ಸಮಗ್ರ ಸುದ್ದಿ

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತ: ಕರ್ನಾಟಕದ ಐವರು ಯಾತ್ರಿಕರು ಹಾಗೂ ಪೈಲಟ್ ಸಾವು – ರಕ್ಷಣಾ ಕಾರ್ಯ ಹಾಗೂ ಮೃತದೇಹ ತರಲು ರಾಜ್ಯ ಸರ್ಕಾರದಿಂದ ಸಮನ್ವಯ

Share

ಬೆಂಗಳೂರು:ಉತ್ತರಾಖಂಡದ ಬದರಿನಾಥದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ (Trans Bharat Aviation) ಸಂಸ್ಥೆಗೆ ಸೇರಿದ ಸಿವಿಲ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಸುಮಾರು 2:00 ಗಂಟೆಗೆ ಹಾಥಿ ಪರ್ವತ (Hathi Parvat) ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಕರ್ನಾಟಕದ ಐವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಸೇರಿದಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮಾಹಿತಿ ನೀಡಿದೆ.

​ದುರಂತದ ಮಾಹಿತಿ ದೊರೆಯುತ್ತಿದ್ದಂತೆಯೇ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರತೀಯ ಸೇನೆ, ಎಸ್‌ಡಿಆರ್‌ಎಫ್ (SDRF), ಐಟಿಬಿಪಿ (ITBP), ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪಡೆಗಳ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ.

​ರಕ್ಷಣಾ ತಂಡಗಳು ಪೈಲಟ್ ಸೇರಿದಂತೆ ಮೃತಪಟ್ಟ ಎಲ್ಲಾ ಆರು ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆದಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಜೋಶಿಮಠಕ್ಕೆ (Joshimath) ರವಾನಿಸಲಾಗುತ್ತಿದೆ.

​ಮೃತರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಕರ್ನಾಟಕಕ್ಕೆ ತರಲು ಗೌರವಾನ್ವಿತ ಮುಖ್ಯಮಂತ್ರಿಗಳ ಕಚೇರಿ ಹಾಗೂ ಕರ್ನಾಟಕ ವಿಪತ್ತು ಪರಿಹಾರ ಆಯುಕ್ತರು ಉತ್ತರಾಖಂಡ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೊತೆಗೆ, ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಕಚೇರಿಯು ಉತ್ತರಾಖಂಡ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸುತ್ತಿದೆ.

​ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬಗಳಿಗೆ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ಮತ್ತು ಸಹಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಇಲಾಖೆ ಕೆ.ಎಸ್.ಡಿ.ಎಂ.ಎ (KSDMA) ಹಾಗೂ ವಿಪತ್ತು ನಿರ್ವಹಣೆ (DM) ಆಯುಕ್ತರಾದ ಹೊನ್ನಾಂಬ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page