ಸಮಗ್ರ ಸುದ್ದಿ

ಶಿವಮೊಗ್ಗದಲ್ಲಿ “ಕೃಷಿ ಮತ್ತು ತೋಟಗಾರಿಕೆ ಮೇಳ-2026|ಆಧುನಿಕ ತಂತ್ರಜ್ಞಾನ ಬಳಕೆಗೆ ಸಚಿವ ಟಿ ರಘುಮೂರ್ತಿ ಕರೆ

Share

ಶಿವಮೊಗ್ಗ: ಯುವಕರು ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಎಲ್ಲ ಕೃಷಿಕರು ಆಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಅ.31 ರಿಂದ ನ.2 ರವರೆಗೆ ಆಯೋಜಿಸಲಾಗಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲೆಡೆ ಬರಗಾಲವಿದ್ದು, ಮಳೆಯ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಬರ ನಿರ್ವಹಣೆಯನ್ನು ಯಾವ ರೀತಿಯಾಗಿ ಮಾಡಬೇಕು ಮತ್ತು ಕಡಿಮೆ ನೀರಿನಲ್ಲಿ ಬೆಳೆಗಳನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಈ ಮೇಳದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು ‌

ವಿಶ್ವವಿದ್ಯಾಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಣ್ಣ ರೈತರು ಮತ್ತು ದೊಡ್ಡ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳು, ತೋಟಗಾರಿಕೆ ಬೆಳೆಗಳು (ಅಡಿಕೆ, ತೆಂಗು ಇತ್ಯಾದಿ), ಹಾಗೂ ಕಡಿಮೆ ನೀರನ್ನು ಬಳಸಿ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೇಳದಲ್ಲಿ ಒದಗಿಸಲಾಗುತ್ತಿದೆ ಎಂದರು.

ವಿವಿಧ ಜಿಲ್ಲೆಗಳಿಗೆ ತಕ್ಕಂತೆ ಬೆಳೆಗಳ ಆಯ್ಕೆ: ಶಿವಮೊಗ್ಗ ಜಿಲ್ಲೆಗೆ ಅನಾನಸ್ ಸೂಕ್ತವಾದರೆ, ಚಿಕ್ಕಮಗಳೂರು ಜಿಲ್ಲೆಗೆ ಸಂಬಾರು ಬೆಳೆಗಳು ಮತ್ತು ಚಿತ್ರದುರ್ಗ ಜಿಲ್ಲೆಗೆ ಶೇಂಗಾ ಹೀಗೆ ಆಯಾ ಜಿಲ್ಲೆಯ ಹವಾಮಾನ ಹಾಗೂ ಮಣ್ಣಿನ ಗುಣಲಕ್ಷಣಗಳಿಗೆ ತಕ್ಕಂತೆ ಬೆಳೆಗಳನ್ನು ಗುರುತಿಸಿ ಅಗತ್ಯ ವಿಶೇಷತೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಮಹತ್ವ: 2023ರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಬರಗಾಲದ ಸಂದರ್ಭದಲ್ಲಿ ಜನರ, ರೈತರ ಜೀವನ ನಿರ್ವಹಣೆಗೆ ಮತ್ತು ಸ್ವಾಲಂಬಿ ಬದುಕಿಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಎಲ್ ನಿನೋ ಪರಿಣಾಮದಿಂದ ಮಳೆ ಕೊರತೆಯಾಗಿದ್ದು, ಬರಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ತಯಾರಿ ನಡೆಸಿದ್ದು ರೈತರ ಪ್ರಗತಿಗಾಗಿ ರೈತ ಚೈತನ್ಯ, ಡಿಜಿಟಲ್ ಅಗ್ರಿಟೆಕ್ ಮಿಷನ್, ಮುಖ್ಯಮಂತ್ರಿ ನೇಗಿಲಯೋಗಿ ಹಾಗೂ ಸಮಗ್ರ ಮಳೆಯಾಶ್ರಿತ ಕೃಷಿ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಕೃಷಿ ಮೇಳದಲ್ಲಿ ರೈತರಿಗಾಗಿ ಹವಾಮಾನ ಆಧಾರಿತ ಕೃಷಿ, ಹೈಟೆಕ್ ತೋಟಗಾರಿಕೆ, ಸಮಗ್ರ ಪದ್ಧತಿ, ಪುಷ್ಪ ಕೃಷಿ, ಜೇನು ವನ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಸಾವಯವ ಕೃಷಿಯ ವೈಜ್ಞಾನಿಕ ಹಾಗೂ ವೈಚಾರಿಕ ಮಾಹಿತಿಗಳು ಇಲ್ಲಿ ಲಭ್ಯವಿವೆ ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳಿಂದ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ರೈತರ ಅನುಮಾನಗಳನ್ನು ಅಲ್ಲೇ ಪರಿಹರಿಸಿಕೊಳ್ಳಲು ಸುಮಾರು 600 ಕ್ಕೂ ಹೆಚ್ಚು ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಈ ಕೃಷಿ ಮೇಳವು ನಾಲ್ಕು ದಿನಗಳವರೆಗೆ ನಡೆಯಲಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಚೇತನ್ ಕೆ., ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಕುಲಪತಿಗಳಾದ ಡಾ. ಎಮ್. ವಿ. ಧನಂಜಯ,
ಪ್ರಗತಿಪರ ರೈತರು ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರು, ತಜ್ಞರು ಹಾಜರಿದ್ದರು.


Share

You cannot copy content of this page