭಕ್ತರ ದಟ್ಟಣೆ ಹೆಚ್ಚಿದ್ದರೂ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತಿರುವೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿ ಹೆಚ್ಚುವರಿ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಇಂದು ರಾತ್ರಿ 7 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆ ವರೆಗೆ ಹಾಸನಾಂಬ ದರ್ಶನಕ್ಕೆ ಅವಕಾಶ ಇರುವುದಿಲ್ಲ ನಾಳೆ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.


Share

You cannot copy content of this page