ಸಮಗ್ರ ಸುದ್ದಿ

ಆಟೋಮೊಬೈಲ್ ಟೆಸ್ಟಿಂಗ್ ಏಜೆನ್ಸಿಗಳ ತಾಂತ್ರಿಕ ಉನ್ನತಿಗೆ ₹780 ಕೋಟಿ ಮೀಸಲು: ಸಚಿವ ಹೆಚ್.ಡಿ.ಕುಮಾರಸ್ವಾಮಿ

Share

ಪುಣೆ:ರಾಷ್ಟ್ರದ ವಿವಿಧ ಭಾಗಗಳಲ್ಲಿ ಇರುವ ಆಟೋಮೊಬೈಲ್ ಟೆಸ್ಟಿಂಗ್ ಏಜೆನ್ಸಿಗಳನ್ನು ತಾಂತ್ರಿಕವಾಗಿ ಉನ್ನತ ದರ್ಜೆಗೆ ಏರಿಸಲು ₹780 ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

ಇಲ್ಲಿನ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ, ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.

ARAI ಗೆ ₹79.96 ಕೋಟಿ ಹಂಚಿಕೆ

‘ಪಿಎಂ ಇ-ಡ್ರೈವ್’ ಯೋಜನೆಯಡಿ, ಪರೀಕ್ಷಾ ಸಂಸ್ಥೆಗಳ (Testing Agencies) ಉನ್ನತೀಕರಣಕ್ಕಾಗಿ ₹780 ಕೋಟಿಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ₹79.96 ಕೋಟಿಗಳನ್ನು ARAIಗೆ ನೀಡಲಾಗಿದೆ ಎಂದರು ಅವರು.

ವಾಹನ ಸಂಶೋಧನೆ, ಪರೀಕ್ಷೆ ಮತ್ತು ಪ್ರಮಾಣೀಕರಣ ಕ್ಷೇತ್ರದಲ್ಲಿ ದೇಶದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಎಆರ್‌ಎಐ ಸಂಸ್ಥೆಗೆ ಭೇಟಿ ನೀಡಿರುವುದು ನನಗೆ ಸಂತೋಷದ ವಿಷಯವಾಗಿದೆ ಎಂದ ಸಚಿವರು; ಎಆರ್‌ಎಐ 60 ವರ್ಷಗಳ ಸಾರ್ಥಕ ಪಯಣವನ್ನು ಮುಂದುವರಿಸಿದ ನಿಟ್ಟಿನಲ್ಲಿ ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಮೈಲುಗಲ್ಲುಗಳನ್ನು ಸೃಷ್ಟಿಸಲಿದೆ ಎಂದರು ಸಚಿವರು.

ಎಆರ್‌ಎಐ ಸಂಶೋಧನೆ, ಪರೀಕ್ಷೆ ಮತ್ತು ಕೌಶಲ್ಯ ಅಭಿವೃದ್ಧಿಯ ಕಡೆಗೆ ದೃಢವಾದ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ, ಭಾರತದ ಸಾರಿಗೆ ಪೂರಕ ವ್ಯವಸ್ಥೆಯು ದೊಡ್ಡ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಕಳೆದ ಆರು ದಶಕಗಳಲ್ಲಿ, ಈ ಪರಿವರ್ತನೆಯನ್ನು ಬೆಂಬಲಿಸುವಲ್ಲಿ ಎಆರ್‌ಎಐ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಹೇಳಿದರು.

ವಾಹನ ಪ್ರಮಾಣೀಕರಣ ಮತ್ತು ಇಂಗಾಲ ಹೊರಸೂಸುವಿಕೆ ತಡೆಯುವ ತಂತ್ರಜ್ಞಾನಗಳಿಂದ ಹಿಡಿದು, ಎಲೆಕ್ಟ್ರಿಕ್ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳವರೆಗೆ ಭಾರತದ ತಾಂತ್ರಿಕ ಪ್ರಗತಿಗೆ ಎಆರ್‌ಎಐ ನಿರಂತರವಾಗಿ ಮಹತ್ವದ ಕೊಡುಗೆ ನೀಡುತ್ತಿದೆ. ಹೊಸ ಸೌಲಭ್ಯಗಳ ಉದ್ಘಾಟನೆ ಮತ್ತು ವಿವಿಧ ಉಪಕ್ರಮಗಳ ಪ್ರಾರಂಭವು ಸುರಕ್ಷಿತ, ಸ್ವಚ್ಛ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಎಆರ್‌ಎಐ ಹೊಂದಿರುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನುಡಿದರು.

ಸಂಶೋಧನೆ, ಅಭಿವೃದ್ಧಿ, ಪರೀಕ್ಷೆ, ಪ್ರಮಾಣೀಕರಣ ಮತ್ತು ನಾವೀನ್ಯತೆಯನ್ನು ಬೆಂಬಲಿಸುವ ಜಾಗತಿಕ ದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿಸುವ ಮಹತ್ವವನ್ನು ನಾವು ಅರಿತಿದ್ದೇವೆ. ಅದಕ್ಕಾಗಿ ಕೇಂದ್ರವು ‘ಕ್ಯಾಪಿಟಲ್ ಗೂಡ್ಸ್ ಸ್ಕೀಮ್’ (ಬಂಡವಾಳ ಸರಕು ಯೋಜನೆ) ಮತ್ತು ‘ಪಿಎಂ ಇ-ಡ್ರೈವ್’ (PM E-DRIVE) ಯೋಜನೆಯಂತಹ ಉಪಕ್ರಮಗಳನ್ನು ಬೃಹತ್ ಕೈಗಾರಿಕೆ ಸಚಿವಾಲಯವು ಜಾರಿಗೆ ತಂದಿದೆ. ಈ ಯೋಜನೆಗಳು ‘ಆತ್ಮನಿರ್ಭರ ಭಾರತ’ದ ಗುರಿಗಳನ್ನು ಸಾಧಿಸಲು ನೇರವಾಗಿ ಕೊಡುಗೆ ನೀಡುತ್ತಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಸ್ವಲ್ಪ ಸಮಯದ ಹಿಂದೆ ‘ಕ್ಯಾಪಿಟಲ್ ಗೂಡ್ಸ್ ಸ್ಕೀಮ್’ನ ಎರಡನೇ ಹಂತದ (Phase-II) ಅಡಿಯಲ್ಲಿ ಸ್ಥಾಪಿಸಲಾದ ‘ಅಡ್ವಾನ್ಸ್ಡ್ ಬ್ಯಾಟರಿ ಲ್ಯಾಬೊರೇಟರಿ’ಯನ್ನು (ಸುಧಾರಿತ ಬ್ಯಾಟರಿ ಪ್ರಯೋಗಾಲಯ) ನಾನು ಉದ್ಘಾಟಿಸಿದ್ದೇನೆ. ಇದೇ ಯೋಜನೆಯ ಅಡಿಯಲ್ಲಿ, ‘ಡಿಜಿಟಲ್ ಟ್ವಿನ್ ಸೆಂಟರ್’ (Digital Twin Centre) ಮತ್ತು ‘ಇಂಟೆಲಿಜೆಂಟ್ ವೆಹಿಕಲ್ ಟೆಕ್ನಾಲಜಿ’ಗಾಗಿ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಅನ್ನು ಸ್ಥಾಪಿಸಲು ನಾವು ಎಆರ್‌ಎಐಗೆ ಬೆಂಬಲ ನೀಡುತ್ತಿದ್ದೇವೆ ಎಂದರು ಅವರು.

ಈ ಹೊಸ ಸೌಲಭ್ಯಗಳು, ಹಾಗೂ ‘ಸ್ಕೋಡಾ ಇಂಡಿಯಾ’ (Skoda India) ಒದಗಿಸುತ್ತಿರುವ ‘ಸುಧಾರಿತ ಅಪಘಾತ ಪರೀಕ್ಷಾ ಸೌಲಭ್ಯ’ವು (Advanced Crash Test Facility) ವಾಹನಗಳ ದೇಶೀಯ ಪರೀಕ್ಷಾ ಸಾಮರ್ಥ್ಯವನ್ನು ಬಲಪಡಿಸುವುದಲ್ಲದೆ, ಭವಿಷ್ಯದ ಸುರಕ್ಷತಾ ಮಾನದಂಡಗಳಿಗೆ ಸಿದ್ಧವಾಗಲು ಸಹಕಾರಿಯಾಗುತ್ತವೆ ಎಂದು ಸಚಿವರು ನುಡಿದರು.

ಸಂಸ್ಥೆಯ ನಿರ್ದೇಶಕ ಡಾಕ್ಟರ್ ರಜಿ ಮಥಾಯಿ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.


Share

You cannot copy content of this page